ಶಾಸಕ ವಿನಯ್ ಕುಲಕರ್ಣಿ ಅವರು ಮಾರ್ಚ್ ನಲ್ಲಿ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ತಮಗೆ ತಿಳಿದಿಲ್ಲ ಎಂದೂ ಹೇಳಿದ್ದಾರೆ. ಜೊತೆಗೆ, ಪೊಲೀಸರು ಬಡವರ ಮೇಲೆ ದಂಡ ಹಾಕುವುದನ್ನು ಖಂಡಿಸಿದ್ದಾರೆ.

ಧಾರವಾಡ (ಫೆ.17): ರಾಜ್ಯದಲ್ಲಿ ಮಾರ್ಚ್ ತಿಂಗಳ ಬಜೆಟ್ ಮುಕ್ತಾಯವಾದ ನಂತರ ಸಚಿವ ಸಂಪುಟದ ವಿಸ್ತರಣೆ ಆಗಲಿದೆ. ಈ ಸಲ ನನಗೂ ಸಚಿವ ಸ್ಥಾನ ಸಿಗಲಿದೆ. ಕೊಡಲೇಬೇಕು ಕೊಟ್ಟೆ ಕೊಡುತ್ತಾರೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಅಥವಾ ಸಿದ್ದರಾಮಯ್ಯ ಅವರನ್ನೇ ಮುಂದುವರೆಸುತ್ತಾರೆ ಎನ್ನುವ ವಿಚಾರ ನಮಗೆ ಗೊತ್ತಿಲ್ಲ. ಅದೆಲ್ಲವೂ ನಮ್ಮ ಹೈಕಮಾಂಡ್ ಗೆ ಬಿಟ್ಟಿದ್ದು. ಪಕ್ಷದ ವರಿಷ್ಠರು ಹೇಳಿದ ಕೆಲಸವನ್ನಷ್ಟ್ಏ ನಾನು ಮಾಡಿಕೊಂಡು ಹೋಗುತ್ತಿದ್ದೇವೆ. ಉಳಿದದ್ದೆಲ್ಲವನ್ನೂ ದೊಡ್ಡ ದೊಡ್ಡವರಿಗೆ ಬಿಟ್ಟಿದ್ದೇವೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಮಾರ್ಚ್ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ. ಈ ಸಲ ನನಗೂ ಸಚಿವ ಸ್ಥಾನ ಸಿಗಲಿದೆ. ಕೊಡಲೇಬೇಕು ಕೊಟ್ಟೆ ಕೊಡುತ್ತಾರೆ. ಸಿಎಂ ಸಿದ್ದರಾಮಯ್ಯ ಆರ್ಥಿಕ ತಜ್ಞರು. ಹಣಕಾಸು ಸಚಿವರಾಗಿ ಕೆಲಸ ಮಾಡಿದವರು. ಬೇರೆಯವರು ಇದ್ದಿದ್ದರೆ ಗ್ಯಾರಂಟಿ ನಿಭಾಯಿಸಲು ಆಗುತ್ತಿರಲಿಲ್ಲ. ಇಷ್ಟೊತ್ತಿಗೆ ಹೆಸರು ಕೆಡಿಸಿಕೊಳ್ಳುವ ಸ್ಥಿತಿ ಬರುತ್ತಿತ್ತು. ಆದರೆ, ಎಲ್ಲರಿಗೂ ಗ್ಯಾರಂಟಿ ತಲುಪುತ್ತಿದೆ. ಎಲ್ಲ ಜಾತಿ, ಪಕ್ಷದವರಿಗೂ ನಮ್ಮ ಗ್ಯಾರಂಟಿ ಹೊರಟಿದೆ. ಬಿಜೆಪಿಯವರಿಗೂ ಗ್ಯಾರಂಟಿ ತಲುಪಿವೆ ಎಂದು ಹೇಳಿದರು.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡುವ ವಿಚಾರದ ಬಗ್ಗೆ ಮಾತನಾಡಿ, ಎಲ್ಲವೂ ಹೈಕಮಾಂಡ್ ಬಿಟ್ಟಿದ್ದು. ನಮ್ಮ ಪಕ್ಷದಲ್ಲಿ ಜಾತೀಯತೆ ಇಲ್ಲ. ಅಲ್ಲಾ, ಅಕ್ಬರ್, ರಾಮ, ಸೀತಾ ಎಲ್ಲ ನಮ್ಮ ಪಕ್ಷದಲ್ಲಿದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಷ್ಟು ದೊಡ್ಡವನಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಬಿಸಿಯೇರಿದ ಚರ್ಚೆ, ಕಾಮತ್ ಆಕ್ರೋಶ! | KDP meeting | Suvarna News

ಇದಾದ ನಂತರ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕೆಡಿಪಿ ಸಭೆಗೆ ಹೋಗುವ ಮುನ್ನ ಪೊಲೀಸರು ಬೈಕ್ ಹಾಗೂ ಇತರೆ ವಾಹನ ಸವಾರರಿಗೆ ದಂಡ ಹಾಕುವ ವಿಚಾರದ ಬಗ್ಗೆ ಮಾತನಾಡುತ್ತಾ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನೀವು ಜನರಿಂದ ಹಣ ವಸೂಲಿಗೆ ನಿಂತೀದ್ದಿರಾ? ಗ್ರಾಮೀಣ ಭಾಗದಿಂದ ಕೂಲಿಗಾಗಿ ಜನರು ನಗರಕ್ಕೆ ಬರುತ್ತಾರೆ. ದಿನನಿತ್ಯ 500 ರೂ.ವರೆಗೆ ದುಡಿಯುತ್ತಾರೆ. ಇಂಥವರಿಗೆ ನೀವು ಯಾವ್ಯಾವುದೋ ಕಾರಣಗಳನ್ನು ಹೇಳಿ ಸಾವಿರಾರು ರೂಪಾಯಿ ದಂಡ ಹಾಕೋದು ಎಷ್ಟು ಸರಿ? ಸಾವಿರಾರು ರೂಪಾಯಿ ದಂಡ ಹಾಕಯವ ಮುನ್ನ ಪರಿಶೀಲಿಸಿ. ಬಡವರ ಮೇಲೆ ದಂಡ ಹಾಕುವುದು ಸರಿ ಅಲ್ಲ ಎಂದು ಶಾಸಕ ವಿನಯ ಕುಲಕರ್ಣಿ ಪೊಲೀಸರ ವಿರುದ್ಧ ಕೆಂಡಕಾರಿದರು.