ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ, ಹಿಂದುತ್ವವನ್ನು ತಮ್ಮ ಆಸ್ತಿ ಎಂದು ಭಾವಿಸಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಆ.17) : ಬಿಜೆಪಿ ನಾಯಕರಿಗೆ ಧರ್ಮಸ್ಥಳದ ಮೇಲೆ ಪ್ರೀತಿಯಿಲ್ಲ. ಕೇವಲ ರಾಜಕೀಯಕ್ಕಾಗಿ ಧರ್ಮಸ್ಥಳ ಬಳಸಿಕೊಳ್ಳುತ್ತಿದ್ದಾರೆ. ಈಗ ಇಷ್ಟೆಲ್ಲ ಮಾತನಾಡುವ ಬಿಜೆಪಿಗರು ಮುಸುಕುಧಾರಿ ನ್ಯಾಯಾಲಯದಲ್ಲಿ ದೂರು ನೀಡಿದಾಗ ಏನನ್ನೂ ಮಾತನಾಡಲಿಲ್ಲ, ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಗ್ರಾಮ ಪ್ರಕರಣದ ವಿಚಾರದಲ್ಲಿ ಬಿಜೆಪಿಗರು ಆರಂಭದಲ್ಲಿ ಏನೂ ಮಾತನಾಡಿರಲಿಲ್ಲ. ಈಗ ಧರ್ಮಸ್ಥಳ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರು ಹಿಂದುತ್ವವನ್ನು ತಮ್ಮ ಮನೆ ಆಸ್ತಿ ಎಂದು ಭಾವಿಸಿದ್ದಾರೆ. ಹಿಂದುತ್ವ ಯಾರೊಬ್ಬರ ಆಸ್ತಿಯೂ ಅಲ್ಲ. ಅವರವರ ಭಕ್ತಿ, ನಂಬಿಕೆ, ಭಾವನೆಗೆ ಸಂಬಂಧಿಸಿದ್ದು ಎಂದರು.

ಹಸ್ತಕ್ಷೇಪ ಮಾಡಲ್ಲ:

ಅನಾಮಿಕನಿಗೆ ಮಂಪರು ಪರೀಕ್ಷೆ ಮಾಡಬೇಕು ಎಂಬ ಬೇಡಿಕೆಯಿದೆಯಲ್ಲ ಎಂಬ ಪ್ರಶ್ನೆಗೆ ಡಿ.ಕೆ.ಶಿವಕುಮಾರ್‌, ಅವರು ಏನು ಬೇಕಾದರೂ ಆಗ್ರಹಿಸಲಿ. ಮಂಪರು ಪರೀಕ್ಷೆ ಅಥವಾ ಬೇರೆ ಯಾವುದೇ ತನಿಖೆಗಾದರೂ ಒತ್ತಾಯಿಸಲಿ. ಅದು ತಪ್ಪಲ್ಲ. ಇನ್ನು, ಧರ್ಮಸ್ಥಳ ಗ್ರಾಮದಲ್ಲಿ ಎಷ್ಟು ಗುಂಡಿ ತೆಗೆಯಬೇಕು, ಯಾವಾಗ ನಿಲ್ಲಿಸಬೇಕು ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಅವರ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ನನ್ನ ವೈಯಕ್ತಿಕ ಅನುಭವದಿಂದ ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರವಾಗಿರುವ ಕುರಿತು ಹೇಳಿದ್ದೇನೆ. ಆದರೆ, ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಇದನ್ನೂ ಓದಿ: ಡಿಕೆ ‘ಧರ್ಮಸ್ಥಳ’ ಪರ ಹೇಳಿಕೆ ಕೊಡುತ್ತಿರೋದೇಕೆ? ರಾಜಣ್ಣ ಬಗ್ಗೆ ರಾಹುಲ್‌ಗೆ ದೂರಿದ್ದ ನಾಯಕ ಯಾರು?

ಈಗ ಧರ್ಮಸ್ಥಳ ಕುರಿತು ಮಾತನಾಡುವ ಬಿಜೆಪಿ ನಾಯಕರು ಮುಸುಕುಧಾರಿ ದೂರು ಕೊಟ್ಟಾಗ, ಎಸ್‌ಐಟಿ ರಚಿಸಿದ ಮೊದಲ ದಿನ ಏಕೆ ಮಾತನಾಡಲಿಲ್ಲ? ಆತನ ದೂರು ಸರಿಯಲ್ಲ ಎಂದು ಹೇಳಲಿಲ್ಲವೇಕೆ? ನಮಗೆ ರಾಜಕೀಯಕ್ಕಾಗಿ ಧರ್ಮಸ್ಥಳ ಬೇಡ. ಧರ್ಮಸ್ಥಳದ ಗೌರವ ಕಾಪಾಡುವುದು ನಮ್ಮ ಚಿಂತನೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿ ಎನ್ನುವವರು ನಾವು. ನ್ಯಾಯಾಲಯದ ಮುಂದೆ ದೂರು ನೀಡಿದ ನಂತರವೂ ಸರ್ಕಾರ ತನಿಖೆ ಮಾಡದಿದ್ದರೆ, ಆಗಲೂ ಬಿಜೆಪಿಗರು ಏನನ್ನಾದರೂ ಹೇಳುತ್ತಿದ್ದರು. ಈಗ ಈ ರೀತಿ ರಾಜಕಾರಣ ಮಾಡುತ್ತಿದ್ದು, ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಎಂದು ವಿವರಿಸಿದರು.

ಬಿಜೆಪಿ ಶಾಸಕರು ಸದನದಲ್ಲಿ ಮಾತನಾಡುವ ಮುನ್ನವೇ, ನಮ್ಮ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ಪರ ಧ್ವನಿ ಎತ್ತಿದ್ದರು. ಮುಖ್ಯಮಂತ್ರಿ ಕೂಡ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇನ್ನು, ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕುಮ್ಮಕ್ಕು ನೀಡುತ್ತಿರುವವನೊಬ್ಬ ಮುಖ್ಯಮಂತ್ರಿ ಅವರನ್ನೇ ಕೊಲೆಗಾರ ಎಂದು ಕರೆದಿದ್ದಾನೆ. ಅದೆಲ್ಲವನ್ನೂ ಗಮನಿಸುತ್ತಿದ್ದೇವೆ ಎಂದು ತಿಳಿಸಿದರು.