ಖೋ ಖೋ ವಿಶ್ವಕಪ್ ವಿಜೇತ ಕ್ರೀಡಾಪಟುಗಳಿಗೆ 5 ಲಕ್ಷ ರೂ. ನೀಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಇದೀಗ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಿಂದಿ ನಟಿ ಶಬಾನಾ ಅಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ, 10 ಲಕ್ಷ ರೂ. ಚೆಕ್ ನೀಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಕ್ಕೆ ಅಜ್ಮಿ ಅವರ ಕೊಡುಗೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕ್ರೀಡಾಪಟುಗಳಿಗೆ ಕಡಿಮೆ ಪ್ರೋತ್ಸಾಹ ಧನ ನೀಡಿದ್ದನ್ನೂ ಟೀಕಿಸಿದ್ದಾರೆ.
ಬೆಂಗಳೂರು (ಮಾ.11): ಖೋ ಖೋ ವಿಶ್ವಕಪ್ ಗೆದ್ದು ತವರೂರಿಗೆ ಬಂದ ಕನ್ನಡ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 5 ಲಕ್ಷ ರೂ. ಕೊಟ್ಟು ಕೈ ತೊಳೆದುಕೊಂಡರು. ಆದರೆ, ಇದೀಗ ಕನ್ನಡದಲ್ಲಿ ಒಂದು ಸಿನಿಮಾವನ್ನೂ ಮಾಡದ, ಕನ್ನಡದ ಒಂದು ಅಕ್ಷರವೂ ಗೊತ್ತಿಲ್ಲ ಮತ್ತು ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದ ಹಿಂದಿ ನಟಿ ಶಬಾನಾ ಅಜ್ಮಿಗೆ ಜೀವಮಾನದ ಸಾಧನೆ ಪ್ರಶಸ್ತಿ ಕೊಟ್ಟು 10 ಲಕ್ಷ ರೂ. ಚೆಕ್ ನೀಡಿದ್ದಕ್ಕೆ ರಾಜ್ಯದ ಜನತೆಯಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ 'ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿ ವಿಜೇತ ನಟಿ ಶಬಾನಾ ಆಜ್ಮಿ ಅವರಿಗೆ ಪ್ರಶಸ್ತಿಪತ್ರ ಮತ್ತು 10 ಲಕ್ಷದ ಚೆಕ್ ನೀಡಿ, ಗೌರವಿಸಿದೆ. ವಿಶ್ವ ವಿಖ್ಯಾತ ಕವಿ, ಗೀತರಚನೆಕಾರ ಜಾವೇದ್ ಅಖ್ತರ್ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾದು ಕೋಕಿಲ, ಸರ್ಕಾರದ ಕಾರ್ಯದರ್ಶಿ ಕಾವೇರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, 16 ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಉಪಸ್ಥಿತರಿದ್ದರು' ಎಂದು ಬರೆದುಕೊಂಡು ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಆದರೆ, ಸಿದ್ದರಾಮಯ್ಯ ಅವರ ಈ ಪೋಸ್ಟ್‌ಗೆ ರಾಜ್ಯದ ಜನತೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಖೋ ಖೋ ವಿಶ್ವಕಪ್ ಗೆದ್ದು ತಾಯ್ನಾಡಿದ ಮರಳಿದ ಕ್ರೀಡಾಪಟುಗಳಿಗೆ ಸಿಎಂ ಸಿದ್ದರಾಮಯ್ಯ ಅವರು 5 ಲಕ್ಷ ರೂ. ಕೊಟ್ಟು ಕೈ ತೊಳೆದುಕೊಂಡರು. ಆದರೆ, ಬೇರೆ ರಾಜ್ಯಗಳಲ್ಲಿ 25 ಲಕ್ಷ ರೂ.ಗಳಿಂದ 50 ಲಕ್ಷ ರೂ. ಹಣ, ಸರ್ಕಾರಿ ಉದ್ಯೋಗ ನೀಡಲಾಗಿದೆ. ಈ ಬಗ್ಗೆ ಕನ್ನಡದ ಕ್ರೀಡಾಪಟುಗಳಿಬ್ಬರು ಸರ್ಕಾರ ನೀಡಿದ ಬಿಡಿಗಾಸನ್ನು ಕೂಡ ವಾಪಸ್ ನೀಡಿ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಈ ಘಟನೆ ನಡೆದರೂ ಸಿದ್ದರಾಮಯ್ಯ ಮಾತ್ರ ಏನೂ ನಡೆದಿಲ್ಲ ಎಂಬಂತೆ ಸುಮ್ಮನಾಗಿದ್ದಾರೆ.
ಇದನ್ನೂ ಓದಿ: ಖೋ ಖೋ ಆಟಗಾರರಿಗೆ ಮಹಾರಾಷ್ಟ್ರ ₹2.5 ಕೋಟಿ, ಸರ್ಕಾರಿ ನೌಕರಿ ಕೊಟ್ಟಿದೆ; ಸಿದ್ದರಾಮಯ್ಯ ₹5 ಲಕ್ಷ ಕೊಟ್ಟು ಕೈ ತೊಳ್ಕಂಡ್ರು!
ಇದೀಗ ಸರ್ಕಾರದಿಂದ ಆಯೋಜನೆ ಮಾಡಲಾಗಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಹಿಂದಿಯ ನಟಿ ಶಬಾನಾ ಅಜ್ಮಿಗೆ ಬರೋಬ್ಬರಿ 10 ಲಕ್ಷ ರೂ. ಚೆಕ್ ಕೊಟ್ಟಿದ್ದಾರೆ. ಇದರಿಂದಾಗಿ ಟ್ವಿಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಕನ್ನಡ ಭಾಷೆ/ ಕರ್ನಾಟಕಕ್ಕೆ ಇವರ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು 'ಖೋ ಖೋ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಕೀರ್ತಿ ತಂದ ಬಾಲಕಿಗೆ 5 ಲಕ್ಷ. ಈ ನೆಲಕ್ಕೆ ಸಂಬಂಧವೇ ಇಲ್ಲದ, ಅ ಆ ಇ ಈ ಗೊತ್ತಿಲ್ಲದವರಿಗೆ 10 ಲಕ್ಷ. ಸಾಬರು ಕೇ ಸಾತ್, ಸಾಬರು ಕೇ ವಿಕಾಸ್' ಎಂದು ಟೀಕಿಸಿ ಕಾಮೆಂಟ್ ಮಾಡಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಅವರೇ, ಶಬಾನಾ ಆಜ್ಮಿ ಅವರಿಗೆ ಕರ್ನಾಟಕ ಸರ್ಕಾರದ ಜೀವನ ಸಾಧನೆ ಪ್ರಶಸ್ತಿ ನೀಡಿದ ಕಾರಣವೇನು? ಕನ್ನಡ ಚಿತ್ರರಂಗ ಅಥವಾ ಕರ್ನಾಟಕ ಸಂಸ್ಕೃತಿಗೆ ಅವರ ಪ್ರಮುಖ ಕೊಡುಗೆಗಳೇನು? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು '10 ಲಕ್ಷ ಕನ್ನಡಿಗರ ದುಡ್ಡು ಈ ದುಡ್ಡಿನ ಅವಶ್ಯಕತೆ ಇಲ್ಲದ ಯಾವುದೋ ಭಾಷಾ ಕಲಾವಿದರಿಗೆ.. ಒಂದು ಹೊತ್ತಿನ ಊಟಕ್ಕೂ ಪರದಾಡುವ ಇವರಗಿಂತ 10 ಪಟ್ಟು ಹೆಚ್ಚು ಅರ್ಹರಾದ, ಕನ್ನಡಕ್ಕಾಗಿ ಜೀವಮಾನ ದುಡಿದ ಕಲಾವಿದರಿದ್ದಾರೆ. ಅವರನ್ನ ಗುರುತಿಸಲು ಕಣ್ಣು ಕುರುಡಾಗಿದಿಯಾ ಸಿದ್ಧಣ್ಣ? ಕರ್ನಾಟಕ ತೋಟದಪ್ಪನ ಛತ್ರ ಅಲ್ಲ, ನೆನಪು ಮಾಡಿಸುತ್ತಲೇ ಇರುತ್ತೇವೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಗರು 'ಶಬಾನಾ ಅಜ್ಮಿ ಅವರ ಕನ್ನಡಕ್ಕೆ ಕೊಡುಗೆ ಸೊನ್ನೆ. ಆದರೆ, ಸರ್ಕಾರ ಮುಸ್ಲಿಂ ಜನರಿಗೆ ಖುಷ್ ಮಾಡಲಿಕ್ಕೆ ಅವರಿಗೆ ಈ ಪ್ರಶಸ್ತಿ ಕೊಟ್ಟಿರ್ಬಹದು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೀಡಿದ್ದ ನಗದು ಬಹುಮಾನ ತಿರಸ್ಕರಿಸಿದ ವಿಶ್ವಕಪ್ ವಿಜೇತ ಖೋ ಖೋ ಆಟಗಾರರು
