ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದ್ದು, ಮಂಗಳವಾರ 15.57 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಸಮೀಕ್ಷೆ ಪೂರ್ಣಗೊಂಡ ಮನೆಗಳ ಸಂಖ್ಯೆ 57 ಲಕ್ಷ ದಾಟಿದೆ.

ಬೆಂಗಳೂರು (ಅ.01): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದ್ದು, ಮಂಗಳವಾರ 15.57 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಸಮೀಕ್ಷೆ ಪೂರ್ಣಗೊಂಡ ಮನೆಗಳ ಸಂಖ್ಯೆ 57 ಲಕ್ಷ ದಾಟಿದೆ. ಬಾಕಿ ಉಳಿದ ಏಳು ದಿನಗಳಲ್ಲೂ ಇದೇ ಪ್ರಮಾಣದಲ್ಲಿ ಸಮೀಕ್ಷೆ ನಡೆದರೆ ನಿಗದಿತ ಅವಧಿಯೊಳಗೆ ಸಮೀಕ್ಷೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಮೀಕ್ಷೆಗೆ ಒಟ್ಟು 1,43,77,978 ಮನೆಗಳನ್ನು ಗುರುತಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿತ್ಯ ಶೇ.10ರಷ್ಟು (ಶೇ.11.85 ಲಕ್ಷ) ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ತಾಕೀತು ಮಾಡಿದ ಬಳಿಕ ಸಮೀಕ್ಷೆ ಕಾರ್ಯದ ವೇಗ ಹೆಚ್ಚುತ್ತಿದೆ.

ಶನಿವಾರ 8 ಲಕ್ಷಕ್ಕೂ ಹೆಚ್ಚು, ಭಾನುವಾರ ಮತ್ತು ಸೋಮವಾರ ತಲಾ 12 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದವು. ಮಂಗಳವಾರ ಇನ್ನಷ್ಟು ಹೆಚ್ಚಾಗಿ 15 ಲಕ್ಷ ದಾಟಿದೆ. ಇದರೊಂದಿಗೆ ಈವರೆಗೆ 57,08,030 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಶೇ. 40 ಸಮೀಪಿಸಿದೆ. ಸಮೀಕ್ಷೆ ಪೂರ್ಣಗೊಳಿಸಲು ಅ.7 ಕೊನೆಯ ದಿನವಾಗಿರುವುದರಿಂದ ಉಳಿದ 7 ದಿನಗಳಲ್ಲಿ ಇನ್ನೂ 86 ಲಕ್ಷಕ್ಕೂ ಹೆಚ್ಚು ಮನೆಗಳ (ಶೇ.60) ಸಮೀಕ್ಷೆ ನಡೆಯಬೇಕಿದೆ.

ಕೊಪ್ಪಳ, ಹಾವೇರಿಯಲ್ಲಿ ಶೇ.60 ಸಮೀಕ್ಷೆ: ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರದವರೆಗೆ ಬಹುತೇಕ ಶೇ.60 ರಷ್ಟು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಉಳಿದಂತೆ ಗದಗದಲ್ಲಿ ಶೇ.54, ಚಿತ್ರದುರ್ಗ ಲ್ಲಿ ಶೇ.53. ದಾವಣಗೆರೆ ಶೇ.51, ಮೈಸೂರು ಜಿಲ್ಲೆಯಲ್ಲಿ ಶೇ.50 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ನಡೆಸಲಾಗಿದೆ. ಹಿಂದುಳಿದಿದ್ದ ಉಡುಪಿ ಮತ್ತು ಮೈಸೂರು ಜಿಲ್ಲೆಗಳಲ್ಲೂ ಸಮೀಕ್ಷೆ ವೇಗ ಪಡೆದಿದ್ದು ಮಂಗಳವಾರ ಕ್ರಮವಾಗಿ ಶೇ.21.91 ಮತ್ತು ಶೇ.26.1 ತಲುಪಿದೆ.

ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ಶೇ.30ರಿಂದ ಗರಿಷ್ಠ ಶೇ.50ರವರೆಗೆ ಸಮೀಕ್ಷೆ ನಡೆದಿರುವುದು ಕಂಡುಬಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇನ್ನೂ ಸಮೀಕ್ಷೆ ಆರಂಭವಾಗಿಲ್ಲ. ಜಿಬಿಎ ವ್ಯಾಪ್ತಿ ಹೊರತುಪಡಿಸಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.10ರಷ್ಟು ಸಮೀಕ್ಷೆ ನಡೆದಿರುವುದಾಗಿ ತಿಳಿಸಲಾಗಿದೆ.

‘ಸಮೀಕ್ಷೆಗೆ ಬೆಳಗ್ಗೆ 6ಕ್ಕೆ ಬರೋದಕ್ಕೆ ಹೇಳ್ತಾರೆ’

ಬೆಳ್ಳಂಬೆಳಗ್ಗೆ 6ಕ್ಕೆ ಜಾತಿ ಗಣತಿಗೆ ಬರಬೇಕು ಎಂದು ಹೇಳುತ್ತಾರೆ. ಹೀಗಾದರೆ ಹೇಗೆ ಮಾಡೋದು. ಅಷ್ಟೊತ್ತಿಗೆ ಯಾರ ಮನೆಯಲ್ಲಿ ಮಾಹಿತಿ ನೀಡ್ತಾರೆ, ಎಷ್ಟೋ ಜನ ಇನ್ನೂ ಎದ್ದಿರುವುದೇ ಇಲ್ಲ. ರಾತ್ರಿಯೇ ಮೆಸೇಜ್‌ ಮಾಡ್ತಾರೆ ಎಂದು ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ನೇಮಕಗೊಂಡಿರುವ ಶಿಕ್ಷಕಿಯರು ಗೋಳು ತೋಡಿಕೊಂಡಿದ್ದಾರೆ. ಪ್ರತಿದಿನ 8ರಿಂದ 9ಗಂಟೆಗೆ ಗಣತಿ ಕಾರ್ಯ ತೆರಳುತ್ತಿದ್ದರು. ಆದರೆ, ಇದೀಗ ಬೆಳಗ್ಗೆ 6 ಗಂಟೆಗೆ ಗಣತಿ ಕಾರ್ಯ ಶುರು ಮಾಡುವಂತೆ ಸೂಚಿಸಲಾಗುತ್ತಿದೆ. ಶಿಕ್ಷಕರಾದರೆ ಹೇಗೋ ಬಂದು ಬಿಡಬಹುದು.

ಆದರೆ, ಶಿಕ್ಷಕಿಯರು ಹಾಗೆ ಬರಲು ಆಗದು. ಮನೆಯಲ್ಲಿನ ಕೆಲಸ-ಕಾರ್ಯ ಮುಗಿಸಿಕೊಂಡೇ ಬರಬೇಕು. ಏನಾದರೂ ನಮ್ಮ ಸಮಸ್ಯೆಗಳನ್ನು ಹೇಳಿದರೆ ಕರ್ತವ್ಯ ಲೋಪದ ಪಟ್ಟ ಕಟ್ಟಿ ಅಮಾನತಿನ ಶಿಕ್ಷೆ ಕೊಡುತ್ತಾರೆ. ಹೀಗಾದರೆ ಹೇಗೆ ಮಾಡಬೇಕು ಎಂಬುದು ಶಿಕ್ಷಕಿಯರ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಕಿಯರಿಗೂ ಸಾಕಷ್ಟು ಸಮಸ್ಯೆಗಳಿರುತ್ತವೆ. ಅವುಗಳನ್ನು ಸ್ವಲ್ಪ ಅರಿತುಕೊಂಡು ಇಷ್ಟೊತ್ತಿಗೆ ಬರಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಬಾರದು. ಜತೆಗೆ ಸಮೀಕ್ಷೆಯ ಅವಧಿಯನ್ನು ಕೆಲದಿನದ ಮಟ್ಟಿಗೆ ವಿಸ್ತರಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಒಕ್ಕೊರಲಿನ ಆಗ್ರಹ ಕೇಳಿಬರುತ್ತಿದೆ.