ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರ್ಕಾರಕ್ಕೆ ಸವಾಲಾಗಿದ್ದು, ಅದನ್ನು ನಿವಾರಿಸಲು ಈವರೆಗೆ ಸಾಧ್ಯವಾಗಿಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತಷ್ಟು ಸಮಯ ಬೇಕಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅಸಹಾಯಕತೆ ತೋಡಿಕೊಂಡರು.

ಸುವರ್ಣ ವಿಧಾನಸಭೆ (ಡಿ.18): ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರ್ಕಾರಕ್ಕೆ ಸವಾಲಾಗಿದ್ದು, ಅದನ್ನು ನಿವಾರಿಸಲು ಈವರೆಗೆ ಸಾಧ್ಯವಾಗಿಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತಷ್ಟು ಸಮಯ ಬೇಕಾಗಿದೆ ಎಂದು ಆರ್‌ಡಿಪಿಆರ್‌ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅಸಹಾಯಕತೆ ತೋಡಿಕೊಂಡರು. ಕಾಂಗ್ರೆಸ್‌ನ ಯು.ಬಿ.ಬಣಕಾರ್‌ ಅವರು ಹಾವೇರಿ ಜಿಲ್ಲೆಯಲ್ಲಿ ಫ್ಲೋರೈಡ್‌ ಯುಕ್ತ ನೀರು ಹೆಚ್ಚಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ರಾಜ್ಯದಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಕಾರ್ಯ ಭರದಿಂದ ಸಾಗಿದೆ ಎಂದರು.

ಇನ್ನು ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದೊಂದಿಗೆ ರಾಜ್ಯದಲ್ಲಿ ಸಾವಿರಾರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಹೀಗೆ ಅಳವಡಿಕೆ ಮಾಡಲಾಗಿರುವ ಘಟಕಗಳ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಸರ್ಕಾರ ಇನ್ನೂ ಚರ್ಚೆ ನಡೆಸುತ್ತಿದೆ ಎಂದರು. ಕಳೆದ ಸರ್ಕಾರದ ಅವಧಿಯಲ್ಲಿ 5.13 ಲಕ್ಷ ಮಾತ್ರ ನೀರಿನ ಗುಣಮಟ್ಟ ಪರೀಕ್ಷೆ ನಡೆದಿತ್ತು. ಕಳೆದ ಎರಡೂವರೆ ವರ್ಷಗಳಲ್ಲಿ 13.20 ಲಕ್ಷ ಪರೀಕ್ಷೆ ಮಾಡಲಾಗಿದ್ದು, ಈ ವರ್ಷದಲ್ಲೇ 6.50 ಪರೀಕ್ಷೆ ನಡೆಸಲಾಗಿದೆ.

ಇದು ನಿರಂತರ ಪ್ರಕ್ರಿಯೆಯಾಗಿದೆ. ರಾಜ್ಯದಲ್ಲಿ ಎಂಪಿಲಾಡ್‌, ಎಂಎಲ್‌ಎಲಾಡ್‌ ಅನುದಾನ, ಸಿಎಸ್‌ಆರ್‌ ಅನುದಾನ ಸೇರಿ ಮತ್ತಿತರ ಅನುದಾನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಹೀಗೆ ಸ್ಥಾಪಿಸಲಾಗುವ ಘಟಕಗಳ ನಿರ್ವಹಣೆ ಯಾರು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಆಯಾ ಗ್ರಾಪಂಗಳಿಂದ ನಿರ್ವಹಣೆ ಮಾಡಲು ಅನುದಾನದ ಕೊರತೆಯಿದೆ ಹಾಗೂ ಘಟಕಗಳನ್ನು ಹಸ್ತಾಂತರಿಸದೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದರು. ಅದಕ್ಕೆ ಕಾಂಗ್ರೆಸ್‌ನ ಷಡಕ್ಷರಿ, ಆಯಾ ಜಿಪಂಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹೊಣೆಯನ್ನು ನೀಡಿ ಎಂದು ಸಲಹೆ ನೀಡಿದರು.

ಅನಧಿಕೃತ ಬಡಾವಣೆ ಮಾಲೀಕತ್ವ ಗೊಂದಲಕ್ಕೆ ಪರಿಹಾರ

ಅನಧಿಕೃತ ಬಡಾವಣೆಗಳ ಮಾಲೀಕತ್ವ ಸಮಸ್ಯೆ ನಿವಾರಣೆಗೆ ಕಂದಾಯ ಇಲಾಖೆಯೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಕಾಂಗ್ರೆಸ್ ಸದಸ್ಯ ಜೆ.ಎನ್‌.ಗಣೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್‌ ಖರ್ಗೆ, ಅನಧಿಕೃತ ಖಾಸಗಿ ಬಡಾವಣೆಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿವೆ. ಆ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆ ಸಹಕಾರ ಬೇಕಿದೆ. ಅದಕ್ಕಾಗಿ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಜಂಟಿಯಾಗಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಇನ್ನು, ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಅದರಿಂದ ಒಂದು ಕೋಟಿ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ವರಲಿದೆ ಎಂದು ವಿವರಿಸಿದರು.