ಬೆಂಗಳೂರು(ಡಿ.03): ದೇಶಾದ್ಯಂತ 2021ರ ಜನಗಣತಿಗೆ ಸಿದ್ಧತೆ ನಡೆಯುತ್ತಿದ್ದು, ಕಳೆದ ಹತ್ತು ವರ್ಷದಲ್ಲಿ ಉಂಟಾಗಿರುವ ವ್ಯಾಪಕ ನಗರೀಕರಣದ ಪರಿಣಾಮ ಮುಂದಿನ ಜನಗಣತಿ ಸಮೀಕ್ಷೆ ಬಳಿಕ ರಾಜ್ಯದ ಸುಮಾರು ಶೇ.50ರಷ್ಟು ಜನರು ನಗರ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂಬ ಅಂಶ ಹೊರಬೀಳುವ ನಿರೀಕ್ಷೆಯಿದೆ. ಅಂದರೆ, ರಾಜ್ಯದ ಅರ್ಧ ಜನಸಂಖ್ಯೆ ನಗರಗಳ ವ್ಯಾಪ್ತಿಗೆ ಸೇರಿರುವುದು ನಿಚ್ಚಳವಾಗಲಿದೆ.

ಕಳೆದ ಹತ್ತು ವರ್ಷದಲ್ಲಿ ಉಂಟಾಗಿರುವ ನಗರ ಪ್ರದೇಶದ ವಲಸೆ, ಗ್ರಾಮ ಪಂಚಾಯ್ತಿಗಳು ಪಟ್ಟಣ ಪಂಚಾಯ್ತಿಗಳಾಗಿ ರೂಪಾಂತರಗೊಂಡಿರುವುದು, ಜೊತೆಗೆ ಇತ್ತೀಚೆಗೆ ರಾಜ್ಯ ಸರ್ಕಾರವು 33 ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿಗಳನ್ನಾಗಿ ಬದಲಿಸಿರುವುದು ಹಾಗೂ 2021ರ ಜನಗಣತಿಯಲ್ಲಿ ‘ನಗರ ಪ್ರದೇಶ’ ಎಂದು ಗುರುತಿಸಲು ಸೂಚಿಸಿರುವ ನೂತನ ಮಾನದಂಡಗಳಿಂದ ಸುಮಾರು ಶೇ.50ರಷ್ಟು ಜನಸಂಖ್ಯೆ ನಗರ ಪ್ರದೇಶದ ವ್ಯಾಪ್ತಿಗೆ ಬರಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

2011ರ ಜನಗಣತಿ ಪ್ರಕಾರ ಶೇ.39.6ರಷ್ಟು ನಗರೀಕರಣ ಆಗಿತ್ತು. ಇದು ಶೇ.8ರಿಂದ 9ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ನಗರ ಪ್ರದೇಶವನ್ನು ಗುರುತಿಸಲು ಬದಲಾಗಿರುವ ಮಾನದಂಡವೂ ಕಾರಣವಾಗಬಹುದು. ಪುರಸಭೆ, ನಗರಸಭೆ, ಕಂಟೋನ್ಮೆಂಟ್‌ ಬೋರ್ಡ್‌, ನೈರ್ಮಲ್ಯ ಮಂಡಳಿ, ಅಧಿಸೂಚಿತ ಪ್ರದೇಶ, ಸಮಿತಿ ಇತ್ಯಾದಿ ಎಲ್ಲ ಸ್ಥಳಗಳು ನಗರ ವ್ಯಾಪ್ತಿಗೆ ಬರುತ್ತವೆ. ಜೊತೆಗೆ ಇದನ್ನು ಗುರುತಿಸುವ ಮಾನದಂಡವೂ ಪ್ರಸಕ್ತ ಸಾಲಿನಿಂದ ಬದಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಶೀಘ್ರ ಶುರುವಾಗುತ್ತಿದೆ ಜನಗಣತಿ : ಹೊಸ ವಿಧಾನ

ಏನಿದು ಮಾನದಂಡ: 

ನಗರ ಪ್ರದೇಶಗಳ ವ್ಯಾಖ್ಯಾನವು ದೇಶಾದ್ಯಂತ ಏಕರೂಪವಾಗಿರಲಿಲ್ಲ. 1961ರ ಜನಗಣತಿಯ ನಂತರ ನಗರೀಕರಣದ ಪ್ರವೃತ್ತಿಗಳನ್ನು ಅಧ್ಯಯನ ಮಾಡಲು ಏಕರೂಪದ, ತುಲನಾತ್ಮಕವಾದ ಕಠಿವಾದ ವ್ಯಾಖ್ಯಾನವನ್ನು ಅಳವಡಿಸಲಾಯಿತು. ಇದೀಗ 2021ರ ಜನಗಣತಿ ವೇಳೆ ನಗರ ಅಥವಾ ಪಟ್ಟಣಗಳನ್ನು ಗುರುತಿಸಲು ಪ್ರತ್ಯೇಕ ಮಾನದಂಡಗಳನ್ನು ಗುರುತಿಸಲಾಗಿದೆ.

ಈ ಬಗ್ಗೆ 2019ರ ನವೆಂಬರ್‌ನಲ್ಲಿ ಆದೇಶ ಹೊರಡಿಸಿರುವ ರಾಜ್ಯ ಜನಗಣತಿ ಕಾರ್ಯಾಚರಣೆಗಳ ನಿರ್ದೇಶಕ ಎಸ್‌.ಐ ವಿಜಯ್‌ಕುಮಾರ್‌, ಪುರಸಭೆ, ನಗರಸಭೆ, ಕಂಟೋನ್ಮೆಂಟ್‌ ಬೋರ್ಡ್‌, ನೈರ್ಮಲ್ಯ ಮಂಡಳಿ, ಅಧಿಸೂಚಿತ ಪ್ರದೇಶ, ಸಮಿತಿ ಇತ್ಯಾದಿ ಎಲ್ಲ ಸ್ಥಳಗಳು ನಗರ ವ್ಯಾಪ್ತಿಗೆ ಬರುತ್ತವೆ. ಜೊತೆಗೆ ಕನಿಷ್ಠ 5 ಸಾವಿರ ಜನಸಂಖ್ಯೆ, ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿರುವ ಕನಿಷ್ಠ ಶೇ.75ರಷ್ಟು ಪುರುಷ ಪ್ರಧಾನ ಕೆಲಸಗಾರರ ಸಂಖ್ಯೆ ಇರುವ ಪ್ರದೇಶ, ಪ್ರತಿ ಚದರ ಕಿ.ಮೀ.ಗೆ 450 ಮಂದಿಯ ಜನಸಂಖ್ಯೆ ಸಾಂದ್ರತೆ ಹೊಂದಿರುವ ಗುಣಗಳನ್ನು ಹೊಂದಿರುವ ಪ್ರದೇಶವನ್ನು ಅಧಿಕೃತವಲ್ಲದ ಪಟ್ಟಣ ಎಂದು ಪರಿಗಣಿಸಬಹುದು ಎಂದು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ನಗರೀಕರಣ ವ್ಯಾಪ್ತಿ ಹೆಚ್ಚಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2021ರ ಜನಗಣತಿ : ಮೊಬೈಲ್‌ ಆ್ಯಪ್‌ ಮೂಲಕ ಸಮೀಕ್ಷೆ

ಶೇ.45ರಷ್ಟಕ್ಕೆ ಹೆಚ್ಚಳ ನಿಶ್ಚಿತ:

ನಗರಾಭಿವೃದ್ದಿ ಇಲಾಖೆಯ ಮತ್ತೊಬ್ಬ ಅಧಿಕಾರಿಯ ಪ್ರಕಾರ, ಶೇ.50ರಷ್ಟುನಗರೀಕರಣ ದಾಖಲಾಗುವ ಸಾಧ್ಯತೆ ಕಡಿಮೆ ಇದೆ. ಪ್ರಸ್ತುತ ಶೇ.39ರಷ್ಟುಜನಸಂಖ್ಯೆ ನಗರ ಪ್ರದೇಶದಲ್ಲಿದ್ದು, ಹೆಚ್ಚೆಂದರೆ ಶೇ.45ರಷ್ಟುಜನಸಂಖ್ಯೆ ಪಟ್ಟಣ ಹಾಗೂ ನಗರಕೇಂದ್ರಿತವಾಗಬಹುದು. ಇನ್ನು ಇದೀಗ ಕೊರೋನಾದಿಂದ ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಗಳಿಗೂ ಕೆಲ ಪ್ರಮಾಣದ ಜನರು ಹಿಂತಿರುಗಿದ್ದಾರೆ. ಹೀಗಾಗಿ ಸಂಪೂರ್ಣವಾಗಿ ಜನಗಣತಿ ನಡೆದು ವರದಿ ಬಂದ ಬಳಿಕವಷ್ಟೇ ಎಷ್ಟು ಪ್ರಮಾಣದಲ್ಲಿ ನಗರೀಕರಣ ಆಗಿದೆ ಎಂಬುದು ತಿಳಿಯಲಿದೆ. ಮೊದಲ ಹಂತದಲ್ಲಿ ತರಬೇತಿಗಾಗಿ ಚಾಮರಾಜನಗರದಲ್ಲಿ ಪ್ರಾಯೋಗಿಕ ಜನಗಣತಿ ಆರಂಭಿಸಲಾಗುವುದು ಎಂದು ಹೇಳಿದರು.

ಇನ್ನು ಈ ಬಾರಿ ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಲು ನಗರ ಚಾಜ್‌ರ್‍ಗಳು, ಗ್ರಾಮೀಣ ಚಾಜ್‌ರ್‍ಗಳು ಹಾಗೂ ವಿಶೇಷ ಚಾರ್ಜ್‌ಗಳು ಎಂಬ ಪ್ರತ್ಯೇಕ ಬ್ಲಾಕ್‌ಗಳನ್ನು ವಿಂಗಡಿಸಲಾಗಿದೆ. ರಾಜ್ಯ ಸರ್ಕಾರದಿಂದ ಅಧಿಸೂಚಿಸಲ್ಪಟ್ಟಿರುವ ಪ್ರತಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳು ನಗರ ಪ್ರದೇಶವೆಂದು ಪರಿಗಣಿಸಲ್ಪಡಲಿದೆ. ಗ್ರಾಮೀಣ ಭಾಗದ ಪ್ರದೇಶಗಳ 60 ಸಾವಿರ ಜನಸಂಖ್ಯೆಯ ವ್ಯಾಪ್ತಿಯನ್ನು ಒಂದು ಗ್ರಾಮೀಣ ಚಾರ್ಜ್‌, ರಕ್ಷಣಾ ಪ್ರದೇಶ ಮತ್ತಿತರ ವಿಶೇಷ ವಲಯಗಳನ್ನು ವಿಶೇಷ ಚಾರ್ಜ್‌ ಎಂದು ವಿಂಗಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.