ರಾಜಕೀಯ ತೀಟೆಗಾಗಿ ವಿರೋಧ ಪಕ್ಷದ ನಾಯಕರು ನನ್ನ ಮೇಲೆ ಭೂ ಅಕ್ರಮದ ಆರೋಪ ಮಾಡುತ್ತಿದ್ದಾರೆ. ಅವರು ಮಾಡಿರುವ ಆರೋಪದ ಕುರಿತು ಲೋಕಾಯುಕ್ತ ಸೇರಿ ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುವರ್ಣ ವಿಧಾನಸೌಧ (ಡಿ.18): ರಾಜಕೀಯ ತೀಟೆಗಾಗಿ ವಿರೋಧ ಪಕ್ಷದ ನಾಯಕರು ನನ್ನ ಮೇಲೆ ಭೂ ಅಕ್ರಮದ ಆರೋಪ ಮಾಡುತ್ತಿದ್ದಾರೆ. ಅವರು ಮಾಡಿರುವ ಆರೋಪದ ಕುರಿತು ಲೋಕಾಯುಕ್ತ ಸೇರಿ ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಛಲವಾದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರೋಪ ಮಾಡಬೇಕು ಎಂಬ ಕಾರಣಕ್ಕಾಗಿ ಯಾವುದೇ ವಿಚಾರ ಇಲ್ಲದಿದ್ದರೂ ಹುಡುಕಿ ಆರೋಪ ಮಾಡಲಾಗುತ್ತಿದೆ. ಗರುಡನಪಾಳ್ಯದ ಭೂಮಿ ನನ್ನ ತಾತ ಅವರಿಂದ ಬಂದ ಪಿತ್ರಾರ್ಜಿತ ಆಸ್ತಿ. ನಮ್ಮ ತಂದೆ ಮೂಲಕ ಭಾಗವಾಗಿ ನಮಗೆ ಬಂದಿದೆ. ಬೇಕಾದರೆ ಅದನ್ನು ಯಾವ ಮೂಲದಿಂದಲಾದರೂ ಪರಿಶೀಲಿಸಿಕೊಳ್ಳಲಿ. ಯಾವ ಕಾಲದಲ್ಲಿ ಏನೇನಾಗಿದೆ ಎಂಬುದನ್ನು ಪರೀಕ್ಷಿಸಲಿ ಎಂದರು.
ನಾನು ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಇಲಾಖಾ ಅಥವಾ ಸರ್ಕಾರದ ತನಿಖೆ ನಡೆದರೆ ಪಕ್ಷಪಾತವಾಗುತ್ತದೆ ಎಂದಾದರೆ ಯಾವುದಾದರೂ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಲಿ. ಲೋಕಾಯುಕ್ತಕ್ಕೆ, ನ್ಯಾಯಾಲಯಕ್ಕೆ ದೂರು ನೀಡಿ ತನಿಖೆ ಮಾಡಿಸಲಿ. ಎಲ್ಲದಕ್ಕೂ ನಾನು ಸಿದ್ಧ. ರಾಜಕೀಯ ತೀಟೆ ತೀರಿಸಿಕೊಳ್ಳಲು ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನನ್ನ ತಪ್ಪಿದೆ ಎಂದು ಸಾಬೀತಾದರೆ ನಾನು ತಲೆ ಬಾಗುತ್ತೇನೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕೆಸರೆರಚಾಟ ಮಾಡುವುದು ಸರಿಯಲ್ಲ. ಇಲ್ಲಸಲ್ಲದ ಆರೋಪ ಮಾಡುವುದನ್ನೇ ವೃತ್ತಿಯಾಗಿಸಿಕೊಂಡವರಷ್ಟೇ ಈ ರೀತಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಧಾರ್ ಕಡ್ಡಾಯದಿಂದ ಭೂ ಕಳ್ಳರಿಗೆ ಸಮಸ್ಯೆ: ಸ್ವತ್ತುಗಳ ವಿಚಾರದಲ್ಲಿ ಯಾವುದೇ ರೀತಿಯ ವಂಚನೆ ಆಗಬಾರದೆಂಬ ಉದ್ದೇಶದಿಂದ ನೋಂದಣಿ ವೇಳೆ ಆಧಾರ್ ಕಡ್ಡಾಯ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ. ಬುಧವಾರ ಬಿಜೆಪಿಯ ಡಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಅವರು ಈ ಮೊದಲು ಆಧಾರ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ದಾಖಲೆಗಳನ್ನು ಪರಿಗಣಿಸಲಾಗುತ್ತಿತ್ತು. ಆದರೆ ಪಾನ್ ಕಾರ್ಡ್‌ಗಳ ಜೆರಾಕ್ಸ್ ಪ್ರತಿ ತೋರಿಸಿ ವಂಚನೆ ಮಾಡಿರುವ ಪ್ರಕರಣಗಳು ಬಂದಿವೆ. ಹೀಗಾಗಿ ನೋಂದಣಿಗೆ ಈಗ ಕೇವಲ ಆಧಾರ್ ಕಾರ್ಡ್ ಮಾತ್ರ ಪರಿಗಣಿಸಲಾಗುತ್ತಿದೆ. ಸರ್ಕಾರದ ಈ ಕ್ರಮದಿಂದ ಪಾನ್ ಕಾರ್ಡ್ ಬಳಸಿ ಮೋಸ ಮಾಡುವವರಿಗೆ, ಭೂ ಕಳ್ಳರಿಗೆ ತೊಂದರೆಯಾಗಿದೆ. ಹೀಗಾಗಿ ಕಾವೇರಿ 2.0 ತಂತ್ರಾಂಶದಲ್ಲಿ ದೋಷವಿದೆ ಎಂದು ಹೇಳುತ್ತಿದ್ದಾರೆ ಎಂದರು.
ಎಲ್ಲಾ ರೀತಿಯ ಮಾಲೀಕತ್ವಕ್ಕೆ ಆಧಾರ್ ಕಡ್ಡಾಯ
ಇನ್ನು ಮೇಲೆ ಎಲ್ಲ ಬಗೆಯ ಮಾಲೀಕತ್ವಕ್ಕೆ ಆಧಾರ್ ಕಡ್ಡಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಮುಖವೇ ಗುರುತಿನ ಚೀಟಿ ಆಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು. ಕಾವೇರಿ 2.0 ತಂತ್ರಾಂಶದಲ್ಲಿ ಗ್ರಾಪಂ ವ್ಯಾಪ್ತಿಯ ಇ-ಸ್ವತ್ತು, ದಾಖಲೆ ಹೊಂದಿರುವ ಸ್ವತ್ತುಗಳ ವಿಭಾಗ ಪತ್ರ ಹಾಗೂ ದಾನಪತ್ರಗಳ ನೋಂದಣಿಗೆ ಯಾವುದೇ ಸಮಸ್ಯೆ ಇಲ್ಲ. ಮ್ಯಾನ್ಯುಯಲ್ ನೋಂದಣಿ ವ್ಯವಸ್ಥೆ ಜಾರಿಗೆ ತರುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು. ಕಾವೇರಿ-2.0 ತಂತ್ರಾಂಶದಲ್ಲಿ ನೇರವಾಗಿ ವಿಭಾಗ ಪತ್ರ ನೋಂದಣಿ ಮಾಡಲು ಬರುವುದಿಲ್ಲ. ಗ್ರಾಮ, ನಗರ ಅಥವಾ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಆಸ್ತಿಗಳನ್ನು ಆಯಾ ಮಟ್ಟದಲ್ಲಿ ವಿಭಾಗ ಮಾಡಿಕೊಂಡು ನಂತರ ನೋಂದಣಿ ಮಾಡಿಕೊಳ್ಳಲು ಸಾಧ್ಯ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


