ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ: ಚುನಾವಣಾ ಆಯೋಗ ಘೋಷಣೆ
ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ನವದೆಹಲಿ (ಮಾರ್ಚ್ 29, 2023): ಹಲವು ದಿನಗಳಿಂದ ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಮೇ 10 ರಂದು (ಬುಧವಾರ) ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು (ಶನಿವಾರ) ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ ನಡೆದಿದ್ದು, ಈ ವೇಳೆ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಇನ್ನು, ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ.
ಈ ಬಾರಿ 5,21,73,579 ಮತದಾರರು ಮತದಾನಕ್ಕೆ ಅರ್ಹರಾಗಿದ್ದು, ಈ ಪೈಕಿ ಪುರುಷ ಮತದಾರರು 2,62,42,561 ಇದ್ದರೆ, ಮಹಿಳಾ ಮತದಾರರು - 2,59,26,319 ಆಗಿದ್ದಾರೆ. ಇನ್ನು, 80 ವರ್ಷ ಮೇಲ್ಪಟ್ಟ ಮತದಾರರು - 12,15,763 ಇದ್ದರೆ, ಮೊದಲ ಬಾರಿ ಮತದಾನ ಮಾಡುವವರು - 9,17,241 ಆಗಿದ್ದಾರೆ. ಹಾಗೆ, ತೃತೀಯ ಲಿಂಗಿ ಮತದಾರರು - 4699 ಇದ್ದರೆ, ವಿಕಲಚೇತನ ಮತದಾರರು - 5,55,073 ಇದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಇದನ್ನು ಓದಿ: Karnataka Assembly Election 2023: ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ, ಜಿಲ್ಲಾವಾರು ಕ್ಷೇತ್ರ ಮಾಹಿತಿ
ಅಲ್ಲದೆ, ಒಟ್ಟು ಮತದಾನ ಕೇಂದ್ರಗಳು - 58,282 ಇದ್ದರೆ, ನಗರ ಪ್ರದೇಶದಲ್ಲಿನ ಮತಗಟ್ಟೆಗಳ ಸಂಖ್ಯೆ 24063 ಆಗಿದೆ. ಇನ್ನು, ಗ್ರಾಮೀಣ ಪ್ರದೇಶದ ಮತಗಟ್ಟೆಗಳು 34,219 ಇದ್ದರೆ, ಸೂಕ್ಷ್ಮ ಮತಗಟ್ಟೆಗಳು 12,000 ಇವೆ. ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಸರಾಸರಿ 883 ಜನ ಮತ ಹಾಕಲಿದ್ದಾರೆ ಎಂದೂ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಈ ಮೂಲಕ ಚುನಾವಣೆಗೆ ಕಿಕ್ ಸ್ಟಾರ್ಟ್ ಆರಂಭವಾಗಿದ್ದು, ಆಡಳಿತಾರೂಢ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ತ್ರಿಕೋನ ಸ್ಪರ್ಧೆ ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ ಕುಸಿಯುತ್ತಿರುವ ಮತದಾನ ಪ್ರಮಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಚುನಾವಣಾ ಆಯೋಗ, ಮತದಾನ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಘೋಷಣೆ ಹಿನ್ನೆಲೆ: ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಸುದ್ದಿಗೋಷ್ಟಿ ನಡೆಸಿದ್ದು ಈ ವೇಳೆ, ಚುನಾವಣಾ ಆಯುಕ್ತರಾದ ಅರುಣ್ ಗೋಯಲ್, ಅನುಪ್ ಚಂದ್ರ ಪಾಂಡೆ, ನಿತೇಶ್ ವೈಷ್ಯ, ಧರ್ಮೇಂದ್ರ ಶರ್ಮ ಭಾಗಿಯಾಗಿದ್ದಾರೆ. ಕರ್ನಾಟಕ ವಿಧಾನಸಭೆಯ 224 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ಘೋಷಣೆಯಾಗಿದ್ದು, ಮೇ 24 ರವರೆಗೆ ಹಾಲಿ ಸರ್ಕಾರದ ಅವಧಿ ಮುಕ್ತಾಯವಾಗಲಿದೆ ಎಂದು ಸುದ್ದಿಗೋಷ್ಠಿ ವೇಳೆ ಮಾಹಿತಿ ನೀಡಿದ್ದಾರೆ.
80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ ಮನೆಯಿಂದಲೇ ಮತ ಹಾಕಲು ಅವಕಾಶ ನೀಡಲಾಗಿದ್ದು, ಮೊದಲೇ ಈ ಬಗ್ಗೆ ನೋಂದಾಯಿಸಿಕೊಳ್ಳಬೇಕಿದೆ. ಒಂದು ವೋಟ್ ಸಂಗ್ರಹಕ್ಕೆ 3 - 4 ಮಂದಿ ಹೋಗ್ತಾರೆ, ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಮತದಾನದ ಗೌಪ್ಯತೆಯ ಬಗ್ಗೆ ಎಲ್ಲಾ ಕ್ರಮಗಳನ್ನು ವಹಿಸಲಾಗುವುದು ಎಂದೂ ಹೇಳಿದ್ದಾರೆ. ಡ್ರಗ್ಸ್, ಹಣ, ಮದ್ಯ ಹಂಚಿಕೆ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದೂ ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಡೇಟ್ ಫಿಕ್ಸ್: ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ
ಕೇಂದ್ರ ಚುನಾವಣೆ ಆಯೋಗ (Central Election Commission) ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಚುನಾವಣಾ ದಿನಾಂಕ (Election Date) ನಿಗದಿ ಮಾಡಿರುವುದರಿಂದ ನೀತಿ ಸಂಹಿತೆ (Code of Conduct) ಸಹ ಈಗಿನಿಂದಲೇ ಶುರುವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ (Delhi) ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಈ ಮಹತ್ವದ ಘೋಷಣೆ ಮಾಡಲಾಗಿದೆ. ಇನ್ಮುಂದೆ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಸೇರಿ ಇತರೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ತಮ್ಮ ಪ್ರಚಾರದ ಅಬ್ಬರದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿನ ಚುನಾವಣಾ ಸಿದ್ಧತೆ ಕುರಿತು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಪೂರ್ವಭಾವಿ ಪರಿಶೀಲನೆ ನಡೆಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತವರ ತಂಡ ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದು, ಚುನಾವಣಾ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ್ದರು. ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕರ್ನಾಟಕದ ರಾಜಕೀಯ ಪಕ್ಷಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಕೆಂದ್ರೀಯ ಭದ್ರತಾ ಪಡೆ ಅಧಿಕಾರಿಗಳೊಂದಿಗೆ ಚುನಾವಣಾ ಆಯೋಗ ಸರಣಿ ಸಭೆಗಳನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ಅಲ್ಲಿನ ಹವಾಮಾನ ಮುಂತಾದುವನ್ನು ಅವಲೋಕಿಸಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮತದಾರರಿಗೆ ಆಮಿಷವೊಡ್ಡಿದರೆ ತಕ್ಷಣದಿಂದಲೇ ಕ್ರಮ: ರಾಜೀವ್ ಕುಮಾರ್