ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳನ್ನು ತನಿಖೆ ಮಾಡಲು ಕಾಂಗ್ರೆಸ್‌ ಸರ್ಕಾರ ವಿಶೇಷ ತನಿಖಾ ದಳ ರಚಿಸಲು ಚಿಂತನೆ ಮಾಡಿದೆ.

ಬೆಂಗಳೂರು (ಜೂ.15):  ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಆರೋಪಗಳನ್ನು ಮತ್ತಷ್ಟು ಬಿಗಿ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ದೊಡ್ಡ ಹಗರಣಗಳ ತನಿಖೆಗೆ ಪ್ರತ್ಯೇಕ ವಿಶೇಷ ತನಿಖಾ ದಳ (Special Investigation Team -SIT) ರಚಿಸಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮಗಳು ಹಾಗೂ ಹಗರಣಗಳ ಬಗ್ಗೆ ತನಿಖೆ ಮಾಡಲು ಎಸ್ಐಟಿ ರಚನೆ ಮಾಡುವಂತೆ ಚರ್ಚೆ ಮಾಡಲಾಯಿತು. ಈ ಬಗ್ಗೆ ಮೂವರು ಸಚಿವರು ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದು, ದೊಡ್ಡ ಹಗರಣಗಳ ಬಗ್ಗೆ ಸೂಕ್ತ ತನಿಖೆ ಮಾಡಿಸಬೇಕು ಎಂದು ಒಪ್ಪಿಗೆ ಸೂಚಿಸಿದ್ದಾರೆ. ಇಲ್ಲಿ ವಿಶೇಷವಾಗಿ ಕರ್ನಾಟಕ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (Karnataka Police sub Inspector-PSI) (ಪಿಎಸ್ಐ) ಹಗರಣ ಹಾಗೂ ವಕೀಲರ ನೇಮಕಾತಿ ಅಕ್ರಮ ಸೇರಿದಂತೆ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಮಾಡಲಾದ ಅಕ್ರಮಗಳ ತನಿಖೆಗೆ ಎಸ್‌ಐಟಿ ರಚೆನ ಮಾಡಬೇಕು ಎಂದು ಸಚುವರು ತಿಳಿಸಿದ್ದಾರೆ. ಜೊತೆಗೆ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಹಗರಣಗಳ ಬಗ್ಗೆ ಧ್ವನಿ ಎತ್ತಿದ್ದೇವೆ ಎಂದು ಕೂಡ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ.

PSI Scam ಆರೋಪಿಗಳನ್ನು ಬಿಟ್ಟು ನೇಮಕಾತಿ ಮುಂದುವರೆಸಲು ಸಾಧ್ಯವೇ? ಹೈಕೋರ್ಟ್‌ ಪ್ರಶ್ನೆ

ಹೊಂದಾಣಿಕೆ ರಾಜಕಾರಣವೆಂಬ ಆರೋಪ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಕ್ರಮಗಳ ಬಗ್ಗೆ ಧ್ವನಿ ಎತ್ತಿ ತನಿಖೆ ಮಾಡುವಂತೆ ಆಗ್ರಹಿಸಿದ ನಾವು, ಈಗ ನಮ್ಮ ಸರ್ಕಾರ ಬಂದಾಗ ತನಿಖೆಯನ್ನು ಮಾಡಿದ್ದರೆ ಹೊಂದಾಣಿಕೆ ರಾಜಕಾರಣ ಎಂಬ ಆರೋಪ ಬರಲಿದೆ. ಆದ್ದರಿಂದ ತಕ್ಷಣವೇ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡಿ ತನಿಖೆ ನಡೆಸುವಂತೆ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಬಗ್ಗೆ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಸಚಿವ ಕೃಷ್ಣ ಭೈರೇಗೌಡ ಪ್ರಸ್ತಾಪ ಮಾಡಿದ್ದಾರೆ. ಈ ಸಚಿವರಿಬ್ಬರ ಮಾತಿಗೆ ದನಿಗೂಡಿಸಿದ ದಿನೇಶ್ ಗುಂಡೂರಾವ್ ಕೂಡ ಎಸ್‌ಐಟಿಗೆ ತಮ್ಮ ಬೆಂಬಲವನ್ನೂ ತಿಳಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್‌ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರೆ ತನಿಖೆ ಮಾಡಿ: ಮೈಸೂರು: ಸಿದ್ದರಾಮಯ್ಯ ಅವರೆ ನಿಮಗೆ ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲ ಅಂದರೆ ನೀವು ಮಾಡ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದು ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ವಿರುದ್ಧ ಅವರು, ಅವರ ವಿರುದ್ಧ ನೀವು ಸಮಯ ಬಂದಾಗ ಮಾತ್ರ ಟೀಕೆ ಮಾಡಿಕೊಳ್ತಿರಾ? ನನಗೆ ತುರಿಕೆ ಆದಾಗ ನೀನು ನನ್ನ ಬೆನ್ನು ಕೆರಿ, ನಿನಗೆ ತುರಿಕೆ ಆದಾಗ ನಾನು ಬೆನ್ನು ಕೆರಿತೀನಿ ಅನ್ನೋ ರೀತಿ ನಿಮ್ಮ ಒಪ್ಪಂದ ನಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಬಿಜೆಪಿಯ ಕೆಲವು ಅತಿರಥ ಮಹಾರಥರು ಮಾತಾಡದೆ ಇರಬಹದು. ಕೆಲವರು ಶಾಮೀಲು ಆಗಿರಬಹುದು. ಬಿಜೆಪಿ ಕಾರ್ಯಕರ್ತ ಯಾವತ್ತೂ ನಿಮ್ಮ ಜೊತೆ ಶಾಮೀಲು ಆಗಿಲ್ಲ. ಆಗುವುದು ಇಲ್ಲ. ಬಿಜೆಪಿಯ ಕೆಲವು ಮುಖಂಡರು ಸೋತಿರಬಹುದು, ನಮ್ಮ ಕಾರ್ಯಕರ್ತರು ಸೋತಿಲ್ಲ ಎಂದರು.

ಪ್ರತಿನಿತ್ಯ ಪ್ರಾರ್ಥನೆಯಲ್ಲಿ ಸಂವಿಧಾನ ಪೀಠಿಕೆ ಓದುವುದನ್ನೂ ಕಡ್ಡಾಯಗೊಳಿಸಿದ ಸರ್ಕಾರ

ಶ್ವೇತಪತ್ರ ಹೊರಡಿಸಿ: ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ. ಇದಕ್ಕೆ ಶ್ವೇತಪತ್ರ ಹೊರಡಿಸಿ. ರಾಜ್ಯದ ಯಾವ ಸಿಎಂ ಎಷ್ಟುಸಾಲ ಮಾಡಿದ್ದಾರೆ ಎಂಬುದನ್ನು ಅಧಿಕೃತವಾಗಿ ಹೇಳಿ. ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರ ಮೇಲಿನ 40 ಪರ್ಸೆಂಟ್‌ ಆರೋಪದ ಬಗ್ಗೆ ಯಾಕೆ ದೂರು ಕೊಟ್ಟಿರಲಿಲ್ಲ. ಕಾಂಟ್ರಾಕ್ಟ್ ಮಾಡದ ಕೆಂಪಣ್ಣನ ಬರೆದ ಪತ್ರ ಇಟ್ಟುಕೊಂಡು ಕಾಂಗ್ರೆಸ್‌ ನಾಯಕರು ಊರಿಗೆಲ್ಲ ತಮಟೆ ಹೊಡೆದರು ಎಂದು ಅವರು ಹೇಳಿದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ ವಿರುದ್ಧ ಮೇಲೆ ರೀ ಡೂ, ಅರ್ಕಾವತಿ ಡಿ ನೋಟಿಫೀಕೇಷ್‌, ಕೆಂಪಣ್ಣ ಆಯೋಗ ವರದಿ ಅಬ್ಬರಿಸುತ್ತಿದ್ದರು. ಆದರೆ, ನಮ್ಮವರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ ಎಂದು ಸವಾಲು ಹಾಕಿದರು.