ಸಿಎಂ ಬೊಮ್ಮಾಯಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗೆ ಪಕ್ಷಾತೀತ ಖಂಡನೆ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಸಂಸದರ ವಿರುದ್ಧ ರಾಜ್ಯದ ನಾಯಕರು ಪಕ್ಷಾತೀತವಾಗಿ ಖಂಡಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುವರ್ಣಸೌಧ (ಡಿ.22): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಸಂಸದರ ವಿರುದ್ಧ ರಾಜ್ಯದ ನಾಯಕರು ಪಕ್ಷಾತೀತವಾಗಿ ಖಂಡಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವುತ್ ‘ಗಡಿ ವಿವಾದದಲ್ಲಿ ಬೊಮ್ಮಾಯಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ನೀಡಿರುವ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಯು.ಟಿ.ಖಾದರ್, ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಬುಧವಾರ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಗಡಿ ವಿಚಾರದಲ್ಲಿ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ವಿರುದ್ಧ ನೀಡಲಾದ ಹೇಳಿಕೆ ಅತ್ಯಂತ ಖಂಡನಾರ್ಹ. ಈ ವಿಷಯದಲ್ಲಿ ಯಾವುದೇ ರಾಜಿಗೂ ನಾವು ಸಿದ್ಧರಿಲ್ಲ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಿರ್ಣಯ ಪಾಸ್ ಮಾಡಲಿದ್ದೇವೆ. ಈ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವ ಸಲಹೆ ನೀಡಿ: ಸಿಎಂ ಬೊಮ್ಮಾಯಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿ, ಕೆಲ ರಾಜಕೀಯ ನಿರುದ್ಯೋಗಿಗಳು ಗಡಿ ವಿವಾದ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕಗಳ ನಡುವೆ ಹಿಂದಿನಿಂದಲೂ ಉತ್ತಮ ಸಂಬಂಧವಿದೆ. ಅದಕ್ಕೆ ಧಕ್ಕೆಯಾಗದಂತೆ ಸೌಹಾರ್ದತೆಯಿಂದ ಹೇಗೆ ಇರಬೇಕೆಂದು ತೋರಿಸಿಕೊಡುತ್ತೇವೆ. ಇನ್ನು ಇಂತಹ ಹೇಳಿಕೆಗಳಿಂದ ನಮ್ಮ ಮುಖ್ಯಮಂತ್ರಿಯವರಿಗೆ ಇರುವ ಗೌರವ ಯಾವುದೇ ಕಾರಣಕ್ಕೂ ಕಡಿಮೆ ಆಗಲ್ಲ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಸಮಸ್ಯೆ ಇತ್ಯರ್ಥಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿದರು.
ಮಂತ್ರಿಗಿರಿ ಸ್ಥಾನ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ: ಈಶ್ವರಪ್ಪ ಶಾಂತ
ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಮಾತನಾಡಿ, ಗಡಿ ವಿಚಾರದಲ್ಲಿ ಮುಖ್ಯಮಂತ್ರಿಯವರ ಬೆಂಬಲಕ್ಕೆ ನಾವಿದ್ದೇವೆ. ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಣಯಕ್ಕೆ ಕಾಂಗ್ರೆಸ್ ಬೆಂಬಲಿಸಲಿದೆ. ಬೆಳಗಾವಿಯಲ್ಲಿರುವ ಮರಾಠಿಗರು ಮತ್ತು ಕನ್ನಡಿಗರ ನಡುವಿನ ಬಾಂಧವ್ಯಕ್ಕೆ ಹುಳಿ ಹಿಂಡುವ ಮಹಾರಾಷ್ಟ್ರದ ಪ್ರಯತ್ನವನ್ನು ಮಟ್ಟಹಾಕಬೇಕಿದೆ ಎಂದು ಹೇಳಿದರು. ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪೂರ್, ನೆಲ, ಜಲ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಎಲ್ಲರೂ ಪಕ್ಷಾತೀತವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈಗೊಳ್ಳುವ ಕರ್ನಾಟಕದ ಪರವಾದ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ರಾಜ್ಯದ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದಿದ್ದು ನಮ್ಮ ತಂಟೆಗೆ ಬರಬೇಡಿ ಎಂದು ಎಚ್ಚರಿಸಿದರು.