ರಾಹುಲ್ ಗಾಂಧಿ, ಪ್ರಧಾನಿ ಮೋದಿ ಟ್ರಂಪ್ ಕದನ ವಿರಾಮ ಹೇಳಿಕೆ ಬಗ್ಗೆ ಮೌನ ವಹಿಸಿರುವುದನ್ನು ಪ್ರಶ್ನಿಸಿದ್ದಾರೆ. ಚೀನಾ-ಪಾಕಿಸ್ತಾನದ ಸಂಯೋಜಿತ ಬೆದರಿಕೆ ಎದುರಿಸಲು ಸೇನೆಗೆ ಮುಕ್ತ ಹಸ್ತ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಟೀಕೆಗಳು ಸರ್ಕಾರದ ವಿದೇಶಾಂಗ ನೀತಿ ಕುರಿತು ಚರ್ಚೆ ಹುಟ್ಟುಹಾಕಿವೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕದನ ವಿರಾಮ ಹೇಳಿಕೆಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಯಾಕೆ? ಲೋಕಸಭೆಯಲ್ಲಿ 'ಆಪರೇಷನ್ ಸಿಂದೂರ್' ಕುರಿತ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
, ಪ್ರಧಾನಿ ಮತ್ತು ರಕ್ಷಣಾ ಸಚಿವರ ಭಾಷಣದಲ್ಲಿ 'ಚೀನಾ' ಎಂಬ ಪದವೇ ಬಳಕೆಯಾಗಿಲ್ಲ ಎಂದು ಟೀಕಿಸಿದ ರಾಹುಲ್ ಗಾಂಧಿ, ಟ್ರಂಪ್ 29 ಬಾರಿ ಭಾರತ-ಪಾಕಿಸ್ತಾನ ಕದನ ವಿರಾಮದ ಬಗ್ಗೆ ಮಾತನಾಡಿದ್ದಾರೆ, ಆದರೆ ಪ್ರಧಾನಿ ಮೋದಿ ಒಮ್ಮೆಯೂ ಈ ಬಗ್ಗೆ ಮಾತನಾಡಿಲ್ಲ. ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂದು ಇಡೀ ದೇಶಕ್ಕೆ ತಿಳಿದಿದೆ, ಆದರೂ 'ಚೀನಾ' ಎಂಬ ಪದವನ್ನು ಪ್ರಧಾನಿ ಉಪಯೋಗಿಸಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್, 'ನಾವು ಚೀನಾ ಮತ್ತು ಪಾಕಿಸ್ತಾನದ ಸಂಯೋಜಿತ ಶಕ್ತಿಯನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸೈನ್ಯವನ್ನು ಸಮರ್ಥವಾಗಿ ಬಳಸದ, ಟ್ರಂಪ್‌ರ ಸುಳ್ಳು ಹೇಳಿಕೆಗಳಿಗೆ ಧೈರ್ಯದಿಂದ ಉತ್ತರಿಸದ ಪ್ರಧಾನಿಯನ್ನು ದೇಶ ಸಹಿಸಲಾರದು' ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಉಲ್ಲೇಖಿಸಿ, 'ನಮಗೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಮುಕ್ತ ಹಸ್ತ ನೀಡಿ ಕೆಲಸ ಮುಗಿಸುವಂತೆ ಸೂಚಿಸುವ ಪ್ರಧಾನಿ ಬೇಕು' ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು. ಈ ಟೀಕೆಗಳು ಲೋಕಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ವಿರೋಧ ಪಕ್ಷಗಳ ಆಕ್ಷೇಪಗಳು ಮತ್ತಷ್ಟು ತೀವ್ರಗೊಂಡಿವೆ.
