ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಚರ್ಚೆ ಮತ್ತೆ ತೀವ್ರಗೊಂಡಿದೆ. ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಅವರು ದಲಿತ ಸಿಎಂ ಬಗ್ಗೆ ಮಾತನಾಡಿದ್ದು, ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು ಎಂದಿದ್ದಾರೆ.
ದಾವಣಗೆರೆ (ಜುಲೈ.27): ಕರ್ನಾಟಕದಲ್ಲಿ ದಲಿತ ಸಿಎಂಗಾಗಿ ಬಹಳ ದಿನಗಳಿಂದ ಕೂಗು ಕೇಳಿಬರುತ್ತಿದೆ. ಈ ದಿಶೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಸಹಜವಾಗಿ ನಾನು ಆ ಮಾತು ಹೇಳಿದ್ದೇನೆ ಎಂದು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ದಲಿತ ಸಿಎಂಗೆ ಸಂಬಂಧಿಸಿದಂತ ಮಾಧ್ಯಮಗಳೊಂದಿಗೆ ಮಾತನಾಡಿದ ಜಗಳೂರು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಅವರು ನಾಳೆ ಯಾರು ಇರ್ತಾರೆ ಎಂದು ಖಚಿತವಾಗಿ ಹೇಳಲಾಗದು. ಶರಣರ ಮಾತಿನಂತೆ, ‘ನುಡಿದಂತೆ ನಡೆ, ಇದೇ ಜನ್ಮ ಕಡೆ’ ಎಂಬಂತೆ ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ. ಪಕ್ಷ ಮೊದಲು, ನಂತರ ಉಳಿದೆಲ್ಲ ಎಂದರು.
ಕರ್ನಾಟಕ ದಲಿತ ಸಿಎಂ ತೀರ್ಮಾನ ಹೈಕಮಾಂಡನದ್ದೇ:
ದಲಿತ ಸಿಎಂ ಬಗ್ಗೆ ನಾನು ಮಾತನಾಡಿದ್ದು ಸಹಜ, ಆದರೆ ತೀರ್ಮಾನ ಹೈಕಮಾಂಡ್‌ದೇ. ಅಧಿಕಾರ ಹಂಚಿಕೆ ನನ್ನ ಕೈಯಲ್ಲಿ ಇಲ್ಲ. ಸದ್ಯಕ್ಕಂತೂ ಸಿಎಂ ಖುರ್ಚಿ ಖಾಲಿಯೂ ಇಲ್ಲ. ಮುಂದೆ ಖಾಲಿಯಾದಾಗ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಯಾರ ವಿರೋಧವಾಗಿಯೂ, ಬೆಂಬಲಕ್ಕೂ ನಿಂತಿಲ್ಲ. ಇರೋದನ್ನು ಹೇಳಿದ್ದೇನೆ ಎಂದರು. ಇದೇ ವೇಳೆ ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ದೇವೇಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆಯಿಂದ ಕರ್ನಾಟಕ ರಾಜಕೀಯದಲ್ಲಿ ದಲಿತ ಸಿಎಂ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್‌ನ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.
