Karnataka budget 2023: ಗಣಿ ಜಿಲ್ಲೆ ಬಳ್ಳಾರಿಗೆ ನಿರಾಸೆ ಮೂಡಿಸಿದ ಬಜೆಟ್. ಯಾವುದೇ ನಿರ್ದಿಷ್ಟ ಯೋಜನೆಗಳ ಪ್ರಸ್ತಾಪವಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಗಣಿಜಿಲ್ಲೆ ಬಳ್ಳಾರಿಯ ಪ್ರಗತಿ ನೆಲೆಯಲ್ಲಿ ಯಾವುದೇ ನಿರ್ದಿಷ್ಟಯೋಜನೆಗಳು ಪ್ರಸ್ತಾಪವಾಗಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ ನಿರೀಕ್ಷಿತ ಯೋಜನೆಗಳಿಗೆ ಅನುದಾನ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೆ.ಎಂ. ಮಂಜುನಾಥ್
ಬಳ್ಳಾರಿ (ಜು.8): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಗಣಿಜಿಲ್ಲೆ ಬಳ್ಳಾರಿಯ ಪ್ರಗತಿ ನೆಲೆಯಲ್ಲಿ ಯಾವುದೇ ನಿರ್ದಿಷ್ಟಯೋಜನೆಗಳು ಪ್ರಸ್ತಾಪವಾಗಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ ನಿರೀಕ್ಷಿತ ಯೋಜನೆಗಳಿಗೆ ಅನುದಾನ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗಮನಾರ್ಹ ಸಂಗತಿ ಎಂದರೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ವಹಿಸುವ ಇಲಾಖೆಯಿಂದಲೂ ಯಾವುದೇ ಮಹತ್ವದ ಯೋಜನೆ ಜಾರಿಗೆ ಬಜೆಟ್ ಮುನ್ನುಡಿ ಬರೆದಿಲ್ಲ. ಬಳ್ಳಾರಿ ನಗರದಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಇತರೆ ಯಾವುದೇ ಯೋಜನೆಗಳಿಗೆ ಅನುದಾನ ಪೂರೈಸುವ ಕುರಿತು ಪ್ರಸ್ತಾಪವಾಗಿಲ್ಲ.
ಕರ್ನಾಟಕ ನಾಮಕರಣಕ್ಕೆ 50 ತುಂಬಿದ ಹಿನ್ನೆಲೆ: ವರ್ಷಾದ್ಯಂತ ಕಾರ್ಯಕ್ರಮ ಘೋಷಿಸಿದ ಸಿದ್ದು
ಜೀನ್ಸ್ ಪಾರ್ಕ್ ಬಗ್ಗೆ ಪ್ರಸ್ತಾಪವಿಲ್ಲ:
ಚುನಾವಣೆಗೂ ಮುನ್ನ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಬಳ್ಳಾರಿಯಲ್ಲಿ ‘ಜೀನ್ಸ್ ಅಪೇರೆಲ್ ಪಾರ್ಕ್’ ನಿರ್ಮಿಸಲಾಗುವುದು. ಇದಕ್ಕೆ .5 ಸಾವಿರ ಕೋಟಿಯನ್ನು ಮೊದಲ ಬಜೆಟ್‌ನಲ್ಲಿಯೇ ಮೀಸಲಿಡಲಾಗುವುದು. ಬಳ್ಳಾರಿಯ ಜೀನ್ಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಮಾಡಲು ಪೂರಕ ಸಹಕಾರ ನೀಡಲಾಗುವುದು. ಇದರಿಂದ ಬಳ್ಳಾರಿ ಜೀನ್ಸ್‌ನ ರಾಜಧಾನಿಯಾಗಲಿದ್ದು, ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಗೆ ಆಸ್ಪದವಾಗಲಿದೆ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜೀನ್ಸ್ ಪಾರ್ಕ್ ನಿರ್ಮಾಣ ಸಂಬಂಧ ಪ್ರಸ್ತಾಪಗೊಂಡು, ಹಣ ನಿಗದಿಗೆ ಕ್ರಮ ವಹಿಸಬಹುದು ಎಂಬ ನಿರೀಕ್ಷೆಗಳು ಬಲವಾಗಿದ್ದವು. ಆದರೆ, ಇಡೀ ಬಜೆಟ್‌ನಲ್ಲಿ ಬಳ್ಳಾರಿಯ ಜೀನ್ಸ್ ಸೇರಿದಂತೆ ಈ ಭಾಗದ ವಸೊತ್ರೕದ್ಯಮ ಪ್ರಗತಿಗೆ ಸಂಬಂಧಿಸಿದಂತೆ ಎಲ್ಲೂ ಚಕಾರ ಎತ್ತಿಲ್ಲ.
ಸಮಾನಾಂತರ ಜಲಾಶಯ:
ಬಳ್ಳಾರಿ- ವಿಜಯನಗರ ಜಿಲ್ಲೆಯ ಜೀವನದಿ ಎನಿಸಿದ ತುಂಗಭದ್ರಾ ಜಲಾಶಯದ ಹೂಳಿನಿಂದ ನೀರು ಸಂಗ್ರಹಾ ಸಾಮರ್ಥ್ಯ ಕುಸಿದಿರುವುದರಿಂದ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾನ ಯೋಜನೆ ಕುರಿತು ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಜತೆ ಚರ್ಚಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧ ಬಳ್ಳಾರಿ ಸೇರಿದಂತೆ ಇತರೆ 11 ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ. ಇಷ್ಟಕ್ಕೆ ಜಿಲ್ಲೆಯ ಜನರು ಸಮಾಧಾನ ಪಟ್ಟುಕೊಳ್ಳಬೇಕಷ್ಟೆ.
ಬಜೆಟ್‌ನ ನಿರೀಕ್ಷೆ:
ಬಳ್ಳಾರಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವುದು, ಮೆಣಸಿನಕಾಯಿ ಬೆಳೆಗಾರರಿಗೆ ಪ್ರತ್ಯೇಕ ಮಾರುಕಟ್ಟೆಸ್ಥಾಪಿಸುವುದು, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಅನುದಾನ ನೀಡುವುದು, ಬಳ್ಳಾರಿ ಮಹಾನಗರ ಪ್ರಗತಿಗೆ ವಿಶೇಷ ಪ್ಯಾಕೇಜ್ ನೀಡುವುದು, ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವುದು, ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸೇರಿದಂತೆ ಹತ್ತಾರು ನಿರೀಕ್ಷೆಗಳಿದ್ದವು.
Karnataka budget 2023: ಹೊಸ ಘೋಷಣೆ ಭರವಸೆಯಲ್ಲಿದ್ದ ಯಾದಗಿರಿ ಜಿಲ್ಲೆಗೆ ನಿರಾಸೆ!
ಈ ಪೈಕಿ ಕೆಲವು ಯೋಜನೆಗಳಿಗಾದರೂ ಈ ಬಜೆಟ್‌ನಲ್ಲಿ ಹಣ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವುದರಿಂದ ತಾವೇ ನಿರ್ವಹಿಸುವ ಕ್ರೀಡಾ ಇಲಾಖೆಗಾದರೂ ಹೆಚ್ಚಿನ ಅನುದಾನ ತರಲಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ, ಇಡೀ ಬಜೆಟ್‌ನಲ್ಲಿ ಬಳ್ಳಾರಿ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ಎಲ್ಲೂ ಪ್ರಸ್ತಾಪವಾಗದಿರುವುದು ಜಿಲ್ಲೆಯ ಜನರಿಗೆ ತೀವ್ರ ಬೇಸರ ಮೂಡಿಸಿದಂತಾಗಿದೆ.