ಬಿಹಾರದ 'ಮತ ಅಧಿಕಾರ್ ಯಾತ್ರೆ'ಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಎದುರು ತಮ್ಮ ಬಲ ಪ್ರದರ್ಶಿಸಿದರು. ಡಿಕೆಶಿ ಶಾಸಕರ ತಂಡದೊಂದಿಗೆ ಹೋದರೆ, ಸಿದ್ದರಾಮಯ್ಯ ಸಚಿವರ ತಂಡದೊಂದಿಗೆ ಬಿಹಾರಕ್ಕೆ ತೆರಳಿದರು. ಇಬ್ಬರೂ ನಾಯಕರು ತಮ್ಮ ಶಕ್ತಿ ಪ್ರದರ್ಶಿಸಿ ರಾಜಕೀಯ ಚದುರಂಗ ಆಡಿದ್ದಾರೆ.
ಬೆಂಗಳೂರು(ಆ.30): ರಾಜ್ಯ ಕಾಂಗ್ರೆಸ್‌ನಲ್ಲಿ ಶಕ್ತಿಪ್ರದರ್ಶನದ ರಾಜಕೀಯ ರಂಗೇರಿದೆ. ಬಿಹಾರದ 'ಮತ ಅಧಿಕಾರ್ ಯಾತ್ರೆ'ಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಎದುರು ತಮ್ಮ ಬಲವನ್ನು ಪ್ರದರ್ಶಿಸಿ, ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಾಬಲ್ಯ ಸಾಬೀತುಪಡಿಸಿದ್ದಾರೆ.
ಡಿಕೆಶಿಯಿಂದ ಶಾಸಕರ ತಂಡದೊಂದಿಗೆ ಶಕ್ತಿಪ್ರದರ್ಶನ
ಕಳೆದ ಭಾನುವಾರ ವಿಶೇಷ ವಿಮಾನದಲ್ಲಿ 10 ಶಾಸಕರ ತಂಡದೊಂದಿಗೆ ಬಿಹಾರಕ್ಕೆ ತೆರಳಿದ ಡಿಕೆ ಶಿವಕುಮಾರ್ ರಾಹುಲ್ ಗಾಂಧಿಯವರೊಂದಿಗೆ ಪ್ರತ್ಯೇಕವಾಗಿ ಭೇಟಿಯಾಗಿದ್ದ ಡಿಸಿಎಂ ಟೀಮ್. ಮತ ಅಧಿಕಾರ್ ಯಾತ್ರೆಯ ಬ್ಯುಸಿ ಶೆಡ್ಯೂಲ್ ನಡುವೆಯೂ ರಾಹುಲ್‌ಗಾಂಧಿಯವರೊಂದಿಗೆ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ್ದರು ಎನ್ನಲಾಗಿದೆ. ಈ ಭೇಟಿಯ ಮೂಲಕ 'ನನ್ನೊಂದಿಗೆ ಶಾಸಕರ ದೊಡ್ಡ ಬೆಂಬಲವಿದೆ' ಎಂಬ ಸಂದೇಶವನ್ನು ರಾಜ್ಯ ನಾಯಕರಿಗೂ, ರಾಹುಲ್ ಗಾಂಧಿಗೂ ನೀಡುವ ಪ್ರಯತ್ನ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಜೊತೆ ತೆರಳಿದ್ದ ಟೀಮ್
- ಶ್ರೀನಿವಾಸ್ ಮಾನೆ, ಶಾಸಕ
- ಬಾಬಾ ಸಾಬ್ ಪಾಟೀಲ್, ಶಾಸಕ
- ರಾಜು ಸೇಠ್ , ಶಾಸಕ
- ರಿಜ್ವಾನ್ ಅರ್ಷದ್, ಶಾಸಕ
- ಬಿಎಂ ನಾಗರಾಜ್, ಶಾಸಕ
- ವೇಣುಗೋಪಾಲ್ ನಾಯಕ್, ಶಾಸಕ
- ನಯನ ಮೋಟಮ್ಮ, ಶಾಸಕಿ
- ಅಶೋಕ್ ಪಟ್ಟಣ್, ಶಾಸಕ
- ಆನಂದ್, ಶಾಸಕ
- ಎನ್.ಟಿ ಶ್ರೀನಿವಾಸ್, ಶಾಸಕ.
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಕಡೆಯಿಂದಲೂ ಪ್ರತಿತಂತ್ರ !
ಇದಕ್ಕೆ ಪ್ರತಿಯಾಗಿ, ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರ ತಂಡದೊಂದಿಗೆ ಬಿಹಾರ ಯಾತ್ರೆಗೆ ತೆರಳಿ, ತಾವೂ ತಮ್ಮ ಬಲವನ್ನು ತೋರಿಸಿದ್ದಾರೆ. ವಿಶೇಷ ವಿಮಾನದಲ್ಲಿ ಕರೆದೊಯ್ದಿದ್ದಾರೆ. ರಾಹುಲ್ ಗಾಂಧಿಯವರ ರ‍್ಯಾಲಿಯಲ್ಲಿ ಭಾಗವಹಿಸಿದ ಸಿದ್ದರಾಮಯ್ಯ, ನನ್ನೊಂದಿಗೆ ಸಚಿವರ ದೊಡ್ಡ ತಂಡವಿದೆ ಎಂಬ ಸಂದೇಶವನ್ನು ರಾಜಕೀಯ ವಲಯಕ್ಕೆ ಸಾರಿದ್ದಾರೆ.
ಇದನ್ನೂ ಓದಿ: ಅಜ್ಮೇರ್‌ಗೆ ಚಾದರ್ ಹಾಕಿದ್ರೆ ಮೋದಿ ಮುಸ್ಲಿಂ ಆಗೋಲ್ಲ..' ಬಾನು ಮುಷ್ತಾಕ್ ವಿರುದ್ಧ ಫತ್ವಾ ಇಲ್ಲ ಎಂದ ಮೌಲಾನ
ಸಿಎಂ ಸಿದ್ದರಾಮಯ್ಯ ಜೊತೆ ತೆರಳಿದ್ದ ಟೀಮ್
- ಡಾ.ಜಿ ಪರಮೇಶ್ವರ್, ಸಚಿವ
- ಸತೀಶ್ ಜಾರಕಿಹೊಳಿ, ಸಚಿವ
- ಜಮೀರ್ ಅಹಮದ್ ಖಾನ್, ಸಚಿವ
- ಕೆಜೆ ಜಾರ್ಜ್,ಸಚಿವ
- ಎಂ.ಸಿ ಸುಧಾಕರ್, ಸಚಿವ
- ಪೊನ್ನಣ್ಣ, ಶಾಸಕ
- ಬಿಕೆ ಹರಿಪ್ರಸಾದ್, ಎಂಎಲ್‌ಸಿ
- ಸಲೀಂ ಅಹಮದ್, ಎಂಎಲ್‌ಸಿ
- ನಜೀರ್ ಅಹಮದ್, ಎಂಎಲ್‌ಸಿ
- ಯತೀಂದ್ರ ಸಿದ್ದರಾಮಯ್ಯ, ಎಂಎಲ್‌ಸಿ
ಕಾಂಗ್ರೆಸ್‌ನಲ್ಲಿ ಹಾವು-ಏಣಿ ಆಟ!
ಕಾಂಗ್ರೆಸ್‌ನಲ್ಲಿ ಕೆಲ ದಿನಗಳಿಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತಕ್ಕಡಿ ತೂಗುವ ರಾಜಕೀಯ ಆಟ ಜೋರಾಗಿದೆ. ಕೆಎನ್ ರಾಜಣ್ಣ ವಿವಾದದ ಬಳಿಕ ಸಿದ್ದರಾಮಯ್ಯ ತಂಡ ಕೊಂಚ ಹಿನ್ನಡೆ ಅನುಭವಿಸಿತ್ತು. ಇನ್ನೊಂದೆಡೆ, ಡಿಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ವಿವಾದದಲ್ಲಿ ಎಡವಟ್ಟು ಮಾಡಿಕೊಂಡು ಕ್ಷಮೆಯಾಚಿಸಿದ್ದರು. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಬಣಕ್ಕೆ ಬಲ ಬಂದಿದೆ. ಬಿಹಾರ ಯಾತ್ರೆಯಲ್ಲಿ ಇಬ್ಬರೂ ನಾಯಕರು ತಮ್ಮ ಶಕ್ತಿಯನ್ನು ರಾಹುಲ್ ಗಾಂಧಿ ಮುಂದೆ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ ವಿವಾದ, ಬಾನು ಮುಷ್ತಾಕ್ ವಿರುದ್ಧ ಮುಸ್ಲಿಂ ಮೌಲ್ವಿಗಳಿಂದ ಫತ್ವಾ? ಕಾಂಗ್ರೆಸ್ ವಿರುದ್ಧ ಮುಖಂಡರು ಗಂಭೀರ ಆರೋಪ!
ರಾಜಕೀಯ ತಂತ್ರದ ರಂಗಸ್ಥಳವಾದ ಬಿಹಾರ
ಮತ ಅಧಿಕಾರ್ ಯಾತ್ರೆಯ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ರಾಹುಲ್ ಗಾಂಧಿಯವರು ಡಿಕೆ ಶಿವಕುಮಾರ್ ತಂಡದ ಶಾಸಕರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದು, ಈ ರಾಜಕೀಯ ಚದುರಂಗದಲ್ಲಿ ಡಿಕೆಶಿಯ ತಂತ್ರವನ್ನು ಸಾಬೀತುಪಡಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ತಮ್ಮ ಆಪ್ತ ಸಚಿವರ ದಂಡನ್ನು ಕರೆದೊಯ್ದು, ತಾವೇ ಬಲಿಷ್ಠರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್‌ನ ಈ ಶಕ್ತಿಪ್ರದರ್ಶನ ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಯಾರ ಪಾಲಿಗೆ ಒಲಿಯಲಿದೆ ಎಂಬುದು ಕುತೂಹಲಕಾರಿಯಾಗಿದೆ.
