ರಾಜ್ಯಾದ್ಯಂತ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವ ಕುರಿತಂತೆ ನಿಯಮ ರೂಪಿಸುವಂತೆ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ವಿಧಾನ ಪರಿಷತ್‌ (ಡಿ.13): ‘ರಾಜ್ಯಾದ್ಯಂತ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವ ಕುರಿತಂತೆ ನಿಯಮ ರೂಪಿಸುವಂತೆ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಜಾರಿಗೆ ತರಲಾಗುವುದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಿಂದ ರಾಜ್ಯಮಟ್ಟದವರೆಗೆ ವಿವಿಧ ಸಮಿತಿ ರಚಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಕಾಂಗ್ರೆಸ್‌ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ವಾಣಿಜ್ಯ, ಕೈಗಾರಿಕೆ, ಟ್ರಸ್ಟ್‌, ಆಸ್ಪತ್ರೆ, ಹೋಟೆಲ್‌, ಮನರಂಜನಾ ಕೇಂದ್ರ ಮುಂತಾದವು ಕಡೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರಬೇಕೆಂದು ಕಾಯ್ದೆ ಜಾರಿಗೆ ತರಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಶೇ.100, ಕೆಲವೆಡೆ ಶೇ.90-95ರಷ್ಟು ಜಾರಿಗೆ ತರಲಾಗಿದೆ. ಈ ನಿಯಮ ಉಲ್ಲಂಘನೆಗೆ ಮೊದಲ ಬಾರಿ ಅಪರಾಧಕ್ಕೆ 5000 ರು. 2ನೇ ಬಾರಿಗೆ 10,000 ರು. ಹಾಗೂ ನಂತರದ ಪ್ರತಿ ಅಪರಾಧಕ್ಕೆ 20,000 ರು. ದಂಡ ಸೇರಿದಂತೆ ಪರವಾನಗಿ ರದ್ದುಗೊಳಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ವಿಚಕ್ಷಣಾ ದಳ ಸ್ಥಾಪನೆ: ‘ಈ ನಿಯಮ ಶೇ.100ರಷ್ಟು ಜಾರಿಗೆ ತರಲು ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ವಿಚಕ್ಷಣಾ ದಳ ರಚಿಸಲು ಉದ್ದೇಶಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯ ಕಚೇರಿ ಸ್ಥಾಪಿಸಲಾಗುವುದು’ ಎಂದರು. ‘ವಿಚಕ್ಷಣಾ ದಳದಲ್ಲಿ ಪೊಲೀಸ್‌ ಇಲಾಖೆ ಸೇರ್ಪಡೆ, ಈ ದಳಕ್ಕೆ ವಾಹನ ನೀಡಲು ಉದ್ದೇಶಿಸಲಾಗಿದೆ. ಆದಷ್ಟು ಬೇಗ ಕಾನೂನು ರೂಪಿಸಿ ಜಾರಿಗೆ ತರಲಾಗುವುದು’ ಎಂದರು.

ಕಾರಟಗಿ ವಿದ್ಯಾರ್ಥಿಗಳ ಜೊತೆ ಚರ್ಚೆ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನವನ್ನ ನೋಡಲು ಆಗಮಿಸಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಕೆಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಫೋಟೋಗೆ ಫೋಸು ಕೊಟ್ಟಿದ್ದು ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.

ಸುವರ್ಣ ಸೌಧ, ಅಧಿವೇಶನ ಮತ್ತಿತರ ವಿಷಯವಾಗಿ ವಿದ್ಯಾರ್ಥಿಗಳ ಜೊತೆ ಮಾತಿಗಿಳಿದ ಸಚಿವರು, ಮುಂದೆ ನೀವೂ ಎಂ.ಎಲ್.ಎ ಆಗ್ತೀರಾ ಎಂದು ಕೇಳುತ್ತಿದ್ದಂತೆ ಮಾತಿನ ಗದ್ದಲಕ್ಕಿಳಿದಿದ್ದ ವಿದ್ಯಾರ್ಥಿಗಳು ಥ್ರಿಲ್ ಆದರು. ಯಾರಾದರೂ ಎಂಎಲ್ ಎ ಅಗ್ತಿರಾ ಎಂದು ಕೇಳಿದ ಸಚಿವರ ಪ್ರಶ್ನೆಗೆ ಯಾವೊಬ್ಬ ವಿದ್ಯಾರ್ಥಿಯೂ ಅಗ್ತಿನಿ ಅಂತಾ ಹೇಳಲಿಲ್ಲ. ಯಾಕೆ ನಿಮಗೆ ಯಾರಿಗೂ ಎಂಎಲ್ಎ ಆಗಬೇಕು ಅನಿಸುತ್ತಿಲ್ಲ. ಒಳಗೆ ಹೋಗಿ ಬನ್ನಿ, ಆಗಾಲಾದರೂ ಯಾರಾದರು ಆಗ್ತೇನೆ ಅಂತಾ ಹೇಳಬಹುದು ಎಂದು ವಿದ್ಯಾರ್ಥಿಗಳನ್ನು ಒಳಗೆ ಕಳಿಸಿದರು.

ಹೀಗೆಯೇ ಮಾತು ಮುಂದುವರೆದಾಗ, ನಾವೂ ಆಗಬಹುದಾ ಸರ್ ಎಂದು ವಿದ್ಯಾರ್ಥಿನಿಯೋರ್ವಳು ಕೇಳುತ್ತಿದ್ದಂತೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ನಿಗದಿತ ವಯೋಮಿತಿ ನಂತರ ಸಮಾಜದ ಸೇವೆಗಾಗಿ ಜನಪ್ರತಿನಿಧಿ ಆಗಲು ಮುಂದಾಗಿ ಎಂದು ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನಾಡಿದರು. ಅಲ್ಲಿದ್ದ ಅಧಿಕಾರಿಗಳು ಹಾಗೂ ಮುಖಂಡರಿಗೆ ಇವರು ನಮ್ಮ ಕ್ಷೇತ್ರದಿಂದ ಬಂದಿದ್ದಾರೆ ಎಂದು ಹೆಮ್ಮೆಯಿಂದ ಪರಿಚಯಿಸಿಕೊಟ್ಟರು. ಇದಾದ ಮೇಲೆ ಚಿದ್ಯಾರ್ಥಿಗಳಿಗೆ ಸಂಗೊಳ್ಳಿ ರಾಯಣ್ಣ ಕುರಿತು ವಿವರಿಸಿದರಲ್ಲದೆ, ಅವರ ಸಮಾಧಿ ಇಲ್ಲಿಯೇ ನಂದಗಢದಲ್ಲಿದೆ ನೋಡಿಕೊಂಡು ಬನ್ನಿ ಎಂದರು.