ನಟ ಕಿಶೋರ್ ಪೋಸ್ಟ್ 'ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೋ, ಜೈಶ್ರೀರಾಮ್‌ನಿಂದ ಗೆಲ್ಲುವುದು ಅಷ್ಟೇ ಸುಳ್ಳು..'
ನಟ ಕಿಶೋರ್ ಪ್ರಸ್ತುತ ಚರ್ಚೆಯಲ್ಲಿ ಪನೌತಿ ಮೋದಿ ಟೀಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ್ದಾರೆ.
ಬೆಂಗಳೂರು (ನ.25): ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ತಮ್ಮ ಪಾತ್ರಗಳಿಂದಲೇ ಪ್ರಖ್ಯಾತಿಯಾಗಿರುವ ನಟ ಕಿಶೋರ್, ರಾಜಕಾರಣ ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಈ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳ ದೊಡ್ಡ ಟೀಕಾಕಾರರು ಆಗಿದ್ದಾರೆ. ಟೀಮ್ ಇಂಡಿಯಾ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತದಲ್ಲಿ ಕ್ರಿಕೆಟ್ ಅನ್ನೋದು ಧರ್ಮ, ಆದರೆ, ಇಂದು ಎಲ್ಲಾ ಧರ್ಮವನ್ನೂ ರಾಜಕಾರಣಗೊಳಿಸಲಾಗಿದೆ ಎಂದು ಟೀಕೆ ಮಾಡಿದ್ದ ಅವರು, ಅಹಮದಾಬಾದ್ ಪಿಚ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸೂಕ್ತವಾಗಿರಲಿಲ್ಲ ಎಂದು ಅಭಿಪ್ರಾಯ ಹಾಕಿದ್ದರು. ಈಗ ಹೊಸ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿ ಅವರು ಮೈದಾನಕ್ಕೆ ಬಂದಿದ್ದರಿಂದಲೇ ತಂಡ ಸೋಲು ಕಂಡಿದೆ ಎನ್ನುವ ರಾಹುಲ್ ಗಾಂಧಿ ಅವರ ಮಾತಿನ ಬಗ್ಗೆ ಪೋಸ್ಟ್ ಮಾಡಿದ್ದಾರೆ.
;ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೊ... ಜೈಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು...' ಎಂದು ಕಿಶೋರ್ ಬರೆದುಕೊಂಡಿದ್ದಾರೆ. ಇಂದಿನ ವ್ಯವಸ್ಥೆಯ ವ್ಯಂಗ್ಯವೇನೆಂದರೆ ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್‌ನಲ್ಲೂ, ಪ್ರೇಕ್ಷಕರನ್ನು ಜೈ ಶ್ರೀರಾಮ್ ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ತಂದಿಟ್ಟವರು ಪನೌತಿಯ ಪ್ರಭಾವವನ್ನೂ ಹೆಗಲಿಗೇರಿಸಿಕೊಳ್ಳಲೇಬೇಕು ಎಂದು ಟೀಕಿಸಿದ್ದಾರೆ.
ಹೊಲಸು ಧರ್ಮಾಂಧ ರಾಜಕಾರಣದಿಂದ ಮೂಢನಂಬಿಕೆಯ ಕೂಪದಲ್ಲಿ ತಳ್ಳಲ್ಪಟ್ಟು ಮೂರ್ಖರಾದ ನಾವು ತಿಳಿದುಕೊಳ್ಳಬೇಕಿರುವುದು .. ನಿಜವಾದ ಪನೌತಿ ಈ ದೇಶವನ್ನು ವಿನಾಶದಂಚಿಗೆ ತಳ್ಳುತ್ತಿರುವ ಧರ್ಮಾಂಧತೆ, ಮೂಢನಂಬಿಕೆ, ಬಡತನ, ಅಸಮಾನತೆ, ನಿರುದ್ಯೊಗ ಮತ್ತು ಭ್ರಷ್ಟಾಚಾರಗಳು ಎಂದು ಪೋಸ್ಟ್ ಮಾಡಿದ್ದಾರೆ.
ಹಿಂದೂ ಎನ್ನುತ್ತಿದ್ದವರು ಎಲ್ಲಿ ಹೋದ್ರು? ಇದ್ಯಾವುದು ಹೊಸದು ಸನಾತನ: ಕಿಶೋರ್ ಪ್ರಶ್ನೆ
ಇನ್ನು ಕಿಶೋರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸಲೀಮ್ ಅಜಾನ್, ನಿಮ್ಮ ಚಿಂತನೆಯ ಲಹರಿ ಅದ್ಬುತ ಹಾಗೂ ನಿಮ್ಮೆಲ್ಲ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಸರ್ ಎಂದು ಕಾಮೆಂಟ್ ಮಾಡಿದ್ದಾರೆ.
ಮಣಿಪುರ ಯುವತಿಯರ ಬೆತ್ತಲೆ ಪ್ರಕರಣಕ್ಕೆ ಪ್ರಧಾನಿಯ ಟೀಕಿಸಿದ ಕಿಶೋರ್, 'ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ..'