ಊಟಿಯಲ್ಲಿ ಕರ್ನಾಟಕದ ಚೇಸಿಂಗ್ ಫೌಂಟೇನ್!
ಊಟಿಯಲ್ಲಿ ಕರ್ನಾಟಕದ ಚೇಸಿಂಗ್ ಫೌಂಟೇನ್| ಕರ್ನಾಟಕ ಸಿರಿ ಉದ್ಯಾನದಲ್ಲಿ ತೂಗು ಸೇತುವೆ ನಿರ್ಮಾಣ| ಇಟಾಲಿಯನ್ ಗಾರ್ಡನ್, ಟೀ ಗಾರ್ಡನ್ ಕಾಮಗಾರಿ ಪ್ರಗತಿಯಲ್ಲಿ
ರಮೇಶ್ ಬನ್ನಿಕುಪ್ಪೆ
ಬೆಂಗಳೂರು[ಫೆ.03]: ಶೀತವಲಯದ ಆಕರ್ಷಕ ಹೂವಿನ ಗಿಡಗಳು ಹಾಗೂ ಟೊಪೇರಿಯಾಗಳನ್ನೊಳಗೊಂಡಿರುವ ಊಟಿಯ ‘ಕರ್ನಾಟಕ ಸಿರಿ’ ತೋಟಗಾರಿಕಾ ಉದ್ಯಾನವನಕ್ಕೆ ಶೀಘ್ರದಲ್ಲಿ ಬೃಹತ್ ತೂಗು ಸೇತುವೆ ಮತ್ತು ದುಬೈನಲ್ಲಿರುವ ಮಿರಾಕಲ್ ಗಾರ್ಡನ್ ಮಾದರಿಯಲ್ಲಿ ಚೇಸಿಂಗ್ ಫೌಂಟೇನ್‌ಗಳು ಸೇರಿಕೊಳ್ಳಲಿವೆ.
ಕಳೆದ ಹಲವು ವರ್ಷಗಳಿಂದ ಬರಡಾಗಿದ್ದ ತಮಿಳುನಾಡಿನ ಊಟಿಯ ಬಟಾನಿಕಲ್ ಗಾರ್ಡನ್‌ಗೆ ಹೊಂದಿಕೊಂಡಂತಿರುವ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಒಡೆತನದ ‘ಫರ್ನ್ ಹಿಲ್’ನ ಕರ್ನಾಟಕ ಸಿರಿ ತೋಟಗಾರಿಕೆ ಉದ್ಯಾನವನ್ನು ಐದು ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಎರಡು ವರ್ಷಗಳ ಹಿಂದೆ ಲೋಕಾರ್ಪಣೆ ಮಾಡಲಾಗಿತ್ತು. ಇದೀಗ ಮತ್ತಷ್ಟುಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಸುಮಾರು 1.4 ಕೋಟಿ ರು. ವೆಚ್ಚದಲ್ಲಿ ಬೃಹತ್ ತೂಗು ಸೇತುವೆ ಮತ್ತು 1.5 ಕೋಟಿ ವೆಚ್ಚದಲ್ಲಿ ಚೇಸಿಂಗ್ ಫೌಂಟೇನ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
ಹನಿಮೂನ್ ಗೆ ಊಟಿಯಲ್ಲಿ ಇಡೀ ರೈಲಿನ ಟಿಕೆಟ್ ಖರೀದಿ ಮಾಡಿದ ಜೋಡಿ
ಉದ್ಯಾನದ ಒಂದು ಭಾಗದಲ್ಲಿ ತೋಟಗಾರಿಕೆ ಇಲಾಖೆಯಿಂದ ನೀಲಗಿರಿ ಕುರಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಈ ಕುರಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು. ಕುರಿ ಮರಿಗಳೊಂದಿಗೆ ಮಕ್ಕಳು ಆಟವಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ವಿದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕೋರ್ಟ್ ಯಾರ್ಡ್ ಗಾರ್ಡನ್ ನಿರ್ಮಿಸುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಜೊತೆಗೆ, ಒಂದೂವರೆ ಎಕರೆ ಪ್ರದೇಶದಲ್ಲಿ ಇಟಾಲಿಯನ್ ಗಾರ್ಡನ್ ನಿರ್ಮಿಸಲಾಗುತ್ತಿದೆ.
ಸುಮಾರು ಮೂರು ಎಕರೆ ಪ್ರದೇಶದಲ್ಲಿ ಟೀ ಗಾರ್ಡನ್ ಮಾಡಲಾಗುತ್ತಿದೆ. ಈ ಗಾರ್ಡನ್‌ನಲ್ಲಿ ಪ್ರವಾಸಿಗರು ಫೋಟೋ ಶೂಟ್ ಮಾಡಲು ಅಗತ್ಯವಾದ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತಿದೆ. ಉದ್ಯಾನಕ್ಕೆ ಸಾಗುವ ಕಿರಿದಾದ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ. 2.5 ಎಕರೆ ವ್ಯಾಪ್ತಿಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆ ಕಾಲ ಹಾಗೂ ದಸರಾ ರಜೆ ಅವಧಿಯಲ್ಲಿ ಊಟಿಗೆ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಊಟಿಗೆ ವಾರ್ಷಿಕ ಸುಮಾರು 30 ಲಕ್ಷ ಮಂದಿ ಆಗಮಿಸುತ್ತಾರೆ. ಈ ಪೈಕಿ ಇದೀಗ 4.5 ಲಕ್ಷದಿಂದ 5 ಲಕ್ಷ ಮಂದಿ ನಮ್ಮ ‘ಕರ್ನಾಟಕ ಸಿರಿ ತೋಟಗಾರಿಕೆ ಉದ್ಯಾನ’ಕ್ಕೆ ಬರುತ್ತಿದ್ದಾರೆ. ಇವರ ಸಂಖ್ಯೆಯನ್ನು ಕನಿಷ್ಠ 15 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದೇ ಕಾರಣದಿಂದ ಮತ್ತಷ್ಟುಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ವಿವರಿಸಿದರು.
ಊಟಿಯಲ್ಲಿ ಕರ್ನಾಟಕ ಉದ್ಯಾನವನ ಅನಾವರಣ
ಏಪ್ರಿಲ್‌ನಲ್ಲಿ ಬಿಎಸ್‌ವೈ ಉದ್ಘಾಟನೆ:
ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನವನದಲ್ಲಿ ನಡೆಯುತ್ತಿರುವ ಎರಡನೇ ಸುತ್ತಿನ ಅಭಿವೃದ್ಧಿ ಕಾಮಗಾರಿಗಳು ಮಾಚ್‌ರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ. ಏಪ್ರಿಲ್ ತಿಂಗಳಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಲೋಕಾರ್ಪಣೆ ಮಾಡಿಸಲು ಚಿಂತನೆ ನಡೆಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ವಿವರಿಸಿದರು.