Karnataka budget 2023: ಬೀದರ್ ಜಿಲ್ಲೆಗೆ ಹಳೆಯ ಯೋಜನೆಗಳೇ ಪುನರಾವರ್ತನೆ, ಬಹುತೇಕ ನಿರ್ಲಕ್ಷ್ಯ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಮುಂಗಡ ಪತ್ರ ಹೊಸತನದಿಂದ ಕೂಡಿರುತ್ತೆ, ಜಿಲ್ಲೆಯ ಇಬ್ಬರು ಪ್ರಭಾವಿ ಮಂತ್ರಿಗಳ ಕೈಚಳಕ ನಡೆಯುತ್ತೆ, ಜಿಲ್ಲೆಗೆ ಅನುಕೂಲಕರ ಅನುದಾನ ಸಿಕ್ಕು ಅಭಿವೃದ್ಧಿಗೆ ಹೊಸ ಆಶಾಕಿರಣಗಳನ್ನು ಮೂಡಿಸುತ್ತೆ ಎಂಬುವುದನ್ನು ಜಿಲ್ಲೆಯ ಮಟ್ಟಿಗೆ ಹುಸಿಗೊಳಿಸಿದೆ.
ಅಪ್ಪಾರಾವ್ ಸೌದಿ
ಬೀದರ್ (ಜು.8) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಮುಂಗಡ ಪತ್ರ ಹೊಸತನದಿಂದ ಕೂಡಿರುತ್ತೆ, ಜಿಲ್ಲೆಯ ಇಬ್ಬರು ಪ್ರಭಾವಿ ಮಂತ್ರಿಗಳ ಕೈಚಳಕ ನಡೆಯುತ್ತೆ, ಜಿಲ್ಲೆಗೆ ಅನುಕೂಲಕರ ಅನುದಾನ ಸಿಕ್ಕು ಅಭಿವೃದ್ಧಿಗೆ ಹೊಸ ಆಶಾಕಿರಣಗಳನ್ನು ಮೂಡಿಸುತ್ತೆ ಎಂಬುವುದನ್ನು ಜಿಲ್ಲೆಯ ಮಟ್ಟಿಗೆ ಹುಸಿಗೊಳಿಸಿದೆ.
ರಾಜ್ಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಮುಂಗಡ ಪತ್ರ ಕೆಲವು ಜನಪರ ಯೋಜನೆಗಳನ್ನು ಹೊಂದಿದ್ದೇನೋ ನಿಜ. ಆದರೆ, ರಾಜ್ಯದ ಗಡಿ ಜಿಲ್ಲೆ ಬೀದರ್‌ನ ಲಕ್ಷಾಂತರ ಜನ ಹೊಂದಿದ್ದ ಅಪಾರ ನಿರೀಕ್ಷೆಗಳನ್ನು ಮಣ್ಣು ಪಾಲು ಮಾಡಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಬೀದರ್ ಜಿಲ್ಲೆ ಬಹುತೇಕ ಕಡೆಗಣಿಸಿದಂತಾಗಿದೆ.
ಪಾರಂಪರಿಕ ಪ್ರವಾಸಿ ತಾಣವಾದ ಬೀದರ್ ಕೋಟೆಯ ಪುನರುಜ್ಜೀವನಕ್ಕೆ ಕ್ರಮ, ವಿನೂತನ ಮಾದರಿಯ ವಿಶ್ವವಿದ್ಯಾಲಯದ ಸ್ಥಾಪನೆ ಮಾತು ಈ ಬಜೆಟ್‌ನಲ್ಲಿ ಹೇಳಿದ್ದೆಲ್ಲ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಲ್ಲಿದ್ದದ್ದು. ಮುಖ್ಯಮಂತ್ರಿ ಆರೋಗ್ಯ ವಾಹಿನಿ ಯೋಜನೆಯಡಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಬೀದರ್ ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್ ಸ್ಥಾಪನೆ ಹಳೆಯದು. ಅದನ್ನೆ ಮತ್ತೇ ಘೋಷಿಸಲಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರ ತುಮಕೂರು, ಹಾವೇರಿ, ಗೋಕಾಕ್ ಬೀದರ್ ಹಾಗೂ ಭಾಲ್ಕಿ ಸೇರಿದಂತೆ 13 ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣಕ್ಕೆ ಅನುದಾನ ನೀಡುವ ಘೋಷಣೆ ನೀಡಿತ್ತು. ಇದೇ ಘೋಷಣೆ ಬೀದರ್ ಜಿಲ್ಲೆಮಟ್ಟಿಗೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪುನರಾವರ್ತನೆಯಾಗಿದೆ.
ನಾಲ್ಕೈದು ದಶಕಗಳಿಂದ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಕಾಲಕಳೆಯುತ್ತಿರುವ ಕಾರಂಜಾ ನೀರಾವರಿ ಯೋಜನೆಯ ಸಂತ್ರಸ್ತರನ್ನು ನೆನಪಿಸಿಕೊಂಡಿಲ್ಲ. ಬೀದರ್ ಜಿಲ್ಲೆಯಲ್ಲಿ ಹರಿಯುತ್ತಿರುವ ಗೋದಾವರಿ ನದಿ ನೀರಿನ ಸದ್ಬಳಕೆ ಬಗ್ಗೆ ಪ್ರಸ್ತಾಪವಿಲ್ಲ.
ಕೃಷ್ಣಮೃಗ ಸಂರಕ್ಷಣಾ ಮಿಶಲು ಪ್ರದೇಶಕ್ಕೆ 2 ಕೋಟಿ:
ಬೀದರ್ ಜಿಲ್ಲೆಯಲ್ಲಿ ಕೃಷ್ಣಮೃಗಳು ಹೆಚ್ಚಾಗಿ ಕಂಡುಬರುವದರಿಂದ ಇವುಗಳ ಸಂರಕ್ಷಣೆಗಾಗಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶವನ್ನು ಘೋಷಿಸಲಾಗುವುದು. ಈ ಸಂರಕ್ಷಣಾ ಮೀಸಲು ಪ್ರದೇಶದ ರಕ್ಷಣೆ ಮತ್ತು ನಿರ್ವಹಣೆಗಾಗಿ ಎರಡು ಕೋಟಿ ರು. ಮೀಸಲಿಟ್ಟಿರುವದು ಮಾತ್ರ ಈ ಬಜೆಟ್‌ನಲ್ಲಿ ಜಿಲ್ಲೆಗೆ ಹೊಸದು. ಆದರೆ ಎರಡು ಕೋಟಿ ರು. ಮೀಸಲಿಟ್ಟಿದ್ದು ಮಾತ್ರ ಮೂಗಿಗೆ ತುಪ್ಪ ಹಚ್ಚುವ ಎಂಬುವದಕ್ಕೆ ಸಾಕ್ಷಿ.
Karnataka budget 2023: ರಾಯಚೂರು ಪಾಲಿಗೆ ಸಿದ್ದರಾಮಯ್ಯ ಬಜೆಟ್ ನಿರಾಸೆ
ಬಜೆಟ್ ಪುಸ್ತಕದಲ್ಲಿ ಅಲ್ಲೊಂದು ಬಾರಿ ಇಲ್ಲೊಂದು ಬಾರಿ ಎಂಬಂತೆ ಬೀದರ್ ಹೆಸರು ಪ್ರಸ್ತಾಪವಾಗಿದೆ. ಯಾವುದೇ ಮಹತ್ವದ ಅಬಿವೃದ್ಧಿ ಯೋಜನೆಗಳು ಶೂನ್ಯ. ಅರಣ್ಯ ಇಲಾಖೆಯಡಿ, ಪೌರಾಡಳಿತ ಇಲಾಖೆಯಡಿ ಯೋಜನೆಗಳು, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಬರಬೇಕಿತ್ತು. ಆದರೆ ಈ ಬಜೆಟ್‌ನಲ್ಲಿ ಅಭಿವೃದ್ಧಿಯ ಹಲವು ಯೋಜನೆ ನಿರೀಕ್ಷೆಯಲ್ಲಿದ್ದ ಜನರಿಗೆ ಸಿದ್ದರಾಮಯ್ಯ ಅವರ ಬಜೆಟ್ ನಿರಾಸೆ ಮೂಡಿಸಿದೆ. ಜಿಲ್ಲೆಯ ಇಬ್ಬರು ಪ್ರಭಾವಿ ಸಚಿವರಿದ್ದರೂ ನಡೆಯಲಿಲ್ಲ ಅವರ ವರ್ಚಸ್ಸು ಎಂಬುವದಂತೂ ಸತ್ಯ. ಅಷ್ಟಕ್ಕೂ ಮುಂಬರುವ ದಿನಗಳಲ್ಲಿ ಅನುದಾನ ತರುವಲ್ಲಿ ಈ ಇರ್ವರು ಸಚಿವರು ಶ್ರಮಿಸಬೇಕಿದೆ.