ಬೆಂಗಳೂರು(ಜು.25); ‘ಕೊರೋನಾ ಉಪಕರಣಗಳ ಖರೀದಿಗಳಲ್ಲಿ ಅವ್ಯವಹಾರ ನಡೆದಿಲ್ಲ ಎಂದಾದರೆ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರು ಹೇಳಿದ್ದೆಲ್ಲಾ ಸತ್ಯ ಎನ್ನುವುದಾದರೆ ತನಿಖೆ ನಡೆಯಲಿ. ಆ ಮೂಲಕ ನಿಜ ಸತ್ಯ ಜನರ ಮುಂದೆ ಬರಲಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಆಗ್ರಹಿಸಿದ್ದಾರೆ.

"

ಕೋವಿಡ್‌ ಭ್ರಷ್ಟಾಚಾರ ಕುರಿತ ತಮ್ಮ ಆರೋಪ ನಿರಾಕರಿಸಿ ಈ ಬಗ್ಗೆ ಅಗತ್ಯವಿಲ್ಲ ಎಂಬ ರಾಜ್ಯ ಸರ್ಕಾರ ಧೋರಣೆಯನ್ನು ಶುಕ್ರವಾರ ಮತ್ತೆ ಸುದ್ದಿಗೋಷ್ಠಿ ನಡೆಸಿ ಪ್ರಶ್ನಿಸಿದ ಅವರು, ‘ತನಿಖೆಗೆ ಹಿಂಜರಿಯುತ್ತಿದೆ ಎಂದರೆ ಸರ್ಕಾರ ಕಳ್ಳತನ ಮಾಡಿದೆ ಎಂದು ಅರ್ಥ’ ಎಂದು ವ್ಯಾಖ್ಯಾನಿಸಿದರು.

500 ಕೋಟಿ ಖರ್ಚು ಮಾಡಿಲ್ಲ, ಆರೋಪ ಸುಳ್ಳು, ತನಿಖೆ ಬೇಕಿಲ್ಲ: ಕಾರಜೋಳ!

ಜತೆಗೆ, ‘ಸಮ್ಮಿಶ್ರ ಸರ್ಕಾರದಲ್ಲೂ ವೆಂಟಿಲೇಟರ್‌ ಖರೀದಿಯಲ್ಲಿ ಅವ್ಯವಹಾರ ನಡೆದಿತ್ತು’ ಎಂಬ ಸಚಿವರ ಆರೋಪಕ್ಕೆ ಉತ್ತರಿಸಿದ ಅವರು, ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೆ ಆ ಬಗ್ಗೆಯೂ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.

‘ನಾವು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಅವ್ಯವಹಾರದ ಬಗ್ಗೆ 14 ದಾಖಲೆಗಳನ್ನು ಕೊಟ್ಟಿದ್ದೇವೆ. ಆದರೂ ಆ ದಾಖಲೆಗಳನ್ನು ಸಾಮೂಹಿಕ ಸುದ್ದಿಗೋಷ್ಠಿ ನಡೆಸಿ ಸಚಿವರು ನಿರಾಕರಿಸುತ್ತಾರೆ. ಇದರಲ್ಲಿ ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದರೆ ನ್ಯಾಯಾಂಗ ತನಿಖೆ ನಡೆಯಬೇಕು. ಅದಕ್ಕೆ ಭಯವೇಕೆ?’ ಎಂದು ಕುಟುಕಿದರು.

ಅಲ್ಲದೆ, ‘ನಾವು ಮೊದಲ ಅಕ್ರಮ ಆರೋಪ ಮಾಡಿದಾಗ ಸಚಿವರು ಸಾಮೂಹಿಕ ಸುದ್ದಿಗೋಷ್ಠಿ ನಡೆಸಿ 324 ಕೋಟಿ ರು. ಮಾತ್ರ ಖರ್ಚು ಮಾಲಾಗಿದೆ ಎಂದಿದ್ದರು. ಇದೀಗ ಗುರುವಾರ ಸುದ್ದಿಗೋಷ್ಠಿ ನಡೆಸಿ 2,118 ಕೋಟಿ ರು. ಖರ್ಚು ಮಾಡಿದ್ದೇವೆ ಎನ್ನುತ್ತಾರೆ. ಇದರ ಅರ್ಥವೇನು?’ ಎಂದು ಪ್ರಶ್ನಿಸಿದರು.

ಕೈ v/s ಬಿಜೆಪಿ ‘ಕೊರೋನಾ ಕದನ’!2000 ಕೋಟಿ ಹಗರಣ: ಸಿದ್ದು | ಸುಳ್ಳು ಆರೋಪ: ಬಿ

ಅವ್ಯವಹಾರ ಆಗಿರುವುದು ಸತ್ಯ:

‘ಸರ್ಕಾರದ ಕಡತಗಳನ್ನೇ ದಾಖಲೆಗಳಾಗಿ ನೀಡಿ ನಾವು ಆರೋಪ ಮಾಡಿದ್ದೇವೆ. ತಮ್ಮ ಆರೋಪ ಸುಳ್ಳು ಎಂದಾದರೆ ಸರ್ಕಾರಿ ದಾಖಲೆಗಳೇ ಸುಳ್ಳೇ? ಇನ್ನು ಕಾರ್ಮಿಕ ಇಲಾಖೆಯಲ್ಲಿ ಒಂದು ಸಾವಿರ ಕೋಟಿ ರು. ಅವ್ಯವಹಾರ ಆಗಿದೆ ಎಂದು ನಾನು ಹೇಳಿದ್ದೇನೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ನಾನು ಆ ರೀತಿ ಹೇಳಿಲ್ಲ. ಈ ಇಲಾಖೆಯಲ್ಲಿ ಖರ್ಚು ಮಾಡಿರುವ 1 ಸಾವಿರ ಕೋಟಿ ರು.ಗೆ ಲೆಕ್ಕ ಕೊಡುತ್ತಿಲ್ಲ. ಸಂಘ ಸಂಸ್ಥೆಗಳು ನೀಡಿರುವ ಆಹಾರ ಕಿಟ್‌ ಅನ್ನು ಸರ್ಕಾರದ ಹೆಸರಿನಲ್ಲಿ ಹಂಚಿ ಬಿಲ್‌ ಮಾಡಲಾಗಿದೆ ಎಂದು ಹೇಳಿದ್ದೇನೆ’ ಎಂದರು.

ಸಿದ್ದರಾಮಯ್ಯ ಈಸ್‌ ಸಿದ್ದರಾಮಯ್ಯ:

ಕಾಂಗ್ರೆಸ್‌ ನಾಯಕರನ್ನು ಕೌರವರಿಗೆ ಹೋಲಿಸಿದ ಬಿಜೆಪಿ ಸಚಿವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ನಮಗೆ ಕೌರವರು ಎಂದು ಹೇಳಿದ್ದಾರೆ. ಅವರು ಕೌರವರು ಆಗಲಿಕ್ಕೂ ಸಹ ಲಾಯಕ್ಕಿಲ್ಲ. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ. ಐ ಆ್ಯಮ್‌ ಸಿದ್ದರಾಮಯ್ಯ ಓನ್ಲಿ. ಸಿದ್ದರಾಮಯ್ಯ ಈಸ್‌ ಸಿದ್ದರಾಮಯ್ಯ’ ಎಂದರು. ‘ಮಹಾಭಾರತದಲ್ಲಿನ ಕೌರವರು ಹಾಗೂ ಪಾಂಡವರ ವಿಚಾರ ಈಗ ಏಕೆ? ದ್ವಾಪರ ಯುಗದಲ್ಲಿ ನಡೆದಿದ್ದನ್ನು ಎಳೆದು ತರುವ ಬದಲು ಈಗಿನ ಅಕ್ರಮವನ್ನು ತನಿಖೆಗೆ ವಹಿಸಿ’ ಎಂದು ಒತ್ತಾಯಿಸಿದರು.

ನಾಡಿದ್ದು ಡಿಕೆಶಿ ನೇತೃತ್ವದ ಸಭೆ

ಸೋಮವಾರ ಕಾಂಗ್ರೆಸ್‌ ಹಿರಿಯ ನಾಯಕರ ಸಭೆ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೋಮವಾರ ಹಿರಿಯ ನಾಯಕರ ಸಭೆ ಕರೆದಿದ್ದಾರೆ. ರಾಜ್ಯ ಸರ್ಕಾರದ ಅಕ್ರಮಗಳ ವಿರುದ್ಧ ಯಾವ ರೀತಿಯಲ್ಲಿ ಹೋರಾಟ ನಡೆಸಬೇಕು ಎಂಬ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಲಿದೆ. ಜತೆಗೆ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಅವಲೋಕನ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.