ಕಬ್ಬು ಬೆಲೆ ಹೆಚ್ಚಳ ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆಗಾಗಿ ಮಧ್ಯಪ್ರವೇಶಿಸುವಂತೆ ಕೋರಿ ಪ್ರಧಾನಿ ಮೋದಿಗೆ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಮುಷ್ಕರ ಅಂತ್ಯಗೊಳಿಸಲು ಎಥನಾಲ್ ನಿರ್ದೇಶನ ಪರಿಷ್ಕರಣೆ, ಪ್ರತ್ಯೇಕ ಎಂಎಸ್‌ಪಿಗೆ ಆಗ್ರಹ..

ಬೆಂಗಳೂರು (ಅ.31): ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ, ಎಥನಾಲ್ ಮೇಲಿನ ನಿರ್ದೇಶನ ಪರಿಷ್ಕರಿಸುವುದು ಸೇರಿದಂತೆ ಕಬ್ಬು ಬೆಲೆ ಹೆಚ್ಚಳಕ್ಕೆ ಕೂಡಲೇ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಕಬ್ಬು ಬೆಳೆಗಾರರು ಮುಷ್ಕರ ನಡೆಸುತ್ತಿದ್ದು, ರೈತರ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅ.19 ರಂದು ಪತ್ರ ಬರೆದು ಮನವಿ ಮಾಡಿದ್ದೆ. ಕೇಂದ್ರ ಸರ್ಕಾರವು ದರ ನಿಗದಿ ಬಗ್ಗೆ ರಚಿಸಿರುವ ಕೇಂದ್ರದ ಸಮಿತಿ ರಾಜ್ಯಕ್ಕೆ ಬಂದಿದ್ದು ಹೊರತುಪಡಿಸಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ತಾವು ಕೂಡಲೇ ಕಬ್ಬು ಬೆಲೆ ಹೆಚ್ಚಳಕ್ಕೆ ಪೂರಕವಾದ ಘೋಷಣೆ ಮಾಡಬೇಕು. ತನ್ಮೂಲಕ ರೈತರು ಮುಷ್ಕರ ಹಿಂಪಡೆಯಲು ಮತ್ತು ಕಬ್ಬು ಅರೆಯುವ ಪ್ರಕ್ರಿಯೆ ಮುಂದುವರಿಯಲು ಸಹಾಯ ಮಾಡಬೇಕು. ಲಕ್ಷಾಂತರ ಕಬ್ಬು ಬೆಳೆಗಾರರ ಮತ್ತು ಕರ್ನಾಟಕದ ಜನರ ಹಿತದೃಷ್ಟಿಯಿಂದ ನಿಮ್ಮ ವೈಯಕ್ತಿಕ ಹಸ್ತಕ್ಷೇಪಕ್ಕಾಗಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಿಸಿ:

ಪತ್ರದಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆಗೆ ಮುಖ್ಯಮಂತ್ರಿ ಮನವಿ ಮಾಡಿದ್ದು, ‘2019ರ ಫೆಬ್ರುವರಿ ತಿಂಗಳಿಂದ ಕಬ್ಬಿನ ಎಫ್‌ಆರ್‌ಪಿ ದರ ಪ್ರತಿ ಟನ್‌ಗೆ 2,750 ರು.ಗಳಿಂದ 3,650 ರು.ಗೆ ಏರಿಕೆಯಾಗಿದೆ. ಆದರೆ ಸಕ್ಕರೆ ಎಂಎಸ್‌ಪಿ ದರ ಪ್ರತಿ ಕೆಜಿಗೆ ₹31ರಷ್ಟೇ ಇದೆ. ಸಕ್ಕರೆಯು ಪ್ರಸ್ತುತ ಪ್ರತಿ ಕೆಜಿಗೆ ಸುಮಾರು ₹45 ರಂತೆ ಮಾರಾಟವಾಗುತ್ತಿರುವುದರಿಂದ, ಈಗ ಎಂಎಸ್‌ಪಿ ದರವನ್ನು ಪರಿಷ್ಕರಣೆ ಮಾಡಿದರೆ ಗ್ರಾಹಕರ ಮೇಲೆ ಹೊರೆ ಹೆಚ್ಚುವುದಿಲ್ಲ. ಬದಲಿಗೆ ಅದು ರೈತರ ಪಾವತಿಗಳಿಗೆ ಭದ್ರತೆ ಒದಗಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

ಎಥನಾಲ್ ಮೇಲಿನ ನಿರ್ದೇಶನ ಪರಿಷ್ಕರಿಸಬೇಕು. ಜತೆಗೆ ಎಫ್‌ಆರ್‌ಪಿ ಮೂಲ ರಿಕವರಿಯನ್ನು ಮತ್ತೆ ಶೇಕಡಾ 9.5 ಕ್ಕೆ ಇಳಿಸಬೇಕು. ಇದರಿಂದ ಕಡಿಮೆ ರಿಕವರಿ (ಇಳುವರಿ) ಇರುವ ಪ್ರದೇಶಗಳ ರೈತರು ಮಣ್ಣು ಮತ್ತು ಹವಾಮಾನದ ಕಾರಣಕ್ಕಾಗಿ ನಷ್ಟ ಅನುಭವಿಸುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.

ಸಕ್ಕರೆಗೆ ಪ್ರತ್ಯೇಕ ಎಂಎಸ್‌ಪಿ ನಿಗದಿಪಡಿಸಿ:

ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಕನಿಷ್ಠ ಮಾರಾಟ ಬೆಲೆಯನ್ನುನಿಗದಿಪಡಿಸುವುದರಿಂದ ಗೃಹಬಳಕೆಯ ಗ್ರಾಹಕರನ್ನು ರಕ್ಷಿಸಿದಂತಾಗುತ್ತದೆ ಮತ್ತು ಸಗಟು ಖರೀದಿದಾರರು ನ್ಯಾಯಯುತ ಬೆಲೆಯನ್ನು ಪಾವತಿಸುವಂತಾಗುತ್ತದೆ. ಇನ್ನು ಆದಾಯ ಹಂಚಿಕೆ ಸೂತ್ರ ಮರುಪರಿಶೀಲಿಸುವ ಅಗತ್ಯವಿದ್ದು, ಎಥನಾಲ್ ಮತ್ತು ಸಹ-ವಿದ್ಯುತ್ ಉತ್ಪಾದನೆಯ ಆದಾಯವನ್ನು ಒಳಗೊಂಡಂತೆ ಆದಾಯ ಹಂಚಿಕೆ ಸೂತ್ರವನ್ನು ಮರುಪರಿಶೀಲಿಸಬೇಕು. ನೀತಿ ಆಯೋಗದ ಕಾರ್ಯಪಡೆ ಮತ್ತು ಸಿಎಸಿಪಿ ಶಿಫಾರಸು ಮಾಡಿದಂತೆ ‘ಬೆಲೆ ಸ್ಥಿರೀಕರಣ ನಿಧಿ’ ಸ್ಥಾಪಿಸಬೇಕು. ಈ ನಿರ್ಧಾರಗಳ ಸಕಾಲಿಕ ಘೋಷಣೆಯು ರೈತರು ಮುಷ್ಕರ ಹಿಂಪಡೆಯುವಂತೆ ಒಪ್ಪಿಸಲು ಮತ್ತು ಕಬ್ಬು ಅರೆಯುವ ಪ್ರಕ್ರಿಯೆ ಮುಂದುವರಿಯಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದಿದ್ದಾರೆ.

Scroll to load tweet…