ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಮತ್ತೊಮ್ಮೆ ಕೈ ನಾಯಕ ರಮೇಶ್ ಕುಮಾರ್ ಚುನಾವಣಾ ನಿವೃತ್ತಿ ಘೋಷಣೆ!
ಮಾಜಿ ಸ್ಪೀಕರ್ ಬಿ. ರಮೇಶ್ ಕುಮಾರ್ ಅವರು ಚುನಾವಣಾ ನಿವೃತ್ತಿ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಜೀವನದಲ್ಲಿ ಮತ್ತು ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ನಂಬಿಕೆ ದ್ರೋಹವೇ ಸೋಲಿಗೆ ಕಾರಣ ಎಂದು ಹೇಳಿದರು.
ಕೋಲಾರ (ಡಿ.15): ನಾನು ಜೀವನದಲ್ಲಿ ಸೋತಿದ್ದೇನೆ, ಬದುಕಿನಲ್ಲಿ ಸೋತಾಗಿದೆ. ನನಗೆ ಇನ್ನೊಂದು ಚುನಾವಣೆಯಲ್ಲಿ ನಿಲ್ಲುವ ಆಸೆಯಿದ್ದರೆ ಬಿಳಿ ಬಣ್ಣದ ಶರ್ಟ್ ಧರಿಸಿಕೊಂಡು ಮದುವೆ-ಮುಂಜಿ, ರಥೋತ್ಸವ ಅದು ಇದು ಅಂತಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು ಎಂದು ಮಾಜಿ ಸ್ಪೀಕರ್ ಬಿ. ರಮೇಶ್ ಕುಮಾರ್ ಅವರು ಚುನಾವಣಾ ನಿವೃತ್ತಿಯ ಬಗ್ಗೆ ಹೇಳಿದ್ದಾರೆ.
ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿ. ವೆಂಕಟಮುನಿಯಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಹಳ ಜನರು ಏನು ಸ್ವಾಮಿ ಇತ್ತೀಚೆಗೆ ಸಿಗೋದಿಲ್ಲ ಅಂತ ಮಾತನಾಡುತ್ತಾರೆ. ಎಲ್ಲೂ ಬರೋದೆ ಇಲ್ಲಾ ಅಂತಾರೆ. ನಾನು ಜೀವನದಲ್ಲಿ ಸೋತಿದ್ದೇನೆ, ಬದುಕಿನಲ್ಲಿ ಸೋತಾಗಿದೆ ಹಾಗಾಗಿ ಎಲ್ಲಿಯೀ ಹೊರಗೆ ಬರುತ್ತಿಲ್ಲ. ಮತ್ತೆ ಇನ್ನೋಂದು ಚುನಾವಣೆಗೆ ನಿಲ್ಲೋ ಆಸೆ ಇದ್ದಿದ್ದರೆ, ಬಿಳಿ ಶರ್ಟ್ ಹಾಕಿಕೊಂಡು ಮದುವೆ ಮುಂಜಿ, ರಥೋತ್ಸವ ಅದು ಇದು ಅಂತಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ಆದರೆ, ಈಗ ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತೆ. ನಾಲ್ಕಾಗಿತ್ತು, ಇದೀಗ 5ನೇ ಸೋಲು ಆಗೋಯ್ತು. ಯಾಕೆ ಸೋತೆ ಎಂದರೆ ನಂಬಿಕೆ ದ್ರೋಹ ಎಂದು ಬೇಸರದ ನುಡಿಗಳನ್ನಾಡಿದರು.
ಇದನ್ನೂ ಓದಿ: ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದು ಬಿಜೆಪಿ, ಜೆಡಿಎಸ್‌ಗೆ ಸೇರಲ್ಲ: ಸಿಎಂ ಸಿದ್ದರಾಮಯ್ಯ
ಚುನಾವಣೆಯಲ್ಲಿ ಸೋಲು ಎಂದರೆ ಕಡಿಮೆ ಓಟ್ ತಗೊಂಡವರು. ಆದರೆ, ಜೊತೆಗಿದ್ದು ಕೆಲಸ ಮಾಡಿ ಎಲ್ಲಾ ಸರಿ ಎಂದು ಹೇಳಿದವರು ನನ್ನೊಂದಿಗೊದ್ದರು. ಆದರೆ, ಈಗ ನನಗೆ ಗೊತ್ತೆ ಆಗುತ್ತಿಲ್ಲ ಯಾರೆಲ್ಲಾ ಮಹಾನುಭಾವರಿಗೆ ಕೃತಜ್ಞತೆಗಳು ಅರ್ಪಿಸಬೇಕು ಎಂದು. ನಾನು ಬಹಳ ಮುಖ್ಯವಾಗಿ ಮೊದಲನೆಯದಾಗಿ ವೆಂಕಟಮುನಿಯಣ್ಣ ಹಾಗೂ ತಿಮ್ಮರಾಯಣ್ಣ ಕುಟುಂಬಕ್ಕೆ ಕೃತಜ್ಞತೆ ಗಳನ್ನ ಅರ್ಪಿಸುತ್ತೇನೆ. ಎರಡನೆಯದಾಗಿ ಯೋಗ್ಯತೆ ಇದ್ದವರು, ಇಲ್ಲದವರು ಹಾಗೂ ಅನಿಲ್ ಅಂತಹವರ ಕಾರ್ಯಕ್ರಮ ಮಾಡಿ ನನ್ನನ್ನು ಕರೆಸಿಕೊಂಡಿದ್ದೀರ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ಮೂರನೇಯದಾಗಿ ಒಳ್ಳಯದೆ ಮಾಡಿದ್ದರೂ, ಕೆಟ್ಟದ್ದೆ ಮಾಡಿದ್ದರೂ ನನ್ನನ್ನೆ ಸರ್ವಸ್ವ ಅಂದು ನಂಬಿಕೊಂಡಿದ್ದವರಿಗೂ ನನ್ನಿಂದ ಕೋಟಿ ಕೋಟಿ ಕೃತಜ್ಞತೆಗಳು ಎಂದರು.
ಇನ್ನು ನನಗೆ ಇವರೆಲ್ಲಾ ಮುಖ್ಯ ಅಲ್ಲಾ ನಾಲ್ಕನೆ ಗುಂಪಿದೆ. ಅವರು ಊಟಕ್ಕೆ ಕರೆದು ವಿಷ ಹಾಕಿದೋರು. ಭುಜದ ಮೇಲೆ ಕೈ ಹಾಕಿ ಬೆನ್ನ ಹಿಂದೆ ತಿವಿದವರು. ಜೊತೆಯಲ್ಲಿ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು. ದೇವರಿಗೆ ನಮಸ್ಕಾರ ಮಾಡಲಿಕ್ಕೆ ಮಲಗಿದ್ದಾಗ ಕುತ್ತಿಗೆಗೆ ಕತ್ತಿ ಇಟ್ಟವರು. ಇವರಿಗೆ ಎಲ್ಲರಿಗಿಂತಲೂ ಕೃತಜ್ಞತೆ ಅರ್ಪಿಸಿ ಭಗವಂತ ಇವರನ್ನ ಕಾಪಾಡಪ್ಪ, ನಮ್ಮಂತ ದುಷ್ಟರನ್ನ ಅವರು ಮಂಥನ ಮಾಡುತ್ತಿರಲಿ, ಈ ದೇಶ ಚೆನ್ನಾಗಿರಲಿ ಎಂದು ಹೇಳಿದರು, ಈ ಮೂಲಕ ಯಾರೋಬ್ಬರ ಹೆಸರು ಹೇಳದೆ ತಮ್ಮ ಸೋಲಿಗೆ ಕಾರಣರಾದವರನ್ನ ರಮೇಶ್ ಕುಮಾರ್ ಅವರು ತಿವಿದರು.
ಇದನ್ನೂ ಓದಿ: 25 ವರ್ಷಗಳ ನಂತರ ರಾಜಕೀಯ ತಿರುವು ಕೊಟ್ಟ ಡಿ.ಕೆ. ಶಿವಕುಮಾರ್ ಹೇಳಿಕೆ!
ಈ ಕಾರ್ಯಕ್ರಮಕ್ಕೆ ಬರಲಿಕ್ಕೂ ಒಂದು ಕಾರಣವಿದೆ. ಎಲ್ಲರೂ ಕಡೆ ಪಕ್ಷ ನನ್ನ ಮುಖ ನೋಡಲಿ ಎಂದು, ಮುಂದೆ ಇರ್ತೀನೊ ಇಲ್ಲೋ ಅನ್ನೋ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.