25 ಸಾವಿರ ನವೋದ್ಯಮಗಳು 2027ರ ಹೊತ್ತಿಗೆ ರಾಜ್ಯದಲ್ಲಿ ನೆಲೆಯೂರುವಂತೆ ಮಾಡುವ ಗುರಿಯುಳ್ಳ 2022-27ರ ಹೊಸ ಸ್ಟಾರ್ಟಪ್‌ ನೀತಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ.

ಸುವರ್ಣಸೌಧ (ಡಿ.23): 25 ಸಾವಿರ ನವೋದ್ಯಮಗಳು 2027ರ ಹೊತ್ತಿಗೆ ರಾಜ್ಯದಲ್ಲಿ ನೆಲೆಯೂರುವಂತೆ ಮಾಡುವ ಗುರಿಯುಳ್ಳ 2022-27ರ ಹೊಸ ಸ್ಟಾರ್ಟಪ್‌ ನೀತಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಮೂಲಕ ಕರ್ನಾಟಕ ರಾಜ್ಯವನ್ನು ದೇಶದ ಸ್ಟಾರ್ಟ್‌ಅಪ್‌ ವಲಯದಲ್ಲಿ ಚಾಂಪಿಯನ್‌ ರಾಜ್ಯವನ್ನಾಗಿ ಪ್ರತಿಷ್ಠಾಪಿಸುವ ಗುರಿ ಹೊಂದಿದೆ. 

ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಭಾಗದಲ್ಲಿ ಸ್ಟಾರ್ಟ್‌ಅಪ್‌ ಪ್ರಾರಂಭ ಮಾಡುವ ನವೋದ್ಯಮಿಗಳಿಗೆ ಹಲವು ಪ್ರೋತ್ಸಾಹಕ ಯೋಜನೆಗಳನ್ನು ನೀತಿಯಲ್ಲಿ ಪ್ರಕಟಿಸಲಾಗಿದೆ. ಇದರಿಂದ ಬೆಂಗಳೂರು ಹೊರಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಒತ್ತು ನೀಡಲಾಗಿದೆ. ಗುರುವಾರ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಪ್ರಸ್ತತು 15 ಸಾವಿರ ಸ್ಟಾರ್ಟ್‌ಅಪ್‌ಗಳಿವೆ. ಹೊಸ ನೀತಿಯಿಂದಾಗಿ ಇನ್ನೂ 10 ಸಾವಿರ ನವೋದ್ಯಮಗಳು ಅಸ್ತಿತ್ವಕ್ಕೆ ಬರಲಿವೆ.

ಸಿಎಂ ಬೊಮ್ಮಾಯಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗೆ ಪಕ್ಷಾತೀತ ಖಂಡನೆ

ಸಂಪುಟ ಸಭೆಯ ಇತರೆ ನಿರ್ಣಯಗಳು
* ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ 100 ಕೋಟಿ ರು. ವೆಚ್ಚದಲ್ಲಿ ಪೀಠೋಪಕರಣ ಖರೀದಿಗೆ ಒಪ್ಪಿಗೆ.

* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 620 ವಿವಿಧ ಮಾದರಿಯ ಹೊಸ ಬಿಎಸ್‌6 ಬಸ್‌ಗಳನ್ನು 269.75 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಅನುಮೋದನೆ.

* ಲೋಕೋಪಯೋಗಿ ಇಲಾಖೆಯಿಂದ 198 ಕೋಟಿ ರು. ಮೊತ್ತದಲ್ಲಿ ಎಸ್‌ಸಿ/ಎಸ್‌ಟಿ ವರ್ಗದ ವಿದ್ಯಾರ್ಥಿಗಳ 11 ವಸತಿ ಶಾಲೆಗಳನ್ನು ನಿರ್ಮಿಸಲು ತೀರ್ಮಾನ.

* ಬೆಂಗಳೂರುನಗರ ವ್ಯಾಪ್ತಿಯ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ 2020 ರ ಆ.11 ರಂದು ನಡೆದ ಅಹಿತಕರ ಘಟನೆಗಳ ಸಂಬಂಧ ಮ್ಯಾಜಿಸ್ಟೀರಿಯಲ್‌ ವಿಚಾರಣಾ ವರದಿ ಸ್ವೀಕಾರ.

* ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಆಡಳಿತ ಕಚೇರಿಯನ್ನು 20 ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ

* ಬೀದರ್‌ ಜಿಲ್ಲೆಯ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಸರ್ಕಾರಕ್ಕೆ ಪಾವತಿಸಬೇಕಿರುವ 19.08 ಕೋಟಿ ರು. ಕಬ್ಬು ಖರೀದಿ ಮೊತ್ತವನ್ನು ಬಡ್ಡಿರಹಿತ ಸಾಲವನ್ನಾಗಿ ಪರಿವರ್ತಿಸಲು ಅನುಮತಿ.

* ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟನ್ನು 72 ಕೋಟಿ ರೂ. ಅಂದಾಜು ಮೊತ್ತದಲ್ಲಿ ನಿರ್ಮಿಸಲು ತೀರ್ಮಾನ.

* ನೋಂದಾಯಿತ ಹಳೆಯ ವಾಹನಗಳನ್ನು ನಾಶಪಡಿಸುವ ನೀತಿ- 2022ಕ್ಕೆ ಆಡಳಿತಾತ್ಮಕ ಅನುಮೋದನೆ.

*ಕರ್ನಾಟಕ ಖಾಸಗಿ ವೈದ್ಯಕಿಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ -2022ಕ್ಕೆ ಒಪ್ಪಿಗೆ.

* ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಪ್ಲಾಂಟೇಶನ್‌ ಬೆಳೆ ಬೆಳೆಯುತ್ತಿರುವವರಿಗೆ ಅಂತಹ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡುವ ಕುರಿತಾದ ಕರ್ನಾಟಕ ಭೂಕಂದಾಯ (3ನೇ ತಿದ್ದುಪಡಿ) ವಿಧೇಯಕ 2022ಕ್ಕೆ ಅನುಮತಿ.

* ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-1ರ ಪರಿಷ್ಕೃತ ಯೋಜನಾ ವೆಚ್ಚ 14133.17 ಕೋಟಿ ರು.ಗೆ ಒಪ್ಪಿಗೆ.

ಎಲೆಕ್ಟ್ರಾನಿಕ್ಸ್‌, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರೂಪಿಸಿರುವ ಈ ನೀತಿಯು ಕರ್ನಾಟಕ ರಾಜ್ಯವನ್ನು ದೇಶದ ಸ್ಟಾರ್ಟ್‌ಅಪ್‌ ವಲಯದಲ್ಲಿ ‘ಚಾಂಪಿಯನ್‌ ರಾಜ್ಯ’ವನ್ನಾಗಿ ಪ್ರತಿಷ್ಠಾಪಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಅಧಿಕ ಪ್ರಮಾಣದ ಬೆಳವಣಿಗೆ ದಾಖಲಿಸುವಂತಹ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶ ಹೊಂದಲಾಗಿದೆ.

ವರಿಷ್ಠರು ಒಪ್ಪಿದರೆ ಜಾರಕಿಹೊಳಿ, ಈಶ್ವರಪ್ಪಗೆ ಶೀಘ್ರ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ

ಒಟ್ಟು ಒಂಭತ್ತು ಅಂಶಗಳ ಆಧಾರದ ಮೇಲೆ ರೂಪಿಸಿರುವ ಈ ನೀತಿಯು ಸರ್ಕಾರಿ ಸಂಸ್ಥೆಗಳಲ್ಲಿ ಮೂಲಸೌಲಭ್ಯವನ್ನು ಅಭಿವೃದ್ಧಿ ಪಡಿಸುವ ಮತ್ತು ‘ಬಿಯಾಂಡ್‌ ಬೆಂಗಳೂರು’ ಉಪಕ್ರಮವನ್ನು ಸಾಕಾರಗೊಳಿಸುವ ಗುರಿಗಳನ್ನೂ ಹೊಂದಿದೆ. ಅಲ್ಲದೇ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡುವುದು, ಸಾಮಾಜಿಕ ಆಡಳಿತ ವಲಯದಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸುವುದು ಸೇರಿದಂತೆ ಹಲವು ಅಂಶಗಳನ್ನು ನೀತಿಯು ಹೊಂದಿದೆ.