ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ. ಈ ಯೋಜನೆಗಾಗಿ ನೌಕರರ ವೇತನದಿಂದ ಗ್ರೂಪ್‌ಗೆ ಅನುಗುಣವಾಗಿ ಮಾಸಿಕ ವಂತಿಕೆ ಕಡಿತಗೊಳಿಸಲಾಗುವುದು.
ಬೆಂಗಳೂರು (ಸೆ.23): ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಮಹತ್ವಾಕಾಂಕ್ಷೆಯ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಯೋಜನೆಯ ವಿವರಗಳು ಮತ್ತು ಮಾಸಿಕ ವಂತಿಕೆ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಸರ್ಕಾರಿ ನೌಕರರ ವೇತನದಿಂದ ಮಾಸಿಕ ವಂತಿಕೆಯನ್ನು ಕಡಿತಗೊಳಿಸಲಾಗುವುದು. ಅಕ್ಟೋಬರ್ 2025ರ ವೇತನದಿಂದ ಈ ವಂತಿಕೆ ಕಡಿತ ಆರಂಭವಾಗಲಿದೆ. ನೌಕರರ ಗ್ರೂಪ್‌ಗೆ ಅನುಗುಣವಾಗಿ ವಂತಿಕೆ ಈ ಕೆಳಗಿನಂತಿದೆ:
ನೌಕರರ ವರ್ಗವಾರು ವಂತಿಗ ಕಡಿತ:
- ಗ್ರೂಪ್ ಎ: ₹1,000
- ಗ್ರೂಪ್ ಬಿ: ₹500
- ಗ್ರೂಪ್ ಸಿ: ₹350
- ಗ್ರೂಪ್ ಡಿ: ₹250
ವಂತಿಕೆ ಪಾವತಿ ವಿಧಾನ ಮತ್ತು ಇತರ ನಿಯಮಗಳು
ಪಾವತಿ ವಿಧಾನ: ಸರ್ಕಾರಿ ನೌಕರರ ವೇತನದಿಂದ ಕಡಿತಗೊಂಡ ವಂತಿಕೆಯನ್ನು ಎಲ್ಲ ಡಿಡಿಒಗಳು (ವೇತನ ವಿತರಣಾ ಅಧಿಕಾರಿಗಳು) ಖಜಾನೆ-2 ಮೂಲಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಬ್ಯಾಂಕ್ ಖಾತೆ ವಿವರಗಳನ್ನು ಎಚ್‌ಆರ್‌ಎಂಎಸ್ (HRMS) ಮೂಲಕ ಡಿಡಿಒಗಳಿಗೆ ತಿಳಿಸಲಾಗುವುದು.
ಪತಿ/ಪತ್ನಿ ಇಬ್ಬರೂ ನೌಕರರಾಗಿದ್ದರೆ: ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ, ಅವರಿಬ್ಬರಲ್ಲಿ ಒಬ್ಬರು ಮಾತ್ರ ವಂತಿಕೆ ಪಾವತಿಸುವ ಬಗ್ಗೆ ತಾವೇ ನಿರ್ಧರಿಸಿ, ಸಂಬಂಧಪಟ್ಟ ಡಿಡಿಒಗೆ ಮಾಹಿತಿ ನೀಡಬೇಕು.
ನಿಯೋಜಿತ ನೌಕರರು: ಎಚ್‌ಆರ್‌ಎಂಎಸ್ ವ್ಯಾಪ್ತಿಯಲ್ಲಿ ಇಲ್ಲದ (ಇತರ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯ ಸೇವೆ) ನೌಕರರು ತಮ್ಮ ಮಾಸಿಕ ವೇತನದಲ್ಲಿ ವಂತಿಕೆ ಕಡಿತಗೊಳಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು.
ಈ ಯೋಜನೆಯು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನಗದು ರಹಿತವಾಗಿ ಪಡೆಯಲು ಸಹಾಯಕವಾಗಲಿದೆ. ಯೋಜನೆ ಜಾರಿಗೆ ಬರುವ ಅಕ್ಟೋಬರ್‌ನಿಂದಲೇ ಇದರ ಪ್ರಯೋಜನಗಳು ಲಭ್ಯವಾಗಲಿವೆ.
