ಗಲಾಟೆಗೆ ಕಾರಣ ಬಹಿರಂಗ, ಕನ್ನಡಿಗರ ನೆರವಿಗಾಗಿ ಶ್ರೀಶೈಲಕ್ಕೆ ತೆರಳಿದ ಕರ್ನಾಟಕ ಪೊಲೀಸ್ರು
* ಶ್ರೀಶೈಲ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ನಡೆದ ಗಲಾಟೆ
* ದೇವರ ದರ್ಶನಕ್ಕೆ ಹೋದ ಕನ್ನಡಿಗರು ಆತಂಕ
* ಭಕ್ತರ ಆತಂಕ ದೂರು ಮಾಡಿದ ಶ್ರೀಶೈಲ ಜಗದ್ಗುರು!
* ಕನ್ನಡಿಗರ ನೆರವಿಗಾಗಿ ಶ್ರೀಶೈಲಕ್ಕೆ ತೆರಳಿದ ಕರ್ನಾಟಕ ಪೊಲೀಸರು!
ವರದಿ: ಜಗನ್ನಾಥ ಪೂಜಾರ್, ಏಷ್ಯಾ ನೆಟ್, ಸುವರ್ಣ ನ್ಯೂಸ್
ಕರ್ನೂಲ್, ಮಾ.31: ಯುಗಾದಿಯಂದು ನಡೆಯುವ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗಾಗಿ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಹಾಗೂ ಯಾದಗಿರಿ ಮತ್ತು ರಾಯಚೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಕಂಬಿ ಹೊತ್ತು, ಪಾದಯಾತ್ರೆ ಮಾಡುತ್ತಾ ಲಕ್ಷಾಂತರ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ಹೋಗಿದ್ದಾರೆ. ಯುಗಾದಿಯ ಜಾತ್ರೆವರೆಗೂ ಲಕ್ಷಾಂತರ ಭಕ್ತರು ಶ್ರೀ ಭ್ರಮಾರಂಭ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ವಾಪಸ್ ಆಗುತ್ತಾರೆ. ಆದ್ರೆ ನಿನ್ನೆ(ಬುಧವಾರ) ದೇವಸ್ಥಾನದ ಬಳಿ ಕುಡಿಯುವ ನೀರಿನ ವಿಚಾರಕ್ಕಾಗಿ ಆಂಧ್ರ ಮತ್ತು ಕರ್ನಾಟಕದ ಭಕ್ತರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಆಂಧ್ರ ಮೂಲದ ವ್ಯಾಪಾರಸ್ಥರು ಹಾಗೂ ಸ್ಥಳೀಯ ಕೆಲ ಕಿಡಿಗೇಡಿಗಳು ಕರ್ನಾಟಕದಿಂದ ಹೋಗಿರುವ ಭಕ್ತರ ಮೇಲೆ ಮನಬಂದಂತೆ ದಾಳಿ ಮಾಡಿದ್ದಾರೆ. ಅದರಲ್ಲೂ ಕರ್ನಾಟಕದ ನೂರಕ್ಕೂ ಅಧಿಕ ವಾಹನಗಳ ಗಾಜುಗಳನ್ನು ಪುಡಿಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.
10 ರೂಪಾಯಿಗಾಗಿ ನಡೆಯಿತು ದೊಡ್ಡ ಗಲಾಟೆ
ಬೀದಿ ಬದಿಯ ಹೋಟೆಲ್ ನಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಶ್ರೀಶೈಲ ಎರಡು ಬಾಟಲ್ ನೀರು ಕುಡಿದು 10 ರೂಪಾಯಿ ನೀಡಲು ಮುಂದಾಗಿದ್ದಾನೆ. ಈ ವೇಳೆ ಹೋಟೆಲ್ ಮಾಲೀಕನಿಗೂ ಹಾಗೂ ಗಾಯಗೊಂಡ ಶ್ರೀಶೈಲ ಮಧ್ಯೆ ವಾಗ್ವಾದ ನಡೆದಿದೆ. ಕೋಪಗೊಂಡ ಆಂಧ್ರ ವ್ಯಾಪಾರಿ ಶ್ರೀಶೈಲಗೆ ಬಜ್ಜಿ ತಲೆಯುವ ಕಬ್ಬಿಣದ ಜಾಲಿಯಿಂದ ಶ್ರೀಶೈಲ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದನ್ನ ನೋಡಿದ ಮತ್ತೊಬ್ಬ ಕನ್ನಡಿಗ ಗೋಪಾಲ ಎಂಬಾತ ಸಹಾಯಕ್ಕೆ ಹೋಗುತ್ತಾನೆ. ಆತನ ಮೇಲೆಯೂ ಸಹ ಹಲ್ಲೆ ಮಾಡುತ್ತಾರೆ. ಹಲ್ಲೆಗೆ ಒಳಗಾದ ಶ್ರೀಶೈಲ ತಲೆ ಹಾಗೂ ಎರಡೂ ಕೈಗಳಿಗೆ ರಕ್ತದ ಗಾಯಗಳಾಗಿವೆ. ತಲೆಗೆ ಮತ್ತು ಗಲ್ಲಕ್ಕೆ ಪಟ್ಟಿ ಹಾಕಿರುವುದರಿಂದ ಆತ ಮಾತನಾಡುವ ಸ್ಥಿತಿಯಲ್ಲಿಲ್ಲ.
Clashes At Srisailam : ಶ್ರೀಶೈಲಂನಲ್ಲಿ ಕನ್ನಡಿಗರ ಮೇಲೆ ಹಲ್ಲೆ.. ಬಿಗಿ ಬಂದೋಬಸ್ತ್!
ಕರೆಂಟ್ ಕಟ್ ಮಾಡಿ ಅಟ್ಟಹಾಸ ಮೆರೆದ ಕಿಡಿಗೇಡಿಗಳು
ಕನ್ನಡಿಗರ ಮೇಲೆ ಆಂಧ್ರದವರು ಹಲ್ಲೆ ಮಾಡಿದ ತಕ್ಷಣವೇ ಇತರರು ಸೇರಿ ಹೋಟೆಲ್ ಮಾಲೀಕನಿಗೆ ಮನಬಂದಂತೆ ಥಳಿಸಿದ್ರು. ಇದನ್ನ ಗಮನಿಸಿದ ಇತರೆ ಎಲ್ಲಾ ಆಂಧ್ರ ವ್ಯಾಪಾರಿಗಳು ಕರ್ನಾಟಕದಿಂದ ತೆರಳಿದ ಕರ್ನಾಟಕದ ನೂರಾರು ಭಕ್ತರ ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಜೊತೆಗೆ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ರು. ಇದನ್ನು ಖಂಡಿಸಿ ಕರ್ನಾಟಕದ ಭಕ್ತರು ವ್ಯಾಪಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆ ಜೋರಾಗಿರುವ ಮಾಹಿತಿ ತಿಳಿದ ಸ್ಥಳಕ್ಕೆ ಶ್ರೀಶೈಲ ಪೀಠದ ಜಗದ್ಗುರುಗಳು ಭೇಟಿ ನೀಡಿ ಗಾಯಗೊಂಡವರನ್ನ
ಆಸ್ಪತ್ರೆಗೆ ದಾಖಲು ಮಾಡಿಸಿದರು.
ಗಲಾಟೆ ಬಗ್ಗೆ ಕರ್ನೂಲ್ ಎಸ್ ಪಿ ಸ್ಪಷ್ಟನೆ
ಗಲಾಟೆ ಬಳಿಕ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎಸ್ ಪಿ ಸುಧೀರಕುಮಾರ್ ರೆಡ್ಡಿ ಶ್ರೀಶೈಲ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಶ್ರೀಶೈಲದಲ್ಲಿ ನಡೆದ ಗಲಾಟೆಯಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶ್ರೀಶೈಲನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದರು.
ಗಲಾಟೆ ಬಳಿಕ ಶ್ರೀಶೈಲದ ಜಗದ್ಗುರು ವಿಡಿಯೋ ಬಿಡುಗಡೆ
ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕರ್ನಾಟಕ ಭಕ್ತರು ಹಾಗೂ ಆಂಧ್ರಪ್ರದೇಶದ ವ್ಯಾಪಾರಿಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀಶೈಲ ಜಗದ್ಗುರುಗಳು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜಗದ್ಗುರುಗಳಾದ ಡಾ.ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಘಟನೆಯ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘‘ನಿನ್ನೆ ರಾತ್ರಿ ಕರ್ನಾಟಕದ ಓರ್ವ ಭಕ್ತ ಹಾಗೂ ಆಂಧ್ರದ ಹೋಟೆಲ್ ಮಾಲೀಕನ ನಡುವೆ ಜಗಳವಾಗಿದೆ. ಇದೇ ಜಗಳ ಎರಡು ಸಮುದಾಯಗಳ ನಡುವೆ ಹಬ್ಬಿ ಗಲಾಟೆಯಾಗಿದೆ. ಕರ್ನಾಟಕದ ವ್ಯಕ್ತಿ ಮೇಲೆ ಸ್ಥಳೀಯ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಕರ್ನಾಟಕದ ವ್ಯಕ್ತಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ’’ ಎಂದು ಶ್ರೀಗಳು ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಗಾಯಾಳು ಸಾವನ್ನಪ್ಪಿದ್ದಾನೆ ಎನ್ನುವ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀಗಳು, ‘‘ಕರ್ನಾಟಕದ ಗಾಯಾಳು ಸಾವು ಆಗಿದೆ ಎನ್ನುವ ಸುದ್ದಿ ಹರಡಿದೆ. ಇದೇ ಸುದ್ದಿ ಹರಡಿರೋ ಕಾರಣ ಇಲ್ಲಿ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಸ್ಥಿತಿ ಕೈ ಮೀರೋ ಹಂತಕ್ಕೆ ಹೋಗಿದೆ. ಈ ಕಾರಣ ನಾವೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಎಲ್ಲರಿಗೂ ಸಮಾಧಾನ ಮಾಡಿದ್ದೇವೆ. ಈ ಸುದ್ದಿ ಕರ್ನಾಟಕದಲ್ಲಿಯೂ ಹಬ್ಬಿದೆ. ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಸುದ್ದಿ ಹರಡಿದೆ. ಇದು ವಾಸ್ತವ ಸ್ಥಿತಿಯಲ್ಲಾ, ಇಲ್ಲಿ ಪರಿಸ್ಥಿತಿ ಸಹಜವಾಗಿದೆ. ನಿನ್ನೆ ನಡೆದ ಗಲಾಟೆ ಇಂದು ಹತೋಟಿಗೆ ಬಂದಿದೆ. ಕರ್ನಾಟಕದ ಭಕ್ತರೆಲ್ಲಾ ಇಲ್ಲಿ ಸುರಕ್ಷಿತವಾಗಿದ್ದಾರೆ. ಕನ್ನಡಿಗರಿಗೆ ಇಲ್ಲಿ ಯಾವುದೇ ತೊಂದರೆ, ಜೀವಭಯ ಇಲ್ಲ ಎಂದು ಶ್ರೀಗಳು ವಿಡಿಯೋದಲ್ಲಿ ತಿಳಿಸಿದ್ದಾರೆ.
ಕನ್ನಡಿಗರ ಸುರಕ್ಷತೆಗೆ ತೆರಳಿದ ಕರ್ನಾಟಕ ಪೊಲೀಸರ ತಂಡ
ಶ್ರೀಶೈಲನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯುಗಾದಿಯಂದು ನಡೆಯುವ ಜಾತ್ರೆಯಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಕನ್ನಡಿಗರ ನೆರವಿಗಾಗಿ ಕರ್ನಾಟಕ ಪೊಲೀಸರನ್ನ ಶ್ರೀಶೈಲನಲ್ಲಿ ಈಗ ನಿಯೋಜನೆ ಮಾಡಲಾಗಿದೆ. ಕರ್ನಾಟಕದ ಪೊಲೀಸರ ತಂಡವೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಮುಗಿಯುವರೆಗೂ ಶ್ರೀಶೈಲನಲ್ಲಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ.