Asianet Suvarna News Asianet Suvarna News

500 ಕೋಟಿ ಖರ್ಚು ಮಾಡಿಲ್ಲ, ಆರೋಪ ಸುಳ್ಳು, ತನಿಖೆ ಬೇಕಿಲ್ಲ: ಕಾರಜೋಳ!

500 ಕೋಟಿ ಖರ್ಚು ಮಾಡಿಲ್ಲ: ಕಾರಜೋಳ| ಸಮಾಜ ಕಲ್ಯಾಣ ಇಲಾಖೆ ವ್ಯಯಿಸಿದ್ದು 9.4 ಕೋಟಿ| ಹಗರಣ ಆರೋಪ ಸುಳ್ಳು, ತನಿಖೆ ಬೇಕಿಲ್ಲ: ಡಿಸಿಎಂ

Karnataka DyCM Govinda Karjol Says The Allegations Made By Congress Leader Siddaramaiah Are False
Author
Bangalore, First Published Jul 25, 2020, 7:25 AM IST

ಬೆಂಗಳೂರು(ಜು.25): ‘ಕೊರೋನಾ ವೈರಸ್‌ ಸಂಬಂಧ ಸಮಾಜ ಕಲ್ಯಾಣ ಇಲಾಖೆಯಿಂದ 500 ಕೋಟಿ ರು. ಮೌಲ್ಯದ ಸಾಮಗ್ರಿ ಖರೀದಿ ಮಾಡಲಾಗಿದೆ’ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಳ್ಳಿಹಾಕಿದ್ದಾರೆ. ‘ಇಲಾಖೆಯಲ್ಲಿ ಖರ್ಚಾಗಿದ್ದು 9.40 ಕೋಟಿ ರು. ಅಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಿದ್ದರಾಮಯ್ಯ ಆಪಾದನೆ ಸತ್ಯಕ್ಕೆ ದೂರವಾಗಿದ್ದು. ಸುಳ್ಳು ಆರೋಪಕ್ಕೆ ತನಿಖೆ ಅಗತ್ಯ ಇಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಹೊಣೆ ಹೊತ್ತಿರುವ ಅವರು ಹೇಳಿದ್ದಾರೆ.

‘ಹಗರಣ ಆಗದಿದ್ದರೆ ತನಿಖೆಗೆ ಭಯವೇಕೆ? ಒಪ್ಪಲ್ಲ ಎಂದ್ರೆ ಕಳ್ಳತನ ಆಗಿದೆ ಎಂದರ್ಥ’

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ವಸತಿ ನಿಲಯ ಮಕ್ಕಳು, ಪಿಯುಸಿ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಥರ್ಮಲ್‌ ಸ್ಕಾ್ಯನಿಂಗ್‌, ಮಾಸ್ಕ್‌, ಸ್ಯಾನಿಟೈಸರ್‌ಗೆ ಖರೀದಿ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. 30 ಜಿಲ್ಲೆಗಳಲ್ಲಿ ಖರ್ಚು ಮಾಡಿರುವುದು 3.70 ಕೋಟಿ ರು. ಮತ್ತು 11,421 ಚರ್ಮ ಕುಶಲ ಕರ್ಮಿಗಳಿಗೆ 5 ಸಾವಿರ ರು. ಸಹಾಯಧನ ರೂಪದಲ್ಲಿ 5.70 ಕೋಟಿ ರು. ನೀಡಲಾಗಿದೆ. ಇಲಾಖೆಯಲ್ಲಿ ಒಟ್ಟು ಖರ್ಚು ಆಗಿರುವುದು 9.40 ಕೋಟಿ ರು. ಅಷ್ಟೇ. ಸಿದ್ದರಾಮಯ್ಯ ಅವರು ಆರೋಪಿಸಿರುವಂತೆ 500 ಕೋಟಿ ರು. ಅಲ್ಲ. ಅವರ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದರು.

ಯಾವುದಕ್ಕೆ ಎಷ್ಟುಖರ್ಚು?:

‘ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರ ಸಲುವಾಗಿ ಆಹಾರ ನೀಡುವುದರ ಜತೆಗೆ ಶುಚಿ ಕಿಟ್‌ ಕೊಡಲಾಗಿದೆ. ಈ ಸಂಬಂಧ 1.24 ಕೋಟಿ ರು. ಖರ್ಚು ಮಾಡಲಾಗಿದೆ. ಇದರಲ್ಲಿ 1.6 ಕೋಟಿ ರು. ಜಿಲ್ಲಾಡಳಿತ ಭರಿಸಿದೆ. 9 ಸಾವಿರ ರು.ಗೆ ಸ್ಕಾ್ಯನರ್‌ ಖರೀದಿಸಿಲ್ಲ. ಜಿಎಸ್‌ಟಿ ಸೇರಿದಂತೆ 4,720 ರು.ನಂತೆ ಥರ್ಮಲ್‌ ಸ್ಕಾ್ಯನರ್‌ ಖರೀದಿ ಮಾಡಲಾಗಿದೆ. ಕಾಂಗ್ರೆಸ್‌ ಆರೋಪಿಸಿದಂತೆ ಸ್ಯಾನಿಟೈಸ್‌ 500 ಎಂಎಲ್‌ ಬಾಟಲಿಗೆ 600 ರು. ಕೊಟ್ಟು ಖರೀದಿಸಿಲ್ಲ. 500 ಎಂಎಲ್‌ಗೆ 250 ರು. ನೀಡಿ ಖರೀದಿಸಿಲ್ಲ. ಪ್ರತಿ ಮಾಸ್ಕ್‌ 17.54 ರು.ನಂತೆ ಖರೀದಿ ಮಾಡಲಾಗಿದೆ. ಥರ್ಮಲ್‌ ಸ್ಕ್‌ಯಾನರ್‌, ಸ್ಯಾನಿಟೈಸರ್‌, ಮಾಸ್ಕ್‌ಗೆ ಒಟ್ಟಾರೆ 65.28 ಲಕ್ಷ ರು. ಖರ್ಚಾಗಿದೆ. ಇದರಲ್ಲಿ ಥರ್ಮಲ್‌ ಸ್ಕಾ್ಯನರ್‌ಗೆ 42.55 ಲಕ್ಷ ರು. ಖರ್ಚಾಗಿದೆ. ಸ್ಯಾನಿಟೈಸರ್‌ಗೆ 55 ಸಾವಿರ ರು. ಮಾತ್ರ ಖರ್ಚಾಗಿದೆ’ ಎಂದು ಮಾಹಿತಿ ನೀಡಿದರು

ಕೈ v/s ಬಿಜೆಪಿ ‘ಕೊರೋನಾ ಕದನ’!2000 ಕೋಟಿ ಹಗರಣ: ಸಿದ್ದು | ಸುಳ್ಳು ಆರೋಪ: ಬಿಜೆಪಿ ತಿರುಗೇಟು

‘ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರ ಸಲುವಾಗಿ 53.43 ಲಕ್ಷ ರು. ವೆಚ್ಚ ಮಾಡಲಾಗಿದೆ. ಇದರಲ್ಲಿ ಇಲಾಖೆ 43.13 ಲಕ್ಷ ಮತ್ತು ಜಿಲ್ಲಾಡಳಿತ 10.30 ಲಕ್ಷ ರು. ಭರಿಸಿದೆ. ಇದನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಇದಕ್ಕಾಗಿ ತನಿಖೆ ಅಗತ್ಯ ಇಲ್ಲ. ಸಂಪೂರ್ಣ ದಾಖಲೆ ನೀಡಲಾಗಿದೆ. ಯಾವ ಇಲಾಖೆಯಲ್ಲೂ ಅಕ್ರಮ ನಡೆದಿಲ್ಲ. ಇಂತಹ ಸಂಕಷ್ಟಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿ ಅಪಪ್ರಚಾರ ಮಾಡಬಾರದು’ ಎಂದು ಕಾರಜೋಳ ಆಗ್ರಹಿಸಿದರು.

Follow Us:
Download App:
  • android
  • ios