ಚುನಾವಣಾ ಅಕ್ರಮ ಆರೋಪ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನಗರದಲ್ಲಿ ಪಾದಯಾತ್ರೆ ನಡೆಸಲು ಮುಂದಾಗಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನುಮತಿ ನೀಡಿದರೆ ಹೋರಾಟ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಜು.31): ಚುನಾವಣಾ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಗರದಲ್ಲಿ ಪಾದಯಾತ್ರೆ ನಡೆಸಲು ಮುಂದಾಗಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬುದ್ಧಿ ಕಡಿಮೆ ಇರುವ ರಾಹುಲ್‌ ಗಾಂಧಿಯವರ ಪಾದಯಾತ್ರೆಗೆ ಯಾವ ನಿಯಮದಡಿ ಅವಕಾಶ ನೀಡುತ್ತಾರೆ? ಅನುಮತಿ ನೀಡಿದರೆ ಬಿಜೆಪಿಯಿಂದ ಹೋರಾಟ ಮಾಡಲಾಗುವುದು ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಅದೇನು ಪ್ರತಿಭಟನೆ ಮಾಡುತ್ತಾರೋ? ಅದೇನು ಕಡಿದು ಕಟ್ಟೆ ಹಾಕುತ್ತಾರೋ ನಾವು ನೋಡುತ್ತೇವೆ ಎಂದು ವಿಜಯೇಂದ್ರ ಗುಡುಗಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆದಾಗ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿತ್ತು. ಆಗ ಚುನಾವಣೆಯಲ್ಲಿ ಅಕ್ರಮ ಆಗಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು ಎಂಬ ಸಾಮಾನ್ಯ ಜ್ಞಾನ ರಾಹುಲ್‌ ಗಾಂಧಿಗೆ ಇಲ್ಲ. ಅದಕ್ಕಾಗಿಯೇ ಅವರು ರಾಜ್ಯಕ್ಕೆ ಬಂದು ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ಯಾತ್ರೆಗೆ ಅನುಮತಿ ನೀಡಬಾರದು ಎಂದು ಕೋರ್ಟ್‌ ಆದೇಶ ಇರುವಾಗ ಅನುಮತಿ ಹೇಗೆ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಇಂದಿರಾಗಾಂಧಿ ಚುನಾವಣಾ ಅಕ್ರಮ ಮಾಡಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಇಂತಹ ಪಕ್ಷಕ್ಕೆ ಚುನಾವಣಾ ಅಕ್ರಮದ ಬಗ್ಗೆ ಆರೋಪ ಮಾಡಲು ಯಾವ ನೈತಿಕ ಅಧಿಕಾರವಿದೆ. ರಾಹುಲ್‌ ಗಾಂಧಿಗೆ ಬುದ್ಧಿ ಕಡಿಮೆ ಇದೆ. ಆದ್ದರಿಂದಲೇ ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬಿಜೆಪಿಗೆ ಪಾದಯಾತ್ರೆಗೆ ಅವಕಾಶ ನೀಡುತ್ತಿಲ್ಲ. ಅಂದಮೇಲೆ ಅವರಿಗೂ ಅವಕಾಶ ನೀಡಬಾರದು ಎಂದರು.

ಚುನಾವಣಾ ಅಕ್ರಮದ ಕಪಟ ನಾಟಕ-ಬಿವೈವಿ:

ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಾಗದೆ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಅಕ್ರಮದ ಹೊಸ ಕಪಟ ನಾಟಕ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಈ ಕಪಟ ನಾಟಕ ಮಾಡಲು ಮುಂದಾದಂತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಡವಳಿಕೆ ಗಮನಿಸಿದರೆ ಅಯ್ಯೋ ಪಾಪ ಅನಿಸುತ್ತದೆ. ಚುನಾವಣಾ ಆಯೋಗದ ಬಗ್ಗೆಯೂ ಅನುಮಾನ, ಸುಪ್ರೀಂಕೋರ್ಟಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸುತ್ತಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಬಳಿ ಪುರಾವೆ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದರು.

ಹೇಗಾದರೂ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಆದರೆ, ಗೆಲುವು ಸಾಧ್ಯವಾಗಿಲ್ಲ ಎಂದ ಅವರು, ಆರೋಪದಿಂದ ಅವರು ಏನೂ ಸಾಧನೆ ಮಾಡಲು ಸಾಧ್ಯವಾಗದು. ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಕರ್ನಾಟಕದಲ್ಲಿ ವಿಪಕ್ಷ ಸ್ಥಾನದಲ್ಲಿ ಕೂರುವ ಅವಶ್ಯಕತೆ ಇರಲಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.