ಶಿವಮೊಗ್ಗದಲ್ಲಿ ದೇಶಭಕ್ತರ ಫ್ಲೆಕ್ಸ್‌ ತೆರವು ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಎಸ್‌ಡಿಪಿಐ ಕೃತ್ಯ ಹಾಗೂ ಯುವಕನ ಮೇಲೆ ಚೂರಿ ಇರಿತವನ್ನು ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ಬೆಂಗಳೂರು (ಆ.16): ಶಿವಮೊಗ್ಗದಲ್ಲಿ ದೇಶಭಕ್ತರ ಫ್ಲೆಕ್ಸ್‌ ತೆರವು ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಎಸ್‌ಡಿಪಿಐ ಕೃತ್ಯ ಹಾಗೂ ಯುವಕನ ಮೇಲೆ ಚೂರಿ ಇರಿತವನ್ನು ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೇಷ್ಠ ರಾಷ್ಟ್ರಭಕ್ತ ಸಾವರ್ಕರ್‌ ಅವರ ಬಗ್ಗೆ ಕಾಂಗ್ರೆಸ್‌ ಟೀಕಿಸುತ್ತಿತ್ತು. ಇದೇ ಕಾಂಗ್ರೆಸ್‌ನವರ ಬೆಂಬಲದಿಂದ ಎಸ್‌ಡಿಪಿಐ ಪಕ್ಷದವರು ಇವತ್ತು ಶಿವಮೊಗ್ಗದಲ್ಲಿ ಅವರ ಭಾವಚಿತ್ರದ ಫ್ಲೆಕ್ಸ್‌ ತೆರವುಗೊಳಿಸಿದ್ದಲ್ಲದೆ, ರಾಷ್ಟ್ರಧ್ವಜವನ್ನು ಕೆಳಗೆ ಹಾಕಿದ್ದಾರೆ. 

ಇದೊಂದು ರಾಷ್ಟ್ರವಿರೋಧಿ ಕೃತ್ಯ. ಈ ದುಷ್ಕೃತ್ಯದಲ್ಲಿ ಭಾಗವಹಿಸಿದವರನ್ನು ರಾಷ್ಟ್ರವಿರೋಧಿಗಳು ಮತ್ತು ಭಯೋತ್ಪಾದಕರೆಂದು ಸರಕಾರ ಗುರುತಿಸಿ ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಇಂಥ ಘಟನೆ ಮರುಕಳಿಸದಂತೆ ಸರಕಾರ ಕ್ರಮ ಕೈಗೊಳ್ಳಬೇಕು. ಹಿಂದೆ ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಬೆಂಕಿ ಹಾಕುವ ಕೆಲಸವನ್ನು ಕಾಂಗ್ರೆಸ್‌ ಬೆಂಬಲದಿಂದ ಎಸ್‌ಡಿಪಿಐ ಮಾಡಿತ್ತು. ಗಲಭೆ ಸೃಷ್ಟಿಯಲ್ಲಿ ಎಸ್‌ಡಿಪಿಐ ಜೊತೆ ಕಾಂಗ್ರೆಸ್‌ ಸೇರುತ್ತಿದೆ. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಎರಡೇ ಗಂಟೆಗಳಲ್ಲಿ ಘಟನೆಯನ್ನು ನಿಯಂತ್ರಿಸುವ ಕೆಲಸವನ್ನು ಸರಕಾರ ಮಾಡಿತ್ತು ಎಂದು ಹೇಳಿದರು.

ಸಿಎಂ ಬದಲಾವಣೆ ಚರ್ಚೆ: ಊಹಾಪೋಹಳಿಗೆ ಸ್ಪಷ್ಟನೆ ಕೊಟ್ಟ ಕಟೀಲ್

ಸಾವರ್ಕರ್‌ ಚಿತ್ರದ ಬಗ್ಗೆ ಗಲಾಟೆ ಮಾಡಿದವನಿಗೆ ಶಿಕ್ಷೆ ಆಗಲಿ: ವೀರ ಸಾವರ್ಕರ್‌ ಅವರ ಭಾವಚಿತ್ರವನ್ನು ತೆಗೆಯುವಂಥ ಪ್ರಯತ್ನದ ಮೂಲಕ ಮಾಡಿರುವ ಕೃತ್ಯ ಅಕ್ಷಮ್ಯ ಅಪರಾಧ, ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿಯಿದೆ. ಅಂತಹವರಿಗೆ ಶಿಕ್ಷೆಯಾದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯಪಟ್ಟರು. ಶಿವಮೊಗ್ಗದ ಮಾಲ್‌ನಲ್ಲಿ ವೀರ ಸಾವರ್ಕರ್‌ ಭಾವಚಿತ್ರ ತೆರವು ಮಾಡಿದ್ದ ಪ್ರಕರಣ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವ​ರು, ಇಡೀ ವಿಶ್ವವೇ ಸಾವರ್ಕರ್‌ ಅವ​ರನ್ನು ಕೊಂಡಾಡುತ್ತಿದೆ. ಅಂತಹದರಲ್ಲಿ ಶಿವಮೊಗ್ಗದಲ್ಲಿ ನಡೆದಿರುವ ಕಿಡಿಗೇಡಿಗಳ ಈ ವರ್ತನೆ ಖಂಡನೀಯ. 

ಸಾವರ್ಕರ್‌ ಬಗ್ಗೆ ಹಗುರವಾದ ಮಾತನಾಡಿರುವುದು ಬಹಳ ನೋವುಂಟು ಮಾಡುವ ಸಂಗತಿ. ಆ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಆತನಿಗೆ ಶಿಕ್ಷೆ ಕೂಡ ಆಗುತ್ತದೆ. ಈ ನಿಟ್ಟಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸಕ್ಕೆ ಹೋಗಬಾರದು. ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇನ್ನೂ ಬೆಂಗಳೂರಿನಲ್ಲಿ ನಡೆದ ಟಿಪ್ಪು ಸುಲ್ತಾನ್‌ ಬ್ಯಾನರ್‌ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಸದ್ಯ ಸಾವರ್ಕರ್‌ ಭಾವಚಿತ್ರ ತೆರವುಗೊಳಿಸಿದ ವಿಚಾರದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಅದರ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಉಳಿದಂತಹ ವಿಚಾರದಲ್ಲಿ ನನಗೆ ವಾಸ್ತವಿಕ ಸಂಗತಿ ನನಗೆ ಗೊತ್ತಿಲ್ಲ ಎಂದರು.

ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಜಾತಿಗೊಬ್ಬ ನಾಯಕ ಹುಟ್ಟಿಕೊಳ್ತಿದ್ದಾರೆ: ಕಟೀಲ್‌

ಪ್ರವಾಸದ ನಂತರ ಕಾಂಗ್ರೆಸ್‌ಗೆ ಬಿಜೆಪಿ ಶಕ್ತಿ ತಿಳಿಯಲಿದೆ: ನಾವೆಲ್ಲಾ ಒಟ್ಟಾಗಿ ಪ್ರವಾಸ ಮಾಡುವ ಮೂಲಕ ಪಕ್ಷದ ಸಂಘಟನೆ ಮಾಡಲಿದ್ದೇವೆ. ಆಗ ಕಾಂಗ್ರೆಸ್‌ಗೆ ಬಿಜೆಪಿ ಶಕ್ತಿ ಅರಿವಾಗುತ್ತದೆ. ಸಿಎಂ ಅಗುವ ಕನಸು ಕಾಣುವ ಕಾಂಗ್ರೆಸ್‌ನವರ ಆಸೆ ಈಡೇರುವುದಿಲ್ಲ, ಸರ್ಕಾರದ ಸಾಧನೆಯನ್ನು ಜನೋತ್ಸವದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದರು. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತ. ಸಿಎಂ ಭಷ್ಟಾಚಾರದ ಬಗ್ಗೆ ಟೀಕಿಸುತ್ತಾ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ನೀಡಿರುವ ಹೇಳಿಕೆ ಖಂಡನೀಯ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರ ಹೇಳಿಕೆ ಅಕ್ಷಮ್ಯ, ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಕಟುವಾಗಿ ಹೇಳಿದರು.