ರಾಜ್ಯದಲ್ಲಿ ಆಲ್ಕೋಹಾಲ್‌ ಆಧರಿತ ತೆರಿಗೆ (ಎಐಬಿ) ಪದ್ಧತಿ ಜಾರಿಯಾದ ಬಳಿಕ ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿದೆ. ಬಿಯರ್ ಬೆಲೆ ಇಳಿಕೆಯಾಗಿರುವುದರಿಂದ ಅದರ ಮಾರಾಟ ಶೇ.41.32 ರಷ್ಟು ಹೆಚ್ಚಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಹರಿದುಬಂದಿದೆ.

ಬೆಂಗಳೂರು: ಆಲ್ಕೋಹಾಲ್‌ ಆಧರಿತ ತೆರಿಗೆ(ಎಐಬಿ) ಪದ್ಧತಿಯಿಂದಾಗಿ ರಾಜ್ಯದಲ್ಲಿ ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಕಳೆದ ಆರು ತಿಂಗಳಿನಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಬಿಯರ್‌ ಮಾರಾಟ ಅಧಿಕವಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

2026-27ರ ಹಣಕಾಸು ವರ್ಷದ ಮೊದಲ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯಾದ್ಯಂತ ₹22,191.63 ಕೋಟಿ ಅಬಕಾರಿ ರಾಜಸ್ವ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹19,570.23 ಕೋಟಿ ಸಂಗ್ರಹವಾಗಿದ್ದು ಪ್ರಸಕ್ತ ₹2,621.40 ಕೋಟಿ ಹೆಚ್ಚಳವಾಗಿದೆ (ಶೇ.13.39). ಇದೇ ಅವಧಿಯಲ್ಲಿ ಬಿಯರ್‌ ಮಾರಾಟದಲ್ಲಿ ಶೇ.41.32 ರಷ್ಟು ಬೃಹತ್ ಏರಿಕೆ ಕಂಡುಬಂದಿದೆ. 2025 ರಲ್ಲಿ 195.27 ಲಕ್ಷ ಬಾಕ್ಸ್‌ ಇದ್ದ ಬಿಯರ್‌ ಬೀರ್ ಮಾರಾಟವು, 2026ರಲ್ಲಿ 275.96 ಲಕ್ಷ ಬಾಕ್ಸ್‌ಗೆ ಹೆಚ್ಚಳವಾಗಿದೆ. ಬಿಯರ್ ಒಂದರ ಮಾರಾಟದಿಂದಲೇ ಸರ್ಕಾರಕ್ಕೆ ₹3,337.88 ಕೋಟಿ ರಾಜಸ್ವ ಸಂಗ್ರಹವಾಗಿದೆ.

ಭಾರತೀಯ ಮದ್ಯ(ಐಎಂಎಲ್‌)ದ ಮಾರಾಟ ಪ್ರಮಾಣದಲ್ಲಿ ಶೇ.1.14 ರಷ್ಟು ಮಾತ್ರ ಏರಿಕೆ ಕಂಡುಬಂದಿದೆ. ಲೈಸೆನ್ಸ್ ಶುಲ್ಕ, ದಂಡ ಇತ್ಯಾದಿ ಮೂಲಗಳಿಂದ ಅರ್ಧವಾರ್ಷಿಕ ಅವಧಿಯಲ್ಲಿ ₹1,389.18 ಕೋಟಿ ರಾಜಸ್ವ ಸಂಗ್ರಹವಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್‌ ಆಧರಿಸಿ ತೆರಿಗೆ ಹಾಕುವ ಹೊಸ ಪದ್ಧತಿಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಮೇ 11 ರಿಂದ ಜಾರಿಗೆ ತರಲಾಗಿತ್ತು. IMAL ನಿಂದ ಬಂದ ರಾಜಸ್ವ ಒಟ್ಟು ₹17,428.57 ಕೋಟಿ ಆದಾಯ ಬಂದಿದ್ದು, ಕಳೆದ ವರ್ಷಕ್ಕಿಂತ ₹2,048.35 ಕೋಟಿ ಹೆಚ್ಚುವರಿ ರಾಜಸ್ವ ಸಂಗ್ರಹವಾಗಿದೆ.

‘ಬಡವ’ರ ಮದ್ಯ ದುಬಾರಿ:

ಎಐಬಿ ತೆರಿಗೆ ಪದ್ಧತಿಯಿಂದಾಗಿ ದುಬಾರಿ ಬೆಲೆಯ ಮದ್ಯಗಳು, ಬಿಯರ್‌ಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿತ್ತು. ಆದರೆ ಕೂಲಿ ಕಾರ್ಮಿಕರು, ಬಡವರು ಸೇವಿಸುವ ಕಡಿಮೆ ಬೆಲೆಯ ಮದ್ಯದ ದರದಲ್ಲಿ ಭಾರೀ ಏರಿಕೆಯಾಗಿತ್ತು.

ಸಾಧಾರಣವಾಗಿ ಏಪ್ರಿಲ್ ತಿಂಗಳ ಚಳಿಗಾಲ ಹಾಗೂ ಮುಂಗಾರು ಆರಂಭದ ನಂತರ ರಾಜ್ಯದಲ್ಲಿ ಬಿಯರ್‌ ಮಾರಾಟ ಗಣನೀಯವಾಗಿ ತಗ್ಗುವುದು ವಾಡಿಕೆ. ಆದರೆ, ಈ ಬಾರಿ ವಾತಾವರಣದಲ್ಲಿದ್ದ ಒಣಹವೆ, ಬಿಸಿಲ ಬೇಗೆ ಹಾಗೂ ಸರ್ಕಾರದ ನೂತನ ಮದ್ಯ ದರ ನೀತಿಯ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಯರ್‌ ಮಾರಾಟ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ ಅರ್ಧ ವಾರ್ಷಿಕ ವರದಿಯಲ್ಲಿ ನಿರೀಕ್ಷೆಗೂ ಮೀರಿದ ರಾಜಸ್ವ ಸಂಗ್ರಹವಾಗಿದ್ದು, ರಾಜ್ಯ ಖಜಾನೆಗೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬಂದಿದೆ.

ಬಿಯರ್‌ ಮಾರಾಟ ಹೆಚ್ಚಾಗಲು ಮುಖ್ಯ ಕಾರಣಗಳೇನು?

ಮಳೆಗಾಲದ ನಡುವೆಯೂ ಬಿಯರ್ ಮಾರಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲು ಪ್ರಮುಖವಾಗಿ ಎರಡು ಕಾರಣಗಳಿವೆ.

ಅಲ್ಕೋಹಾಲ್ ಪ್ರಮಾಣದ ಮೇಲಿನ ಹೊಸ ದರ ನೀತಿ: ರಾಜ್ಯ ಸರ್ಕಾರವು ಮದ್ಯದಲ್ಲಿರುವ ಅಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ದರ ನಿಗದಿಪಡಿಸುವ ನೀತಿಯನ್ನು ಜಾರಿಗೆ ತಂದಿತ್ತು. ಬಿಯರ್‌ನಲ್ಲಿ ಅಲ್ಕೋಹಾಲ್ ಪ್ರಮಾಣ ಕಡಿಮೆಯಿರುವುದರಿಂದ ಅದರ ಮೇಲಿನ ತೆರಿಗೆ ಕಡಿಮೆಯಾಗಿ, ದರವೂ ಅಗ್ಗವಾಯಿತು.

ಗ್ರಾಹಕರ ಒಲವು ಬದಲಾವಣೆ: ಬಿಯರ್ ಬೆಲೆ ಕಡಿಮೆಯಾದ ಕಾರಣ, ಮದ್ಯಪ್ರಿಯರು ಹೆಚ್ಚಿನ ಪ್ರಮಾಣದಲ್ಲಿ ಬಿಯರ್‌ನತ್ತ ಮುಖ ಮಾಡಿದರು. ಇದರ ಜೊತೆಗೆ ರಾಜ್ಯದ ಹಲವೆಡೆ ಮುಂಗಾರಿನ ಅವಧಿಯಲ್ಲೂ ಬಿಸಿಲಿನ ಧಗೆ ಹೆಚ್ಚಾಗಿದ್ದು ಮಾರಾಟದ ಜಿಗಿತಕ್ಕೆ ಮತ್ತಷ್ಟು ನೆರವಾಯಿತು.

ಅಬಕಾರಿ ಇಲಾಖೆಯ ಅಂದಾಜಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದ್ದು, ರಾಜ್ಯದ ಆರ್ಥಿಕತೆಗೆ ಈ ಮದ್ಯ ಮಾರಾಟವು ದೊಡ್ಡ ಪ್ರಮಾಣದ ಬೆಂಬಲ ನೀಡಿದೆ.