ಲೋಕಸಭಾ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು: 3-4 ಡಿಸಿಎಂ ಹುದ್ದೆ ಸೃಷ್ಟಿಆಗುತ್ತಾ?
. ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನೂತನ ಸಂಪುಟ ಸೇರಲು 50ಕ್ಕೂ ಮಂದಿ ಲಾಬಿ ಆರಂಭಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಚರ್ಚೆಯ ನಡುವೆಯೇ ಮೂರು ಅಥವಾ ನಾಲ್ಕು ಉಪಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.
ಬೆಂಗಳೂರು (ಮೇ.15): ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನೂತನ ಸಂಪುಟ ಸೇರಲು 50ಕ್ಕೂ ಮಂದಿ ಲಾಬಿ ಆರಂಭಿಸಿದ್ದಾರೆ. ಹಿರಿಯರು, ಅನುಭವಸ್ಥರು ಸೇರಿದಂತೆ ವಿವಿಧ ಸಮಾಜದಲ್ಲಿ ಪ್ರಭಾವ ಹೊಂದಿರುವ 20ಕ್ಕೂ ಹೆಚ್ಚು ಘಟಾನುಘಟಿ ನಾಯಕರು ಈ ಬಾರಿ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಜಾತಿ, ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವವರ ಸಂಖ್ಯೆಯೂ ಕಡಿಮೆ ಏನಿಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಚರ್ಚೆಯ ನಡುವೆಯೇ ಮೂರು ಅಥವಾ ನಾಲ್ಕು ಉಪಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಲಿಂಗಾಯತ, ಒಕ್ಕಲಿಗ, ಪರಿಶಿಷ್ಟಹಾಗೂ ಮುಸ್ಲಿಂ ಸಮುದಾಯಗಳ ಬೆಂಬಲ ಪಡೆಯುವ ದೃಷ್ಟಿಯಿಂದ ಇಂತಹದೊಂದು ನಿರ್ಣಯಕ್ಕೆ ಕಾಂಗ್ರೆಸ್ ಬರಬಹುದು ಎನ್ನಲಾಗುತ್ತಿದೆ.
ಹೀಗೆ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ತೀರ್ಮಾನವಾದರೆ, ದಲಿತ ವರ್ಗದಿಂದ ಡಾ.ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ ಸ್ಥಾನ ಬಯಸಬಹುದು. ಆದರೆ, ಈ ಹುದ್ದೆಗೆ ದೇವನಹಳ್ಳಿಯಿಂದ ಗೆಲ್ಲುವ ಮೂಲಕ ರಾಜ್ಯ ರಾಜಕಾರಣ ಪ್ರವೇಶಿಸಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರು ತೀವ್ರ ಪೈಪೋಟಿ ನೀಡಬಹುದು. ಹೈಕಮಾಂಡ್ ಪ್ರಭಾವ ಹೊಂದಿರುವ ಹಾಗೂ ಹಿರಿತನ ಹೊಂದಿರುವ ಮುನಿಯಪ್ಪ ಅವರ ಪೈಪೋಟಿಯನ್ನು ಪರಮೇಶ್ವರ್ ಎದುರಿಸಬೇಕಾಗಬಹುದು.
ಇನ್ನು ಲಿಂಗಾಯತ ಸಮುದಾಯದ ಪೈಕಿ ಸಿದ್ದರಾಮಯ್ಯ(Siddaramaiah) ಬೆಂಬಲಿಗರಾದ ಎಂ.ಬಿ. ಪಾಟೀಲ್‌ಗೆ (MB Patil) ಅವಕಾಶ ನೀಡಬಹುದು. ಆದರೆ, ಎಂ.ಬಿ. ಪಾಟೀಲ್ ಅವರು ಕೂಡು ಲಿಂಗಾಯತ ಸಮುದಾಯದವರಾದ(Lingayat ccommunity) ಕಾರಣ ಅವರ ಬದಲಿಗೆ ಪಂಚಮಸಾಲಿಗಳಿಗೆ ಡಿಸಿಎಂ ಹುದ್ದೆ ನೀಡಬೇಕು ಎಂಬ ಕೂಗು ಕೇಳಿಬರುವ ಸಾಧ್ಯತೆಯಿದೆ.
ಡಿ.ಕೆ. ಶಿವಕುಮಾರ್(DK Shivakumar) ಅವರು ಒಪ್ಪಿದರೆ ಒಕ್ಕಲಿಗ ಸಮುದಾಯದಿಂದ ಶಿವಕುಮಾರ್ ಅವರನ್ನು ಒಪ್ಪಿಸಬೇಕು ಎಂಬ ಬಯಕೆ ಸಿದ್ದರಾಮಯ್ಯ ಬಣ ಹೊಂದಿದೆ. ಆದರೆ, ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಅವರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸುತಾರಾಂ ಒಪ್ಪುವ ಸಾಧ್ಯತೆಯಿಲ್ಲ. ಒಂದು ವೇಳೆ ಒಪ್ಪಿದರೂ ಏಕ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಮಾತ್ರ ಸಾಧ್ಯ. ಮೂರು ನಾಲ್ಕು ಮಂದಿ ಡಿಸಿಎಂ ಹುದ್ದೆ ಸೃಷ್ಟಿಯಾಗಿ ನೀವು ಡಿಸಿಎಂ ಆಗಿ ಎಂದರೆ ಶಿವಕುಮಾರ್ ಸಚಿವ ಸಂಪುಟ ಸೇರುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷರಾಗಿಯೇ ಮುಂದುವರೆಯುವೇ ಎಂಬ ನಿಲುವು ಪ್ರಕಟಿಸಬಹುದು ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.
ಸಲೀಂ ಅಹಮದ್‌ಗೆ ಡಿಸಿಎಂ ಪಟ್ಟ?:
ಈ ಬಾರಿ ಮುಸ್ಲಿಂ ಸಮುದಾಯ ಪರಿಪೂರ್ಣವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದರಿಂದ ಆ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ನೀಡುವ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಹಲವು ಹೆಸರು ಕೇಳಿ ಬಂದರೂ ಈಗಾಗಲೇ ಕಾರ್ಯಾಧ್ಯಕ್ಷರಾಗಿರುವ ಹಾಗೂ ಕಳೆದ ಮೂರು ವರ್ಷಗಳಿಂದ ಪಕ್ಷಕ್ಕಾಗಿ ಅಹರ್ನಿಶಿ ದುಡಿದಿರುವ ಸಲೀಂ ಅಹಮದ್ ಅವರಿಗೆ ಹೆಚ್ಚು ಅವಕಾಶವಿದೆ ಎನ್ನಲಾಗುತ್ತಿದೆ.
ಏಕೆಂದರೆ, ಹಾವೇರಿಯಿಂದ ಆರಂಭಗೊಂಡು ಕಲ್ಯಾಣ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯವನ್ನು ಸಂಘಟಿಸುವಲ್ಲಿ ಸಲೀಂ ಅಹಮದ್ ಪಾತ್ರ ದೊಡ್ಡದಿದೆ. ವಿಧಾನಪರಿಷತ್ ಸದಸ್ಯರಾಗಿದ್ದರೂ ಸಹ ಪಕ್ಷ ಸಂಘಟನೆ ಹಾಗೂ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಕಾರಣ ಅವರ ಹೆಸರು ಡಿಸಿಎಂ ಹುದ್ದೆಗೆ ಪರಿಗಣನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
Karnataka election results: ಅಭೂತಪೂರ್ವ ಗೆಲುವು: ನಂದಿನಿ ಪೇಡಾ ಹಂಚಿ ಕೈ ನಾಯಕರ ಸಂಭ್ರಮ
ಇದರ ಜತೆಗೆ ಜಾತಿವಾರು ಬೇಡಿಕೆ ಬಂದರೆ ವಾಲ್ಮೀಕಿ ಸಮುದಾಯದಿಂದ ಸತೀಶ್ ಜಾರಕಿಹೊಳಿ ಅವರಿಂದಲೂ ಬೇಡಿಕೆ ಬರಬಹುದು ಎಂದು ತಿಳಿದುಬಂದಿದೆ.