Karnataka election results: ಅಭೂತಪೂರ್ವ ಗೆಲುವು: ನಂದಿನಿ ಪೇಡಾ ಹಂಚಿ ಕೈ ನಾಯಕರ ಸಂಭ್ರಮ
ವೇದಿಕೆ ಮೇಲೆ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ನ ಸಿಹಿಯನ್ನು ಹಂಚಿಕೊಂಡು ಕಾಂಗ್ರೆಸ್ ನಾಯಕರು ಸಂಭ್ರಮಿಸಿದರು. ತನ್ಮೂಲಕ ಈ ಗೆಲುವು ಕನ್ನಡನಾಡಿನ ಅಸ್ಮಿತೆ ನಂದಿನಿಯ ಗೆಲುವು ಎಂಬ ಸಂದೇಶ ರವಾನಿಸಿದರು.
ಬೆಂಗಳೂರು (ಮೇ.14) : ‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ದೊರೆತಿರುವ ಗೆಲುವು ಪಕ್ಷದ ಗೆಲುವಲ್ಲ, ಏಳು ಕೋಟಿ ಕನ್ನಡಿಗರ ಗೆಲುವು. ಬಿಜೆಪಿಯ ಭ್ರಷ್ಟಾಚಾರ, ದ್ವೇಷ ರಾಜಕೀಯ, ದುರಾಡಳಿತ ಹಾಗೂ ಕೋಮುವಾದದ ವಿರುದ್ಧ ಜನ ತೀರ್ಪು ನೀಡಿದ್ದಾರೆ. ಈ ಗೆಲುವು ಮುಂದಿನ ಲೋಕಸಭೆ ಚುನಾವಣೆ ದಿಕ್ಸೂಚಿಯಾಗಲಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೆ, ರಾಜ್ಯ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ನಂಬಿ ಜನರು ಮತ ಚಲಾಯಿಸಿದ್ದಾರೆ. ಹೀಗಾಗಿ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದೂ ಗ್ಯಾರಂಟಿ ಯೋಜನೆಗಳನ್ನೂ ಈಡೇರಿಸುತ್ತೇವೆ ಎಂದೂ ಘೋಷಿಸಿದರು.
ಸಿಎಂ ಆಯ್ಕೆಗೆ ಸಿಗದ ಒಮ್ಮತ: ನಾಳೆ ಮತ್ತೊಮ್ಮೆ ಶಾಸಕರ ಅಭಿಪ್ರಾಯ ಸಂಗ್ರಹ
ಕಾಂಗ್ರೆಸ್‌ನ ದಿಗ್ವಿಜಯದ ಬಳಿಕ ಭಾರತ್ ಜೋಡೋ ಭವನ(Bharat jodo bhavana)ದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC president Mallikarjun kharge) ನೇತೃತ್ವದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್(KC Venugopal), ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ(Randeep singh surjewala), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಸೇರಿದಂತೆ ಪದಾಧಿಕಾರಿಗಳ ಜತೆಗೂಡಿ ಕೈ ಜೋಡಿಸಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಬಿಜೆಪಿ 150 ಸೀಟು ಗೆಲ್ಲಲಿದೆ ಎನ್ನುತ್ತಿದ್ದರು. ಅಮಿತ್ ಶಾ ಅವರ ಬಳಿ ಗೃಹ ಖಾತೆ ಇರುವುದರಿಂದ ಗುಪ್ತಚರ ವರದಿಗಳು ಬಿಜೆಪಿ ಸೋಲಲಿದೆ ಎಂದು ಹೇಳಿದ್ದು ಅವರಿಗೂ ಗೊತ್ತಿದೆ. ಆದರೂ ಹಣ ಬಲದಿಂದ ಕನ್ನಡಿಗರನ್ನು ಗೆಲ್ಲಬಹುದು ಎಂಬ ಭ್ರಮೆಯಿಂದ ಬಿಜೆಪಿ ಗೆಲ್ಲಲಿದೆ ಎನ್ನುತ್ತಿದ್ದರು. ಅವರ ಭ್ರಮೆಯನ್ನು ಕನ್ನಡಿಗರು ಸೋಲಿಸಿದ್ದಾರೆ.
ಮೋದಿ ಅವರ ಪ್ರಭಾವ ಈ ಚುನಾವಣೆಯಲ್ಲಿ ಏನೇನೂ ನಡೆದಿಲ್ಲ. ನೂರು ಬಾರಿ ಮೋದಿ ಮತ್ತು ಅಮಿತ್ ಶಾ ಬಂದರೂ ಯಾವ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದೆ, ನನ್ನ ಮಾತು ನಿಜವಾಗಿದೆ. ಧರ್ಮ ವಿಭಜನೆ, ಧರ್ಮದ್ವೇಷದ ಹಿಂದುತ್ವದ ರಾಜಕೀಯವನ್ನು ಮತದಾರರು ತಿರಸ್ಕರಿಸಿದ್ದಾರೆ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ಬಿಜೆಪಿಯವರಿಗೆ ಎಚ್ಚರಿಕೆಯ ಗಂಟೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧವಾಗಿ ಜನ ಮತ ನೀಡುತ್ತಾರೆ, ಇದರಿಂದ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.
ಗ್ಯಾರಂಟಿ ಈಡೇರಿಸುತ್ತೇವೆ:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ಈಡೇರಿಸಲ್ಲ ಎದು ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ. ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಲಿದೆ ಎನ್ನುತ್ತಿದೆ. ರಾಜ್ಯ ಹಾಗೂ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿರುವುದು ಬಿಜೆಪಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 9 ವರ್ಷಗಳಲ್ಲಿ 102 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಅವರು ಸಾಲದ ಮೊತ್ತವನ್ನು ದುಪ್ಪಟ್ಟು ಮಾಡಿದ್ದಾರೆ. ನಾವು ಇವರಿಂದ ಆರ್ಥಿಕತೆಯ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.
ಸೋನಿಯಾಗೆ ಮಾತು ನೀಡಿದ್ದೆ: ಡಿಕೆಶಿ
‘ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ವೇಳೆ ಏನಾದರೂ ಮಾಡಿ ಕರ್ನಾಟಕವನ್ನು ನಿಮಗೆ ಸಮರ್ಪಿಸುತ್ತೇನೆ ಎಂದು ಮಾತು ಕೊಟ್ಟಿದ್ದ. ಆ ಭಾಗ್ಯ ಇಂದು ದೊರೆತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಭಾರತ ಜೋಡಿಸುವ ಸಂದೇಶವಾಗಿ ಫಲಿತಾಂಶ ಬಂದಿದೆ. ಇದು ನಮ್ಮ ಗೆಲುವಲ್ಲ, ರಾಜ್ಯದ ಜನತೆಯ ಗೆಲುವು. ರಾಜ್ಯದ ಗೃಹಿಣಿಯರ ಕಣ್ಣೀರಿನ ವಿರುದ್ಧದ ಗೆಲುವು, ಕಾಂಗ್ರೆಸ್‌ನ ಗ್ಯಾರಂಟಿಗಳ ಗೆಲುವು. ಈ ಗೆಲುವಿನಿಂದ ಮೂರೂವರೆ ವರ್ಷದಿಂದ ರಾಜ್ಯಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಿದೆ.
ಹೊಸ ಸರ್ಕಾರದಿಂದ ಜನರ ಕಣ್ಣೀರು ನಿಂತಿದೆ, ಮುಖ ಅರಳುತ್ತಿದೆ. ಇನ್ನು ಮುಂದೆ ಗೃಹ ಜ್ಯೋತಿ ಬೆಳಗಲಿದೆ. ನಮ್ಮ ಸರ್ಕಾರ ಬಂದ ಮೊದಲ ದಿನದಿಂದ ಗೃಹ ಲಕ್ಷ್ಮೇ ನಗುತ್ತಿರುತ್ತಾಳೆ. ಬಡವರ ಅನ್ನಭಾಗ್ಯದಿಂದ ನೆಮ್ಮದಿಯಾಗಲಿದ್ದು, ಮಹಿಳೆಯರು ಸುಖವಾಗಿ ಬಸ್ಸು ಪ್ರಯಾಣ ಮಾಡಲಿದ್ದಾರೆ. ಅಂಗನವಾಡಿ ಕಾರ್ಯಕರ್ತರು ನಿಟ್ಟಿಸಿರು ಬಿಡಲಿದ್ದಾರೆ. ಚಾಮುಂಡೇಶ್ವರಿ ದೇವಾಲಯದ ಮುಂದೆ ಪ್ರಣಾಳಿಕೆ ಈಡೇರಿಸುವುದಾಗಿ ಮಾಡಿರುವ ಪ್ರಮಾಣದಂತೆ ಸಿದ್ದರಾಮಯ್ಯ ಹಾಗೂ ನಾನು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ನಂದಿನಿ ಸಿಹಿ ಹಂಚಿ ಸಂಭ್ರಮ
ವೇದಿಕೆ ಮೇಲೆ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ನ ಸಿಹಿಯನ್ನು ಹಂಚಿಕೊಂಡು ಕಾಂಗ್ರೆಸ್ ನಾಯಕರು ಸಂಭ್ರಮಿಸಿದರು. ತನ್ಮೂಲಕ ಈ ಗೆಲುವು ಕನ್ನಡನಾಡಿನ ಅಸ್ಮಿತೆ ನಂದಿನಿಯ ಗೆಲುವು ಎಂಬ ಸಂದೇಶ ರವಾನಿಸಿದರು.
Karnataka election result 2023: ವೀಕ್ಷಕರ ವರದಿ ಆಧರಿಸಿ ಹೈಕಮಾಂಡ್‌ನಿಂದ ಸಿಎಂ ಆಯ್ಕೆ! ನಾಳೆಯೇ ತೀರ್ಮಾನ
1977ರಲ್ಲಿ ಕಾಂಗ್ರೆಸ್ ಸೋತಾಗ ಕಾಂಗ್ರೆಸ್‌ನ ಕತೆ ಮುಗಿಯಿತು ಎಂದಿದ್ದರು. ಬಳಿಕ ಚಿಕ್ಕಮಗಳೂರಿನಿಂದ ಇಂದಿರಾಗಾಂಧಿ ಅವರು ಅಭೂತಪೂರ್ವ ಗೆಲುವು ಸಾಧಿಸಿದರು. ಬಳಿಕ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿನ ಗೆಲುವು ಕಾಂಗ್ರೆಸ್‌ಗೆ ಮರು ಜೀವ ನೀಡಿತ್ತು. ಇದೀಗ ಈ ಅಭೂತಪೂರ್ವ ಗೆಲುವು ಅದೇ ಸಂದೇಶ ರವಾನಿಸಿದೆ.
- ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ