ಗೋ ಶಾಲೆಗೆ ನಯಾಪೈಸೆ ಕೊಡದ ಕಾಂಗ್ರೆಸ್ ಸರ್ಕಾರ, ಮೇವಿಲ್ಲದೆ ಬಡಕಲು ಬಿದ್ದು ನರಳುತ್ತಿವೆ ಗೋವುಗಳು!
ಕರ್ನಾಟಕದಲ್ಲಿ ಗೋಶಾಲೆಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅನುದಾನ ನೀಡದೆ ಇರುವುದರಿಂದ ಗೋವುಗಳು ಸರಿಯಾದ ಮೇವಿಲ್ಲದೆ ನರಳುತ್ತಿವೆ. ಕೊಡಗು ಜಿಲ್ಲೆಯ ಕರ್ಣಂಗೇರಿ ಗೋಶಾಲೆಯಲ್ಲಿ ಜಾಗದ ಕೊರತೆ, ಮೂಲಸೌಕರ್ಯಗಳ ಕೊರತೆ, ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳಿವೆ.
ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.6) : ರಾಜ್ಯದಲ್ಲಿ ಗೋವುಗಳ ರಕ್ಷಿಸಬೇಕೆಂಬ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಿತ್ತು. ಪ್ರತಿ ಗೋಶಾಲೆಗೆ ತಲಾ ಹತ್ತಾರು ಎಕರೆಯಷ್ಟು ಭೂಮಿಯನ್ನು ನೀಡಿ ಅವುಗಳ ರಕ್ಷಣೆಗೆ ಸರ್ಕಾರ ಮುಂದಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಳಾಗುತ್ತಾ ಬಂದರೂ ಗೋಶಾಲೆಗಳ ಅಭಿವೃದ್ಧಿಗೆ ಒಂದೇ ಒಂದು ಬಿಡಿಗಾಸು ನೀಡಿಲ್ಲ. ಇದರಿಂದ ಗೋಶಾಲೆಗಳಲ್ಲಿ ಇರುವ ಹತ್ತಾರು ಗೋವುಗಳು ಸರಿಯಾದ ಮೇವಿಲ್ಲದೆ ಬಡಕಲು ಬಿದ್ದು ನರಳುತ್ತಿವೆ. ಅದಕ್ಕೆ ಸಾಕ್ಷಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ಮಾಡಿರುವ ಸರ್ಕಾರಿ ಗೋಶಾಲೆ.
2022 ರ ಅಕ್ಟೋಬರ್ ತಿಂಗಳಿನಲ್ಲೇ ಈ ಗೋಶಾಲೆಯನ್ನು ನಿರ್ಮಿಸಲಾಗಿತ್ತು. ಆ ಸಂದರ್ಭಕ್ಕೆ ಗೋಶಾಲೆಗೆ 8 ಎಕರೆ ಭೂಮಿ ನೀಡಿ 50 ರಾಸುಗಳ ಕೂಡುವಷ್ಟು ಒಂದು ಶೆಡ್ ಹಾಗೂ ಮೇವು ಸಂಗ್ರಹಣೆಗೆ ಒಂದು ಗೋದಾಮು ನಿರ್ಮಿಸಲಾಗಿತ್ತು. ಅದು ಬಿಟ್ಟರೆ ಆ ನಂತರ ಈ ಗೋಶಾಲೆ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಒಂದೇ ಒಂದು ನಯಾಪೈಸೆ ನೀಡಿಲ್ಲ. ಹೀಗಾಗಿ ಗೋವುಗಳ ಮೇಯಿಸಲು 6 ಎಕರೆಯಷ್ಟು ಭೂಮಿ ಇದ್ದರೂ ಅದನ್ನು ಅಭಿವೃದ್ಧಿ ಪಡಿಸಲಾಗದೆ ಪಾಳುಬಿದ್ದು, ಸಂಪೂರ್ಣ ಕಾಡು ಪಾಲಾಗಿದೆ. ಜೊತೆಗೆ ಜಾಗದ ಸುತ್ತ ಯಾವುದೇ ಫೆನ್ಸ್ ಕೂಡ ಇಲ್ಲದೇ ಇರುವುದರಿಂದ ಅಲ್ಲಿಗೆ ಜಾನುವಾರಗಳನ್ನು ಮೇಯಲು ಬಿಡಲಾಗುತ್ತಿಲ್ಲ. ಬದಲಾಗಿ ನಿತ್ಯ ಕಟ್ಟುವ ಒಂದೇ ಜಾಗದಲ್ಲಿ ದನಗಳನ್ನು ಕಟ್ಟಬೇಕು. ಆ ಜಾಗ ಈಗ ಬರಡು ಭೂಮಿಯಂತಾಗಿದ್ದು ಅದೇ ಜಾಗದಲ್ಲಿ ನಿಂತಲ್ಲೇ ನಿಂತು ಅಲ್ಲಿನ ಸಿಬ್ಬಂದಿ ಹಾಕುವ ಒಂದಿಷ್ಟು ಮೇವನ್ನು ಮಾತ್ರ ತಿಂದು ಸುಮ್ಮನಾಗಬೇಕಾಗಿದೆ. ಹೀಗಾಗಿಯೇ ಅವುಗಳು ಬಡಕಲು ಬಿದ್ದು ಕೆಲವು ಜಾನುವಾರಗಳು ಸಾಯುವ ಸ್ಥಿತಿ ತಲುಪುತ್ತಿವೆ.
ಚಿಕ್ಕಮಗಳೂರು: ಗೋಶಾಲೆಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಬಾರದ ಅನುದಾನ!
ಸದ್ಯ ಒಂದೇ ಶೆಡ್ ಇದ್ದು, ಇದರ ಒಳಗೆ 35 ಜಾನುವಾರುಗಳನ್ನು ಕೂಡಿ ಹಾಕುವುದಕ್ಕೆ ಆಗುವುದಿಲ್ಲ. ಕೂಡಿ ಹಾಕಿದರೆ ಅವುಗಳು ಗುದ್ದಾಡಿಕೊಂಡು ಅಪಾಯ ಮಾಡಿಕೊಳ್ಳುತ್ತವೆ ಎಂದು ಅವುಗಳನ್ನು ಕಟ್ಟಿ ಹಾಕಲಾಗುತ್ತದೆ. ಕಟ್ಟಿ ಹಾಕುವುದರಿಂದ ಶೆಡ್ ಒಳಗೆ ಜಾಗವೇ ಸಾಲುತ್ತಿಲ್ಲ. ಒಂದೆಡೆ ಈಗಿರುವ ಜಾನುವಾರುಗಳಿಗೆ ಜಾಗ ಸಾಕುವುದಿಲ್ಲ. ಮತ್ತೊಂದೆಡೆ ರೈತರು ಒಂದು ತಿಂಗಳಲ್ಲೇ ಐದಾರು ಜಾನುವಾರುಗಳನ್ನು ತಂದು ಬಿಡಲು ನಮ್ಮನ್ನು ಅವಕಾಶ ಕೇಳುತ್ತಾರೆ. ಆದರೆ ಜಾಗವಿಲ್ಲದೆ ಇರುವುದರಿಂದ ಜಾನುವಾರುಗಳ ತಂದು ಇಲ್ಲಿಗೆ ಬಿಡಲು ನಾವು ಒಪ್ಪುತ್ತಿಲ್ಲ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆ ಸಹಾಯ ನಿರ್ದೇಶಕ ಪ್ರಸನ್ನ.
ಇದಕ್ಕಾಗಿ ಮತ್ತೊಂದು ಶೆಡ್ಡಿನ ಅಗತ್ಯವಿದ್ದು, ಅನುದಾನ ಬೇಕಾಗಿದೆ. ಆದರೆ ಇದುವರೆಗೆ ಗೋಶಾಲೆಯ ನಿರ್ವಹಣೆಗಾಗಿ ಅನುದಾನ ಬರುತ್ತಿದೆ. ಅಭಿವೃದ್ಧಿಗಾಗಿ ಅನುದಾನವಿಲ್ಲ ಎನ್ನುತ್ತಾರೆ ಅಧಿಕಾರಿ. ಇನ್ನೂ ವಿಪರ್ಯಾಸವೆಂದರೆ ಗೋಶಾಲೆಗಳನ್ನೇನೋ ಬಿಜೆಪಿ ಸರ್ಕಾರ ಸ್ಥಾಪಿಸಿ ಹೋಯಿತು. ಆದರೆ ಇವುಗಳ ನಿರ್ವಹಣೆ ಮತ್ತು ಉಸ್ತುವಾರಿಗೆಂದು ಒಂದೇ ಒಂದು ಹುದ್ದೆಯನ್ನು ಸರ್ಕಾರ ಸೃಷ್ಟಿಸಿಲ್ಲ. ಬದಲಾಗಿ ಹಿಂದೆ ಇದ್ದ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಹೆಗಲಿಗೆ ಈ ಜವಾಬ್ದಾರಿಯನ್ನು ಹಾಕಿ ಕೈತೊಳೆದುಕೊಳ್ಳಲಾಗಿದೆ.
ಕೊಡಗು ದೇವಾಲಯದಲ್ಲಿ ಧಾರ್ಮಿಕ ಉಡುಪು ವಿವಾದ; ಕೊಡವ-ಗೌಡ ಸಂಘರ್ಷಕ್ಕೆ ಹೊಸ ತಿರುವು!
ಗೋಶಾಲೆಗಳಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಸದ್ಯ ಇರುವ ಸೌಲಭ್ಯಗಳಲ್ಲೇ ಪಶುಸಂಗೋಪನಾ ಇಲಾಖೆ ಗೋಶಾಲೆಗಳನ್ನು ನಿರ್ವಹಣೆ ಮಾಡುತ್ತಿದ್ದು, ಗೋವುಗಳು ಸೊರಗಿ ಹೋಗುತ್ತಿರುವುದಂತು ಸತ್ಯ. ಗೋಶಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ಥಳೀಯ ಬಿಜೆಪಿ ಮುಖಂಡ ಅರುಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು ಇನ್ನಾದರೂ ಅವುಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.