Asianet Suvarna News Asianet Suvarna News

Basvaraj Bommai Loses Cool: ಬಾಸಿಸಂ ಬಿಡಿ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲಾಸ್‌!

*ಭೂ ವ್ಯವಹಾರದಲ್ಲಿ ಭಾಗಿಯಾದರೆ ಸಹಿಸಲ್ಲ
*ನಿತ್ಯ 10 ಗಂಟೆ ಕೆಲಸ ಮಾಡಿ: ಬೊಮ್ಮಾಯಿ
*5 ಡೀಸಿಗಳ ಬಗ್ಗೆಅತೀವ ಅತೃಪ್ತಿ: ಸಿಎಂ

Karnataka CM Basavaraj Bommai unhappy with 5 District Collectors including Belagavi Mysuru mnj
Author
Bengaluru, First Published Jan 1, 2022, 4:28 AM IST
  • Facebook
  • Twitter
  • Whatsapp

ಬೆಂಗಳೂರು (ಜ. 01):‘ಜಿಲ್ಲಾಧಿಕಾರಿಗಳು ಜನರು ಹಾಗೂ ಸರ್ಕಾರದ ನಡುವಿನ ಕೊಂಡಿ. ನೀವು ಉತ್ತಮವಾಗಿ ಕೆಲಸ ಮಾಡಿದರೆ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ. ಹೀಗಾಗಿ ಬಾಸಿಸಂ ಬಿಟ್ಟು ತಳಮಟ್ಟದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಅರ್ಹತೆ ಕಳೆದುಕೊಳ್ಳುತ್ತೀರಿ.’ಇದು ಶುಕ್ರವಾರ ಸುದೀರ್ಘ ಸಮಯ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basav Bommai) ಅವರು ಎಚ್ಚರಿಕೆ ನೀಡಿದ ಪರಿ.

ಜಿಲ್ಲಾಧಿಕಾರಿಗಳಿಗೆ ಅಧಿಕಾರ, ಜವಾಬ್ದಾರಿ, ಬದ್ಧತೆ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುವ ಕುರಿತು ಪಾಠ ಮಾಡಿದ ಮುಖ್ಯಮಂತ್ರಿಗಳು, ನೆರೆ ಪರಿಹಾರ, ವಸತಿ ಯೋಜನೆ ವಿಳಂಬ ಮಾಡುವ ಹಾಗೂ ಭೂ ವ್ಯವಹಾರಗಳಲ್ಲಿ ಭಾಗಿಯಾದ ಕೆಲ ಜಿಲ್ಲಾಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

5 ಡೀಸಿಗಳ ಬಗ್ಗೆಅತೀವ ಅತೃಪ್ತಿ

ಚಿಕ್ಕಮಗಳೂರು, ಬೆಳಗಾವಿ, ಮೈಸೂರು, ವಿಜಯನಗರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಕುರಿತು ಸಿಎಂ ಬೊಮ್ಮಾಯಿ ಕೆಂಡಾಮಂಡಲರಾದರು ಎಂದು ತಿಳಿದುಬಂದಿದೆ. ಕಾರ್ಯಕ್ರಮ ಅನುಷ್ಠಾನ, ಮೂಲಸೌಕರ್ಯ ಅಭಿವೃದ್ಧಿಯಲ್ಲಿನ ಹಿನ್ನಡೆ ಕುರಿತು ಅತೃಪ್ತಿ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ಏಳು ಜಿಲ್ಲೆಗಳಲ್ಲಿ ಅರ್ಧಕ್ಕರ್ಧ ಕೆಲಸ ಬಾಕಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲವಿದೆ

ಬಡವರ ಕೆಲಸವನ್ನು ಸಹಾನುಭೂತಿಯಿಂದ ಮಾಡಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು. ಜಿಲ್ಲಾಡಳಿತದ ಉತ್ತಮ ಕಾರ್ಯಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಎಲ್ಲಾ ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲವಿದೆ. ಆದರೆ, ದುರುದ್ದೇಶಪೂರಿತ ಹಾಗೂ ತಪ್ಪು ನಡವಳಿಕೆಗಳನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿಗಳು ಜಿಲ್ಲಾ ಮ್ಯಾಜಿಸ್ಪ್ರೇಟ್‌ (District Magistrate) ಆಗಿಯೂ ಕೆಲಸ ಮಾಡುತ್ತಾರೆ. ಜಿಲ್ಲೆಯ ಮಟ್ಟಕ್ಕೆ ಅತಿ ಹೆಚ್ಚು ವಿವೇಚನಾಧಿಕಾರ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ. ಆದರೆ, ನಾನೇ ಬಾಸ್‌ ಎಂಬ ನಡವಳಿಕೆ ರೂಢಿಸಿಕೊಳ್ಳಬಾರದು. ಅಧಿಕಾರ ಎಂಬುದು ಮೃದುತ್ವ ಹಾಗೂ ವಿನಯತೆಯನ್ನು ತಂದುಕೊಡಬೇಕು. ಬಾಸಿಸಂ ಬಿಟ್ಟು ಜನರ ಕೆಲಸ ಮಾಡಬೇಕು. ಮುಖ್ಯವಾಗಿ ಭೂ ವ್ಯವಹಾರದಿಂದ ದೂರ ಇರಬೇಕು ಎಂದು ಹೇಳಿದರು. ಈ ಮೂಲಕ ಭೂ ಅಕ್ರಮಗಳಲ್ಲಿ ಭಾಗಿಯಾಗುತ್ತಿರುವ ಜಿಲ್ಲಾಧಿಕಾರಿಗಳಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಜಿಲ್ಲಾಧಿಕಾರಿಗಳು ಕೇವಲ ಅಧಿಕಾರ ಚಲಾಯಿಸಲು ಸೀಮಿತವಾಗಬಾರದು. ಜಿಲ್ಲೆಯಲ್ಲಿನ ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳ ಕಾರ್ಯವೈಖರಿ ಬಗ್ಗೆ ನಿಗಾ ವಹಿಸಬೇಕು. ಜನರಿಗಾಗಿ ದಿನಕ್ಕೆ 10 ಗಂಟೆ ಕೆಲಸ ಮಾಡಬೇಕು. ಇಲ್ಲದಿದ್ದರೆ ಆರಾಮವಾಗಿರುವ ಇಲಾಖೆಗಳನ್ನು ನೋಡಿಕೊಳ್ಳಬೇಕು ಎಂದು ಚಾಟಿ ಬೀಸಿದರು.

ಬಿಸಿ ಮುಟ್ಟಿಸಿದ ಸಿಎಂ:

ಅತಿವೃಷ್ಟಿಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ಮತ್ತು ಬೆಳೆ ಪರಿಹಾರ ನೀಡಿರುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕೆಲ ಜಿಲ್ಲೆಗಳಲ್ಲಿ 48 ಗಂಟೆಯೊಳಗೆ ಬೆಳೆ ಪರಿಹಾರ ನೀಡಲಾಗಿದೆ. ಒಂದು ತಿಂಗಳಲ್ಲಿ 14 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ, ಕೆಲ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ 3.5 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಸಮೀಕ್ಷೆಯೇ ನಡೆದಿಲ್ಲ. ಕೆಳ ಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದಿದ್ದರೆ ಇದೇ ರೀತಿ ಆಗುತ್ತದೆ. ಕೆಳ ಹಂತದ ಅಧಿಕಾರಿಗಳು ಜಿಲ್ಲಾಧಿಕಾರಿಗಳಂತೆ ಕೆಲಸ ಮಾಡಲು ಬಿಡಬಾರದು. ಸ್ವಂತಿಕೆ, ವಿವೇಚನೆ ಇಟ್ಟುಕೊಂಡು ಕೆಲಸ ಮಾಡಬೇಕು. ಯಾವ್ಯಾವ ಜಿಲ್ಲೆಗಳಲ್ಲಿ ಬೆಳೆ ಪರಿಹಾರ ವಿಳಂಬವಾಗಿದೆಯೋ ಅವರು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಸಂಬಂಧಪಟ್ಟಜಿಲ್ಲಾಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಜನರ ಬಳಿಗೆ ಹೋಗಿ ಸ್ಪಂದಿಸಿ:

ಜನಸ್ಪಂದನೆಯ ದೃಷ್ಟಿಯಿಂದ ನಮ್ಮ ಸರ್ಕಾರ ತೆಗೆದುಕೊಳ್ಳುವ ದಿಟ್ಟನಿರ್ಧಾರಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಉತ್ತಮ ಸ್ಪಂದನೆ ಹಾಗೂ ಸಕಾರಾತ್ಮಕ ಮನೋಭಾವದಿಂದ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕು. ಅಧಿಕಾರಕ್ಕೆ ಹೊಣೆಗಾರಿಕೆ ಇರುತ್ತದೆ. ಜಿಲ್ಲೆಗಳಲ್ಲಿ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಪ್ರತಿ ತಿಂಗಳು ತಪ್ಪದೇ ವರದಿ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿಗಳು ಕೇವಲ, ಸರ್ಕಾರದ ಅಥವಾ ಸಚಿವಾಲಯದ ಪ್ರತಿನಿಧಿಗಳಷ್ಟೇ ಅಲ್ಲ. ತಳಹಂತದ ವ್ಯವಸ್ಥೆ, ಜನತೆ, ಅವರ ಸಮಸ್ಯೆಯ ಭಾಗವಾಗಿಯೂ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮುಖ್ಯಸ್ಥರ ಹೊಣೆಯೊಂದಿಗೆ ತಳಹಂತದ ಜನರ ಸೇವೆಯ ಜವಾಬ್ದಾರಿಯೂ ನಿಮ್ಮದಾಗಿದೆ ಎಂದು ತಿಳಿಸಿದರು.

ಪ್ರತಿ ತಿಂಗಳು 1 ದಿನ ಒತ್ತುವರಿ ತೆರವು

ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಜಿಲ್ಲೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ತಪ್ಪದೆ ನಡೆಯಬೇಕು. ಜಿಲ್ಲಾಧಿಕಾರಿಗಳು ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ಒತ್ತುವರಿ ತೆರವು ಕಾರ್ಯಕ್ಕಾಗಿ ಮೀಸಲಿಡಬೇಕು ಎಂದು ಹೇಳಿದರು.

ಇದನ್ನೂ ಓದಿ:

1) Government of Karnataka: ಆಡಳಿತ ಯಂತ್ರಕ್ಕೆ ಚುರುಕು, ಪ್ರತಿನಿತ್ಯ 10 ತಾಸು ಕೆಲಸ ಮಾಡಿ: ಸಿಎಂ ತಾಕೀತು

2) Suresh Kumar Simplicity : ಸ್ನೇಹಿತರೊಂದಿಗೆ ಬಿಎಂಟಿಸಿ ಏರಿದ ಸುರೇಶ್ ಕುಮಾರ್

Follow Us:
Download App:
  • android
  • ios