2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 9 ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ, ಮೌಲ್ಯನಿರ್ಣಯ ಮಂಡಳಿ ಖಚಿತಪಡಿಸಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ರಿಜಿಸ್ಟ್ರೇಶನ್ ನಂಬರ್ ಬಳಸಿ ಫಲಿತಾಂಶವನ್ನು ವೀಕ್ಷಿಸಬಹುದು.
ಬೆಂಗಳೂರು(ಏ.7): ಲಕ್ಷಾಂತರ ವಿದ್ಯಾರ್ಥಿಗಳು ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್ 9ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ.
ಹೌದು, ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಹಿರಿಯ ಅಧಿಕಾರಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ exclusive ಮಾಹಿತಿ ನೀಡಿದ್ದಾರೆ. ಅಂದು ಬೆಳಿಗ್ಗೆ ಮಂಡಳಿಯು ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ಪಿಯು ಪರೀಕ್ಷೆ
ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದ್ದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಇದೀಗ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಫಲಿತಾಂಶ ನೋಡುವುದು ಹೇಗೆ?
ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ತಿಳಿಯಲು ಕಾಲೇಜಿಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಫಲಿತಾಂಶ ತಿಳಿಯಬಹುದಾಗಿದೆ. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದು.
ಹಂತ 1: ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ಕಾಣಿಸುವ ‘Karnataka 2nd PUC Result 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ರಿಜಿಸ್ಟ್ರೇಶನ್ ನಂಬರ್ (Registration Number) ಮತ್ತು ಜನ್ಮ ದಿನಾಂಕವನ್ನು (Date of Birth) ನಿಖರವಾಗಿ ನಮೂದಿಸಿ.
ಹಂತ 4: ಮಾಹಿತಿ ಭರ್ತಿ ಮಾಡಿದ ನಂತರ ‘Submit’ ಬಟನ್ ಒತ್ತಿರಿ.
ಹಂತ 5: ತಕ್ಷಣವೇ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸಲಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.
ಮೌಲ್ಯಮಾಪನ ಪ್ರಕ್ರಿಯೆಯು ಸಮರೋಪಾದಿಯಲ್ಲಿ ನಡೆದಿದ್ದು, ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ ಫಲಿತಾಂಶ ನೀಡಲು ಮಂಡಳಿ ಸಜ್ಜಾಗಿದೆ.


