ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೀವು ಭ್ರಷ್ಟರನ್ನೇ ಕಟ್ಟಿಕೊಂಡು ತಿರುಗಾಡುತ್ತಿದ್ದೀರಿ: ಮುಖ್ಯಮಂತ್ರಿ ಬೊಮ್ಮಾಯಿ

ಯಾದಗಿರಿ(ಅ.20): ಭ್ರಷ್ಟಾಚಾರದ ಬಗ್ಗೆ ಮಾತನಾಡುವ ರಾಹುಲ್‌ ಗಾಂಧಿ ಅಂತಹವರನ್ನೇ ಕಟ್ಟಿಕೊಂಡು ನಡೆಯುತ್ತಿದ್ದು, ದೇಶಾನೂ ಗೊತ್ತಿಲ್ಲ, ರಾಜ್ಯಾನೂ ಗೊತ್ತಿಲ್ಲ. ಕರ್ನಾಟಕ ರಾಜ್ಯದ ಜನರ ಭಾವನೆಗಳೂ ರಾಹುಲ್‌ಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಪಕ್ಷ ಹಾಗೂ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಜನಸಂಕಲ್ಪ ಯಾತ್ರೆ ಅಂಗವಾಗಿ, ಬುಧವಾರ ಜಿಲ್ಲೆಯ ಹುಣಸಗಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್‌ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕರ್ನಾಟಕದಲ್ಲಿ ನೌಕರಿ ಸಿಗಬೇಕಾದರೆ ದುಡ್ಡು ಕೊಟ್ಟು ನೌಕರಿ ಪಡೀತಾರೆ ಎಂದು ರಾಹುಲ್‌ ಹೇಳಿದ್ದಾರೆ, ಅವರಿಗೆ ಇಲ್ಲಿನ ಅರಿವಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ರಾಹುಲ್‌, ಅಂತಹವರನ್ನೆ ಹಿಂದೆ ಕಟ್ಟಿಕೊಂಡು ನಡೆಯುತ್ತಿದ್ದು, ಅವರ ಮೇಲೆ ಅವರ ಪಕ್ಷ ಕ್ರಮ ಕೈಗೊಳುತ್ತದೆಯೋ ಎಂಬುದಕ್ಕಾಗಿ ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದೇನೆ ಎಂದರು.

ಮುಂದೆ ರಾಜಕೀಯದಲ್ಲಿ ಇರ್ತೇನೋ, ಇಲ್ವೋ..?: ಸಚಿವ ಶ್ರೀರಾಮುಲು

ದಾಖಲೆಗಳ ಕೊಡುವುದಾಗಿ ಹೇಳಿದ್ದ ನನ್ನ ಮಾತುಗಳ ಬಗ್ಗೆ ಮಾಜಿ ಸಿಎಂ ಸಿದ್ರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ. ರಾಹುಲ್‌ ಪ್ರಧಾನಿ ಅಲ್ಲ ಎಂದಿದ್ದಾರೆ. ರಾಹುಲ್‌ ಪ್ರಧಾನಮಂತ್ರಿ ಇಲ್ಲ ಅನ್ನೋದು ನನಗೆ ಗೊತ್ತಿದೆ ಎಂದ ಸಿಎಂ ಬೊಮ್ಮಾಯಿ, ‘ಸಿದ್ರಾಮಣ್ಣ, ನನಗೆ 15 ವರ್ಷಗಳ ಹಿಂದೆಯೇ ಗೊತ್ತಿದೆ, ರಾಹುಲ್‌ ಹಿಂದೆಯೂ ಏನೂ ಇಲ್ಲ, ನಾಳೆನೂ ಏನೂ ಆಗೋಲ್ಲ. ನೀವು ಬೆನ್ನು ಹತ್ತೀರಿಯಷ್ಟೇ’ ಎಂದು ವ್ಯಂಗ್ಯವಾಡಿದರು.

ತನಿಖೆ ನಡೆಸಿ ಎಂದು ರಾಹುಲ್‌ ಹೇಳಿದ್ದಾರೆ. ಆದರೆ, ನಾವಾಗಲೇ ತನಿಖೆ ಆರಂಭಿಸಿದ್ದೇವೆ, 20 ಜನ ಶಿಕ್ಷಕರ ಬಂಧಿಸಲಾಗಿದೆ. ಅರ್ಜಿ ಕೊಡದೆ ನೌಕರಿ ಕೊಟ್ಟಿದ್ದ ಪ್ರಕರಣದ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ನಡೆದಿದೆ. ಪ್ರಾಸಿಕ್ಯೂಟರ್‌ ನೇಮಕಕ್ಕೂ ದುಡ್ಡು ತಿಂದಿದ್ದಾರೆ, ನ್ಯಾಯ ಹೇಗೆ ಉಳಿಯುತ್ತೆ ಎಂದು ಪ್ರಶ್ನಿಸಿದ ಸಿಎಂ, ಕಾನೂನು ಪ್ರಕಾರ ನಾವು ತನಿಖೆ ಮಾಡುತ್ತೇವೆ. ದಾಖಲೆ ಇಲ್ಲದೆ ಆರೋಪ ಮಾಡುವ ನಿಮಗೆ ನಾವು ದಾಖಲೆಗಳ ಕೊಡುತ್ತೇವೆ. ನಿಮ್ಮ ಪಕ್ಷ ಕ್ರಮ ಕೈಗೊಳ್ಳುತ್ತದೆಯೇ ಎಂದು ಸವಾಲು ಹಾಕಿದರು.

30 ವರ್ಷದ ರಾಜಕಾರಣ: ಯಾರಾರ‍ಯರ ಕಾಲದಲ್ಲಿ ಏನೇನು ನಡೆದಿದೆ ಗೊತ್ತಿದೆ

30 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ, ಯಾರಾರ‍ಯರ ಕಾಲದಲ್ಲಿ ಏನೇನು ನಡೆದಿದೆ ಅನ್ನೋದು ಗೊತ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ, ನಿಮ್ಮ ಹಾಗೆ ಬೇಕೆಂದಾಗ ಎತ್ತಿಡುವ ಕುಂಡಗಳಲ್ಲಿ ಇಟ್ಟರೀತಿಯ ಗಿಡಗಳು ನಾವಲ್ಲ, ಹೆಮ್ಮರವಾಗಿ ಬೇರು ಬಿಟ್ಟಮರಗಳು ನಾವು, ಸುಳ್ಳು ಮಾತುಗಳನ್ನು ಜನ ನಂಬೋಲ್ಲ ಎಂದರು.