ದರ್ಭಾಂಗದಲ್ಲಿ ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರಿಜ್ವಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಕಾಂಗ್ರೆಸ್-ಆರ್‌ಜೆಡಿ ರ್ಯಾಲಿಯಲ್ಲಿ ನಡೆದಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ. 

ಬಿಹಾರದ ದರ್ಭಾಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ ಆರೋಪದ ಮೇಲೆ ರಿಜ್ವಿ ಎಂಬ ವ್ಯಕ್ತಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 27ರಂದು ದರ್ಭಾಂಗದಲ್ಲಿ ನಡೆದ ಕಾಂಗ್ರೆಸ್-ಆರ್‌ಜೆಡಿ ಒಕ್ಕೂಟದ 'ಮತದಾರರ ಹಕ್ಕು ಯಾತ್ರೆ' ರ್ಯಾಲಿಯ ಸಂದರ್ಭದಲ್ಲಿ ರಿಜ್ವಿ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅಸಭ್ಯ ಪದಗಳನ್ನು ಬಳಸಿದ್ದರು ಎಂದು ಆರೋಪಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ, ಆಕ್ರೋಶಕ್ಕೆ ಕಾರಣವಾಗಿದೆ.

ಗೃಹ ಸಚಿವ ಅಮಿತ್ ಶಾ ಖಂಡನೆ:

ಈ ಘಟನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಪೋಸ್ಟ್ ಮಾಡಿರುವ ಶಾ, 'ದರ್ಭಾಂಗದಲ್ಲಿ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಕಾಂಗ್ರೆಸ್-ಆರ್‌ಜೆಡಿ ವೇದಿಕೆಯಿಂದ ಬಳಸಲಾದ ನಿಂದನೀಯ ಭಾಷೆ ಖಂಡನೀಯವಷ್ಟೇ ಅಲ್ಲ, ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಈ ಘಟನೆಯನ್ನು ಖಂಡಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಈ ಕೃತ್ಯಕ್ಕಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. 'ಕಾಂಗ್ರೆಸ್‌ನ 'ಮತ ಹಕ್ಕು ಯಾತ್ರೆ' ವೇದಿಕೆಯಿಂದ ಪ್ರಧಾನಿಯವರನ್ನು ನಿಂದಿಸಿದ ರೀತಿ ಅತ್ಯಂತ ಖಂಡನೀಯ. ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಬಿಹಾರದ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ. ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಘಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ವೇದಿಕೆಯಲ್ಲಿ ಉಪಸ್ಥಿತರಿರಲಿಲ್ಲ ಎಂದು ಮಾಹಿತಿ ತಿಳಿಸಿದೆ. ಆದರೆ, ಬಿಹಾರ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪ್ರತಿಪಕ್ಷಗಳ ಈ ರ್ಯಾಲಿಯಲ್ಲಿ ಉಂಟಾದ ವಿವಾದವು ರಾಜಕೀಯ ವಾತಾವರಣವನ್ನು ಉದ್ವಿಗ್ನಗೊಳಿಸಿದೆ. ಪೊಲೀಸರು ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ತನಿಖೆ ಮುಂದುವರಿದಿದೆ.