ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ಬಿಗ್ ಶಾಕ್, ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ!
ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ಮಾರ್ಚ್ ಸಂಬಳ ಇಲ್ಲ| ಕೆಲಸಕ್ಕೆ ಬಂದವರಿಗೆ ಇಂದೇ ವೇತನ ಪಾವತಿ| ಮತ್ತೆ 122 ನೌಕರರ ವಜಾ| ಅಂತರ ವರ್ಗಾವಣೆ ತಿರಸ್ಕಾರ| ದಂಡಂ ದಶಗುಣಂ| ಈಗಾಗಲೇ ವರ್ಗಾವಣೆ ಆದೇಶ ಪಡೆದಿದ್ದರೆ ರದ್ದು| ಮುಷ್ಕರ ಹತ್ತಿಕ್ಕಲು ಸರ್ಕಾರದಿಂದ ಇನ್ನಷ್ಟು ಅಸ್ತ್ರ ಬಳಕೆ
ಬೆಂಗಳೂರು(ಏ.12): ಸೇವೆಯಿಂದ ವಜಾ, ಅಮಾನತುಗೊಳಿಸುವಂತಹ ಕಠಿಣ ಕ್ರಮ ಕೈಗೊಂಡರೂ ಸಾರಿಗೆ ನೌಕರರು ಮುಷ್ಕರ ಮುಂದುವರೆಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ನಷ್ಟುಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸಾರಿಗೆ ನೌಕರರಿಗೆ ಮಾಚ್‌ರ್ ತಿಂಗಳ ವೇತನ ತಡೆಹಿಡಿಯಲು ನಿರ್ಧರಿಸಿದೆ. ಅಲ್ಲದೆ, ಕೆಲಸಕ್ಕೆ ಹಾಜರಾಗುತ್ತಿರುವ ನೌಕರರಿಗೆ ಸೋಮವಾರವೇ ವೇತನ ಪಾವತಿಸಲೂ ಮುಂದಾಗಿದೆ.
ಇದರ ಜೊತೆಗೆ, ಮುಷ್ಕರದಲ್ಲಿ ಪಾಲ್ಗೊಂಡಿರುವ 122 ನೌಕರರನ್ನು ಭಾನುವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಮುಷ್ಕರ ನಿರತರು ಈ ಹಿಂದೆ ‘ಅಂತರ ನಿಗಮ ವರ್ಗಾವಣೆ’ಗೆ ಕೋರಿದ್ದರೆ ಅದನ್ನು ಪರಿಗಣಿಸದಿರಲು ನಿರ್ಧರಿಸಿದೆ. ಜೊತೆಗೆ ಈಗಾಗಲೇ ವರ್ಗಾವಣೆ ಆದೇಶ ಪಡೆದಿದ್ದರೆ ರದ್ದುಗೊಳಿಸುವ ಎಚ್ಚರಿಕೆ ನೀಡಿದೆ.
ಸಾರಿಗೆ ನೌಕರರು ಎಷ್ಟು ದಿನ ಮುಷ್ಕರ ಮಾಡುತ್ತಾರೋ ನೋಡೋಣ ಎಂದ್ರ ಸಚಿವ
ಗೈರಾದವರಿಗೆ ಮಾರ್ಚ್ ಸಂಬಳ ಇಲ್ಲ:
ಮುಷ್ಕರದಲ್ಲಿ ಪಾಲ್ಗೊಂಡಿರುವ ಕೆಎಸ್‌ಆರ್‌ಟಿಸಿ ನೌಕರರಿಗೆ ಮಾಚ್‌ರ್ ತಿಂಗಳ ವೇತನ ಬಿಡುಗಡೆ ಮಾಡದೆ ಸರ್ಕಾರ ಬಿಸಿ ಮುಟ್ಟಿಸಿದೆ. ಆದರೆ, ಕರ್ತವ್ಯಕ್ಕೆ ಹಾಜರಾಗಿರುವ ನೌಕರರಿಗೆ ಸೋಮವಾರವೇ ವೇತನ ಪಾವತಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಯುಗಾದಿ ಹಬ್ಬದ ದಿನ ಕರ್ತವ್ಯ ನಿರತ ಈ ನೌಕರರಿಗೆ ಸಿಹಿ ಹಾಗೂ ಪ್ರಶಂಸನಾ ಪತ್ರ ನೀಡಲು ತೀರ್ಮಾನಿಸಿದೆ. ಈ ಮೂಲಕ ಮುಷ್ಕರ ನಿರತ ನೌಕರರಿಗೆ ಮಾಚ್‌ರ್ ತಿಂಗಳ ವೇತನ ನೀಡುವುದಿಲ್ಲ ಎಂಬ ಪರೋಕ್ಷ ಸಂದೇಶ ನೀಡಿದೆ.
ವರ್ಗಾವಣೆ ಭಾಗ್ಯ ಇಲ್ಲ:
ಕರ್ತವ್ಯಕ್ಕೆ ಗೈರಾಗಿ ಮುಷ್ಕರದಲ್ಲಿ ಪಾಲ್ಗೊಂಡು ಬಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ನೌಕರರ ‘ಅಂತರ್ ನಿಗಮ ವರ್ಗಾವಣೆ’ ಕೋರಿಕೆಯನ್ನು ಪರಿಗಣಿಸುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಭಾನುವಾರ ಘೋಷಿಸಿದೆ. ಜತೆಗೆ ಈಗಾಗಲೇ ಕೋರಿಕೆ ಮೇರೆಗೆ ಬೇರೆ ವಿಭಾಗಗಳಿಗೆ ವರ್ಗಾವಣೆಗೊಂಡಿರುವ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ವರ್ಗಾವಣೆ ಆದೇಶ ರದ್ದುಗೊಳಿಸಿ, ಮೂಲ ವಿಭಾಗಕ್ಕೆ ಮರು ವರ್ಗಾವಣೆ ಮಾಡುವುದಾಗಿ ಖಡಕ್ ಎಚ್ಚರಿಕೆ ರವಾನಿಸಿದೆ.
ಸಾರಿಗೆ ನೌಕರರ ಮುಷ್ಕರ: ಖಡಕ್ ಎಚ್ಚರಿಕೆ ಕೊಟ್ಟ ಸಿಎಂ
ಮತ್ತೆ 122 ನೌಕರರ ವಜಾ:
ತರಬೇತಿ ನಿರತ ಹಾಗೂ ಪ್ರೊಬೇಷನರಿ ನೌಕರರ ವಿರುದ್ಧ ಕ್ರಮ ಕೈಗೊಂಡಿರುವ ಬಿಎಂಟಿಸಿ, ನೋಟಿಸ್‌ಗೂ ಸೊಪ್ಪು ಹಾಕದೆ ಕರ್ತವ್ಯಕ್ಕೆ ಗೈರಾಗಿ ಮುಷ್ಕರದಲ್ಲಿ ಪಾಲ್ಗೊಂಡಿರುವ 62 ಮಂದಿ ತರಬೇತಿನಿರತ ನೌಕರರು ಹಾಗೂ 60 ಮಂದಿ ಪ್ರೊಬೇಷನರಿ ನೌಕರರು ಸೇರಿ ಒಟ್ಟು 122 ಮಂದಿ ನೌಕರರನ್ನು ಸೇವೆಯಿಂದಲೇ ವಜಾಗೊಳಿಸಿ ಭಾನುವಾರ ಆದೇಶಿಸಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ತರಬೇತಿ ನಿರತ ಹಾಗೂ ಪ್ರೊಬೇಷನರಿ 456 ನೌಕರರನ್ನು ಸೇವೆಯಿಂದ ವಜಾಗೊಳಿಸಿದಂತಾಗಿದೆ.
ಖಾಸಗಿ ಬಸ್ ದರ್ಬಾರ್:
ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದರಿಂದ ಕಳೆದ ಐದು ದಿನಗಳಿಂದ ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಖಾಸಗಿ ವಾಹನಗಳ ದರ್ಬಾರ್ ಜೋರಾಗಿದೆ. ಅದರಲ್ಲೂ ಭಾನುವಾರ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಿದ್ದರಿಂದ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳು ಬಹುತೇಕ ಭರ್ತಿಯಾಗಿದ್ದವು. ಈ ನಡುವೆ ಸಾರಿಗೆ ನಿಗಮಗಳ ಕೆಲ ಬಸ್‌ಗಳು ಕಾರ್ಯಾಚರಣೆಗೆ ಇಳಿದಿದ್ದರಿಂದ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿಕೊಳ್ಳುವ ವಿಚಾರವಾಗಿ ಖಾಸಗಿ ಬಸ್ ಸಿಬ್ಬಂದಿ ಸರ್ಕಾರಿ ಬಸ್ ಸಿಬ್ಬಂದಿ ನಡುವೆ ವಾಗ್ವಾದಗಳು ನಡೆದ ಪ್ರಸಂಗಳು ನಡೆದವು.
ನಾಳೆ ನೌಕರರಿಗೆ ಸಿಹಿ ವಿತರಣೆ
ಮುಷ್ಕರದ ನಡುವೆ ಜೀವ ಬೆದರಿಕೆ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಯುಗಾದಿ ಹಬ್ಬದ ಪ್ರಯುಕ್ತ ಮಂಗಳವಾರ ಸ್ವೀಟ್ ಹಾಗೂ ಪ್ರಶಂಸನಾ ಪತ್ರ ನೀಡಿ ಹುರಿದುಂಬಿಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ. ಉಳಿದ ಮೂರು ಸಾರಿಗೆ ನಿಗಮಗಳು ಇದೇ ಹಾದಿ ಅನುಸರಿಸುವ ಸಾಧ್ಯತೆಯಿದೆ.
ಹೃದಯಾಘಾತವಾಗಿ KSRTC ಚಾಲಕ ಕೊನೆಯುಸಿರು
ಬಸ್ ಪಾಸ್ ಅವಧಿ ವಿಸ್ತರಣೆ
ಕಳೆದ ಐದು ದಿನಗಳಿಂದ ಸಾರಿಗೆ ಮುಷ್ಕರ ನಡೆಯುತ್ತಿರುವುದರಿಂದ ನಿಗಮದಿಂದ ವಿದ್ಯಾರ್ಥಿ ಪಾಸ್ ಹಾಗೂ ಮಾಸಿಕ ಪಾಸ್ ಪಡೆದರಿಗೆ ಉಂಟಾಗಿರುವ ತೊಂದರೆಗೆ ವಿಷಾದಿಸಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಮುಷ್ಕರದ ದಿನಗಳ ಅವಧಿಯ ದಿನಗಳಿಗೆ ಸರಿಸಮಾನವಾಗಿ ಬಸ್ ಪಾಸುಗಳ ಅವಧಿ ವಿಸ್ತರಿಸಲು ಆದೇಶಿಸಿದ್ದಾರೆ.