ಬಳಕೆಯಾದ ಅಡುಗೆ ಎಣ್ಣೆ ಮರುಬಳಕೆ ತಡೆಯಲು ಆರೋಗ್ಯ ಇಲಾಖೆ ಹೊಸ ಟ್ರೇಸಬಿಲಿಟಿ ಆ್ಯಪ್ ಪರಿಚಯಿಸುತ್ತಿದೆ. ಹೋಟೆಲ್‌ಗಳಿಂದ ಎಣ್ಣೆ ಸಂಗ್ರಹ ಮತ್ತು ವಿಲೇವಾರಿಯನ್ನು ಈ ಆ್ಯಪ್ ಮೂಲಕ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಬೆಂಗಳೂರು (ನ.13): ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಣೆ, ನಿರ್ವಹಣೆ ಹಾಗೂ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಆ್ಯಪ್ ಅಳವಡಿಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಮುಂದಿನ ಮೂರು ತಿಂಗಳೊಳಗೆ ನೂತನ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್‌ಎಸ್‌ಎಸ್‌ಎಐ(FSSAI) ಪ್ರಕಾರ ಅಡುಗೆ ಎಣ್ಣೆ ಮರುಬಳಕೆ ಮಾಡುವಂತಿಲ್ಲ. ಆದರೆ ಶೇ.50 ರಷ್ಟು ಬಳಕೆಯಾದ ಎಣ್ಣೆಯನ್ನು ಸಣ್ಣ-ಪುಟ್ಟ ಹೋಟೆಲ್‌ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಟ್ರೇಸಬಿಲಿಟಿ ಆ್ಯಪ್‌ ನೆರವಿನಿಂದ ರಾಜ್ಯಾದ್ಯಂತ ಬಳಕೆಯಾದ ಅಡುಗೆ ಎಣ್ಣೆಯ ಸಂಗ್ರಹಣೆ, ಸಾಗಣೆ ಹಾಗೂ ವಿಲೇವಾರಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು.

ಪ್ರಯೋಗಿಕವಾಗಿ ಈ ನಾಲ್ಕು ನಗರಗಳಲ್ಲಿ ಜಾರಿ

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ವ್ಯವಸ್ಥೆ ಅನುಷ್ಠಾನ ಮಾಡಿದ ಬಳಿಕ ರಾಜ್ಯಾದ್ಯಂತ ವಿಸ್ತರಿಸುತ್ತೇವೆ ಎಂದರು.

ರಾಜ್ಯದ ಎಲ್ಲ ಆಹಾರ ಉದ್ದಿಮೆದಾರರು ತಮ್ಮಲ್ಲಿ ಬಳಕೆಯಾದ ಅಡುಗೆ ಎಣ್ಣೆಯನ್ನು ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಏಜೆನ್ಸಿಗಳ ಮೂಲಕವೇ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ಮರು ಬಳಕೆ ಎಣ್ಣೆ ಬಯೋಡಿಸೆಲ್‌, ಸೋಪು, ದೀಪದ ಎಣ್ಣೆ ಸೇರಿ ಇನ್ನಿತರ ಉತ್ಪನ್ನಗಳಿಗೆ ಬಳಕೆಯಾಗುತ್ತದೆ. ಬಳಸಿದ ಅಡುಗೆ ಎಣ್ಣೆಗೆ ಸಂಬಂಧಿಸಿದಂತೆ ಎಫ್‌ಎಸ್‌ಎಸ್‌ಎಐ ನಿಯಮ ಸರಳೀಕರಣ ಮಾಡಿದರೆ, ವೈಮಾನಿಕ ಬಳಕೆಗೆ ರಫ್ತು ಮಾಡಲು ಸಹಕಾರಿ ಎಂದು ಯು.ಟಿ.ಖಾದರ್ ತಿಳಿಸಿದರು.

ಈವರೆಗೆ 91 ಲಕ್ಷ ಲೀ. ಅಡುಗೆ ಎಣ್ಣೆ ಸಂಗ್ರಹಣೆ:

2022ರಿಂದ ಇಲ್ಲಿಯವರೆಗೆ ಆಹಾರ ವ್ಯಾಪಾರಸ್ಥರಿಂದ 91,02,794 ಲೀಟರ್ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸಲಾಗಿದೆ. ಕರಿದ ಅಡುಗೆ ಎಣ್ಣೆಯ ಗುಣಮಟ್ಟವನ್ನು ಪರಿಶೀಲಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಟೋಟಲ್‌ ಪೋಲಾರ್‌ ಕಂಪೌಂಡ್ಸ್‌ (ಟಿಪಿಸಿ) ಮೀಟರ್‌ಗಳನ್ನು ಒದಗಿಸಲಾಗಿದೆ. ಬಳಸಿದ ಅಡುಗೆ ಎಣ್ಣೆಯಲ್ಲಿ ಟಿಪಿಸಿ 25 ಪ್ರಮಾಣ ಮೀರಬಾರದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಅಡುಗೆ ಎಣ್ಣೆ ಮೇಲೆ ನಿಗಾ ಹೇಗೆ?

ಸಗಟಿನಲ್ಲಿ ಅಡುಗೆ ಉತ್ಪಾದನೆ ಘಟಕಗಳಿಂದ ಎಣ್ಣೆ ಖರೀದಿಸುವವರು ಈ ಆ್ಯಪ್‌ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಹೋಟೆಲ್‌ ಹಾಗೂ ಆಹಾರ ಉತ್ಪನ್ನಗಳ ತಯಾರಿಕಾ ಘಟಕಗಳು ವಾರಕ್ಕೆ ಅಂದಾಜು 200 ಲೀ. ಎಣ್ಣೆ ಬಳಸಿದರೆ, ಅದರಲ್ಲಿ ಸುಮಾರು 45 ಲೀ. ಕರಿದ ಎಣ್ಣೆಗಳು ಸಂಗ್ರಹವಾಗುತ್ತದೆ. ಇನ್ನು ಮುಂದೆ, ಕರಿದ ಎಣ್ಣೆಯನ್ನು ಮಾರಾಟ ಮಾಡಿರುವುದು ಹಾಗೂ ಖರೀದಿಸಿರುವವರ ವಿವರಗಳನ್ನೂ ಟ್ರೇಸಬಿಲಿಟಿ ಆ್ಯಪ್‌ನಲ್ಲಿ ಉಲ್ಲೇಖಿಸಬೇಕಾಗುತ್ತದೆ. ಈ ಹೊಸ ಆ್ಯಪ್‌ನಲ್ಲಿ ಕರಿದ ಎಣ್ಣೆಯ ವಿವರ ಉಲ್ಲೇಖಿಸುವುದರಿಂದ ಮರುಬಳಕೆ ಎಣ್ಣೆ ಮತ್ತೆ ಬಳಕೆಯಾಗುವುದನ್ನು ತಪ್ಪಿಸಬಹುದು ಎಂದು ಯು.ಟಿ. ಖಾದರ್‌ ವಿವರಿಸಿದರು.