ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (ಎಸ್‌ಸಿ/ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಕೈಗೊಂಡಿರುವ ನಿರ್ಧಾರವನ್ನು ಅನುಷ್ಠಾನಗೊಳಿಸಲು ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. 

ಬೆಂಗಳೂರು (ಅ.21): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (ಎಸ್‌ಸಿ/ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಕೈಗೊಂಡಿರುವ ನಿರ್ಧಾರವನ್ನು ಅನುಷ್ಠಾನಗೊಳಿಸಲು ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿ ಅವರ ಸಹಿ ಪಡೆದು ಅನುಷ್ಠಾನಗೊಳಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಎಸ್‌ಸಿ/ಎಸ್‌ಟಿ ಮೀಸಲಾತಿ ಏರಿಕೆ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಎಸ್‌ಸಿ/ಎಸ್‌ಟಿ ವರ್ಗದ ಜನಸಂಖ್ಯೆ ಹೆಚ್ಚಾಗಿರುವುದರಿಂದ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ತಡೆಯಾಜ್ಞೆ ಸಿಗುವುದಿಲ್ಲ ಎಂಬ ವಿಶ್ವಾಸ ಇದೆ. ಮೀಸಲಾತಿಗೆ ಅರ್ಹವಾಗಿರುವ ಜಾತಿಗಳ ಸಂಖ್ಯೆ ಏರಿಕೆಯಾಗಿದೆ. ಎಸ್‌ಸಿ ವರ್ಗದಲ್ಲಿ ಈ ಮೊದಲು 6 ಇದ್ದ ಜಾತಿಗಳು ಈಗ 103 ಜಾತಿಗೆ ಹೆಚ್ಚಳವಾಗಿವೆ. 

ರಾಹುಲ್‌ ಗಾಂಧಿಗೆ ದೇಶಾನೂ ಗೊತ್ತಿಲ್ಲ, ರಾಜ್ಯಾನೂ ಗೊತ್ತಿಲ್ಲ: ಸಿಎಂ ಬೊಮ್ಮಾಯಿ

ಎಸ್‌ಟಿಯಲ್ಲಿ 2-3 ಇದ್ದ ಜಾತಿ 56 ಜಾತಿಗೆ ಏರಿಕೆಯಾಗಿದೆ. ಅಗತ್ಯಕ್ಕನುಗುಣವಾಗಿ ಮೀಸಲಾತಿ ನೀಡುವುದು ಸರ್ಕಾರ ಉದ್ದೇಶವಾಗಿದೆ ಎಂದು ಹೇಳಿದರು. ಎಸ್‌ಸಿ ವರ್ಗಕ್ಕೆ ಶೇ.15 ರಷ್ಟಿದ್ದ ಮೀಸಲಾತಿಯನ್ನು ಶೇ.17ಕ್ಕೆ ಮತ್ತು ಎಸ್‌ಟಿ ವರ್ಗಕ್ಕೆ ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಎಕ್ಸಿಕ್ಯೂಟಿವ್‌ ಆರ್ಡರ್‌ ತೀರ್ಮಾನವೇ ಸಾಕು ಎಂದು ಭಾವಿಸಲಾಗಿತ್ತು. ಆದರೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸಮಸ್ಯೆಯಾಗಬಹುದು ಎಂಬ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ. 

ಅಲ್ಲದೆ, ಯಾವ ಕಾರಣಕ್ಕಾಗಿ ಮೀಸಲಾತಿಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂಬ ವಿವರವನ್ನು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ ಎಂದರು. ಸುಗ್ರೀವಾಜ್ಞೆ ತರುವಾಗ ಸಂವಿಧಾನ ಪ್ರಕಾರವೇ ಕ್ರಮ ಜರುಗಿಸುತ್ತೇವೆ. ಸಂವಿಧಾನದ ಪರಿಚ್ಛೇದ 9ರಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಕೇಳಲಾಗುವುದು. ಕೇಂದ್ರದಲ್ಲಿ ಅನುಮೋದನೆ ನೀಡಬೇಕು. ಅಲ್ಲಿಯವರೆಗೆ ಕಾಯುವುದಕ್ಕಿಂತ ಜಾರಿಗೊಳಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಹೆಳವ ಸಮಾಜ ಎಸ್ಟಿಗೆ ಸೇರಿಸುವಂತೆ ಸಿಎಂಗೆ ಮನವಿ: ಜನ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಲೆಮಾರಿ ಹೆಳವ ಸಮುದಾಯವನ್ನು ಪರಿಶಿಷ್ಟಪಂಗಡ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಸಮಸ್ತ ಅಲೆಮಾರಿ ಹೆಳವ ಜನಾಂಗದವರಾದ ನಾವು ನಮ್ಮ ಹೊಟ್ಟೆಪಾಡಿಗಾಗಿ ಒಕ್ಕಲು ಮನೆತನದವರ ವಂಶವಾಳಿಗಳನ್ನು ಹೇಳುತ್ತಾ, ಊರೂರು ಅಲೆದಾಡುತ್ತಿದ್ದೇವೆ. 

ಬೀದಿಬದಿಗಳಲ್ಲಿ ಟೆಂಟ್‌ ಹಾಕಿಕೊಂಡು, ಶಾಶ್ವತ ನೆಲೆ ಇಲ್ಲದೆ ಸಾಮಾಜಿಕವಾಗಿ, ಆರ್ಥಿಕವಾಗಿ, ಹಿಂದುಳಿದವರಾಗಿದ್ದು, ಶಿಕ್ಷಣದಲ್ಲಂತೂ ತೀರಾ ಹಿಂದುಳಿದವರಾಗಿದ್ದೇವೆ. ರಾಜ್ಯಾದ್ಯಂತ ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ಈ ಸಣ್ಣ ಸಮುದಾಯ ಪರಿಶಿಷ್ಟಪಂಗಡ ಪಟ್ಟಿಗೆ ಸೇರುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಈ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಲು, ಈಗಾಗಲೇ ಕನ್ನಡ ವಿಶ್ವವಿದ್ಯಾಲಯ ಹಂಪಿ ಮಾನವ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಲ್‌. ಶ್ರೀನಿವಾಸ್‌ ರವರ ಮೂಲಕ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರ ಮೂಲಕ ಯೋಜನಾ ವರದಿಯನ್ನು ಸಿದ್ಧಪಡಿಸಿ 2018ರಲ್ಲಿ ತಮ್ಮ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್‌ ಮುಳಗುವಾಗ ಖರ್ಗೆ ಕೈಯಲ್ಲಿ ಸ್ಟಿಯರಿಂಗ್‌: ಸಿಎಂ ಬೊಮ್ಮಾಯಿ

ಈಗಾಗಲೇ ಪರಿಶಿಷ್ಟಪಂಗಡ ಕಲ್ಯಾಣ ಇಲಾಖೆ ಸಚಿವಾಲಯದಲ್ಲಿ ಸದರಿ ಕಡತವು ಉಳಿದಿದ್ದು, ರಾಜ್ಯ ಸರ್ಕಾರದ ಸಚಿವ ಸಂಪುಟದ ಅನುಮೋದನೆಯೊಂದಿಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಶಿಫಾರಸ್ಸು ಮಾಡುವಂತೆ ಸಮಾಜದ ಪರವಾಗಿ ಮನವಿ ಸಲ್ಲಿಸಲಾಯಿತು. ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾಸ್ತರ, ಸಂಘಟನಾ ಕಾರ್ಯದರ್ಶಿ ಚಂದಪ್ಪ ಹೆಳವರ ಕಕ್ಕೇರಾ ಸೇರಿದಂತೆ ಇತರರಿದ್ದರು.