ಟಿಪ್ಪು ನಿಜ ಕನಸುಗಳು ಪುಸ್ತಕ ಮೇಲಿದ್ದ ತಡೆಯಾಜ್ಞೆ ತೆರವು, ಕೋರ್ಟ್‌ನಲ್ಲಿ ಕಾರ್ಯಪ್ಪಗೆ ಬೃಹತ್ ಗೆಲುವು!
ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ಪುಸ್ತಕದ ಮಾರಾಟ ಮತ್ತು ವಿತರಣೆಗೆ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ.
ಬೆಂಗಳೂರು(ಡಿ.08): ರಾಜ್ಯದಲ್ಲಿ ಇತ್ತೀಚೆಗೆ ಟಿಪ್ಪು ಮತ್ತೆ ಭಾರಿ ವಿವಾದ ಸೃಷ್ಟಿಸಿತ್ತು. ಟಿಪ್ಪು ಪ್ರತಿಮೆ ವಿವಾದ ಬೆನ್ನಲ್ಲೇ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿರುವ ಟಿಪ್ಪು ನಿಜ ಕನಸುಗಳು ಪುಸ್ತಕ ಹೊರತಂದಿದ್ದರು. ಆದರೆ ಈ ಪುಸ್ತಕ ಮಾರಾಟ ಹಾಗೂ ವಿತರಣೆಗೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಇದೀಗ ಈ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಅಡ್ಡಂಡ ಸಿ ಕಾರ್ಯಪ್ಪ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬೆಂಗಳೂರು ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಮಾಜಿ ಅಧ್ಯಕ್ಷ ಈ ಪುಸ್ತಕಕ್ಕೆ ತಡೆ ನೀಡಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕಾರ್ಯರ್ಪ ಅವರ ವಾದ ಆಲಿಸಿದ ಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
ಇದೀಗ ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟ ಹಾಗೂ ವಿತರಣೆಗೆ ಯಾವುದೇ ಅಡ್ಡಿ ಇಲ್ಲ. ಟಿಪ್ಪು ನಿಜಕನಸುಗಳು ಪುಸ್ತಕ ಭಾರಿ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಈ ಪುಸ್ತಕದಲ್ಲಿ ಟಿಪ್ಪು ಕ್ರೂರಿ ಎಂದು ಬಿಂಬಿಸಲಾಗಿದೆ. ಆಧರೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ವಕ್ಫ್ ಬೋರ್ಡ್ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್. ರಫೀವುಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿವಾದ ಮಂಜಿಸಿದ ಅಡ್ಡಂಡ ಸಿ ಕಾರ್ಯಪ್ಪ, ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ.
ಟಿಪ್ಪು ನಿಜಕನಸುಗಳು ಪುಸ್ತಕ ಬಿಡುಗಡೆ: ಲೇಖಕ ರೋಹಿತ್ ಚಕ್ರತೀರ್ಥರಿಗೆ ಬೆದರಿಕೆ ಕರೆ
ನಾಟಕ ಪ್ರದರ್ಶನಕ್ಕೆ ತಡೆ ಇಲ್ಲ, ಪುಸ್ತಕ ಮಾರಾಟಕ್ಕೆ ತಡೆ
ಬೆಂಗಳೂರು ಜಿಲ್ಲಾ ವಕ್ಫ್ ಬೋರ್ಡ್ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್. ರಫೀವುಲ್ಲಾ ದಾಖಲಿಸಿರುವ ಅಸಲು ದಾವೆ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಆರ್. ಮೆಂಡೋನ್ಕಾ ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟ ಹಾಗೂ ವಿತರಣೆಗೆ ತಡೆಯಾಜ್ಞೆ ನೀಡಿತ್ತು. ಕೃತಿಯನ್ನು ಆನ್‌ಲೈನ್ ವೇದಿಕೆ ಸೇರಿದಂತೆ ಎಲ್ಲಿಯೂ ಮಾರಾಟ ಹಾಗೂ ವಿತರಣೆ ಮಾಡಬಾರದು. ಆದರೆ, ಈ ಮುಂದೆ ಎದುರಾಗುವ ಪರಿಣಾಮಗಳನ್ನು ಎದುರಿಸುವ ಸ್ವಯಂ ಜವಾಬ್ದಾರಿಯೊಂದಿಗೆ ಲೇಖಕರು, ಮುದ್ರಕರು ಹಾಗೂ ಪ್ರಕಾಶಕರು ಪುಸ್ತಕಗಳನ್ನು ಮುದ್ರಿಸಲು ಮತ್ತು ಈಗಾಗಲೇ ಮುದ್ರಿಸಿರುವ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಈ ಆದೇಶ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು. ಅಲ್ಲದೆ, ದಾವೆ ಸಂಬಂಧ ಪ್ರತಿವಾದಿಗಳಾದ ಲೇಖಕ ಅಡ್ಡಂಡ ಸಿ.ಕಾರ್ಯಪ್ಪ, ಪ್ರಕಾಶಕರಾದ ಅಯೋಧ್ಯಾ ಪ್ರಕಾಶನ ಹಾಗೂ ಮುದ್ರಣಕಾರರಾದ ರಾಷ್ಟೊ್ರೕತ್ಥಾನ ಮುದ್ರಣಾಲಯಕ್ಕೆ ಸಮನ್ಸ್ ಜಾರಿಗೊಳಿಸಿ ಆದೇಶಿಸಿತ್ತು.
ಟಿಪ್ಪುವಿನ ಪ್ರತಿಮೆ ಏಕೆ ಬೇಕು?: ಸಾಹಿತಿ ಎಸ್.ಎಲ್.ಭೈರಪ್ಪ
ಟಿಪ್ಪು ನಿಜ ಕನಸುಗಳು ಕೃತಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ತಪ್ಪು ಮಾಹಿತಿ ಹರಡಲಾಗಿದೆ. ಲೇಖಕರು ಎಲ್ಲಿಂದ ಮಾಹಿತಿಯನ್ನು ಪಡೆದಿದ್ದಾರೆ ಎಂಬುದನ್ನು ಪುಸ್ತಕದಲ್ಲಿ ತೋರಿಸಿಲ್ಲ. ಪುಸ್ತಕದಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಇತಿಹಾಸದ ಸಮರ್ಥನೆ ಅಥವಾ ಪುರಾವೆಗಳಿಲ್ಲ. ಲೇಖಕರು ಇತಿಹಾಸದ ತಿಳಿವಳಿಕೆಯಿಲ್ಲದೆ ಕೃತಿ ರಚಿಸಿದ್ದಾರೆ. ಇಸ್ಲಾಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾದ ಪದಗಳನ್ನು ಬರೆಯಲಾಗಿದೆ. ಶಾಲೆಗಳಲ್ಲಿ ಕಲಿಸುವ ಪಠ್ಯಪುಸ್ತಕಗಳಲ್ಲಿ ಟಿಪ್ಪು ಬಗ್ಗೆ ವಿವರಿಸುವ ಅಂಶಗಳು ಸುಳ್ಳು ಹೇಳಿರುವ ಲೇಖಕರು, ಕೃತಿಯ ಪ್ರಕಟಣೆಯಿಂದ ಸಾರ್ವಜನಿಕ ಶಾಂತಿಯನ್ನು ಕದಡಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ ಎಂದು ದಾವೆಯಲ್ಲಿ ದೂರಲಾಗಿತ್ತು.
‘ಟಿಪ್ಪು ನಿಜ ಕನಸುಗಳು’ ಕೃತಿ ಮಾರಾಟಕ್ಕೆ ಮಾತ್ರ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ನಾಟಕ ಪ್ರದರ್ಶನಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಪೂರ್ವ ನಿಗದಿತ ದಿನಾಂಕಗಳಂದು ನಾಟಕ ಪ್ರದರ್ಶನ ನಡೆಯಲಿದೆ ಎಂದು ಲೇಖಕ ಹಾಗೂ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದರು. ಇದೀಗ ಪುಸ್ತಕದ ಮೇಲಿದ್ದ ತಡೆಯಾಜ್ಞೆ ತೆರವಾಗಿದೆ. ಇತ್ತ ನಾಟಕ ಪ್ರದರ್ಶನ ಎಂದಿನಂತೆ ನಡೆಯುತ್ತಿದೆ.