ಬಾರ್‌ಗಳಿಗೆ ಭುವನೇಶ್ವರಿ ಚಿತ್ರ: ಕ್ರಮಕ್ಕೆ ಕಸಾಪ ಆಗ್ರಹ
ಭಾವಚಿತ್ರ ಮಾರಾಟ ವಿಷಯ ಅರಿತ ತಕ್ಷಣ ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಅಬಕಾರಿ ಆಯುಕ್ತರಿಗೆ ದೂರು ನೀಡಿದ ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು(ನ.03): ಬಾರ್ ಮತ್ತು ವೈನ್ ಸ್ಟೋರ್‌ಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಗಳನ್ನು ಅಬಕಾರಿ ಇಲಾಖೆ ಹಾಗೂ ಪರಿಷತ್ತಿನ ಹೆಸರಿನಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ, ‘ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್. ಶರ್ಮಾ ಅವರು ಚಿತ್ರಿಸಿದ ತಾಯಿ ಭುವನೇಶ್ವರಿಯ ಭಾವಚಿತ್ರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಒತ್ತಾಸೆಯಂತೆ ಮಳಿಗೆಯಲ್ಲಿ ಮಾರಾಟಕ್ಕಿಟ್ಟಿದೆ. ಜೊತೆಗೆ ಅಂತರ್ಜಾಲ ತಾಣಗಳಲ್ಲಿ ಎಲ್ಲರ ಕೈಗೆಟಕುವ ರೀತಿಯಲ್ಲಿ ಲಭ್ಯವಿದೆ. ಇದನ್ನೇ ಕೆಲ ಸಮಾಜಘಾತಕರು ಕನ್ನಡದ ಹೆಸರಿನಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಗಳನ್ನು ಬಾರ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಅಬಕಾರಿ ಇಲಾಖೆಯವರೇ ಮಾರಿದ್ದಾರೆ ಎನ್ನುವ ಮಾಹಿತಿ ಪರಿಷತ್ತಿಗೆ ಗೊತ್ತಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಭಾವಚಿತ್ರ ಮಾರಾಟ ವಿಷಯ ಅರಿತ ತಕ್ಷಣ ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಅಬಕಾರಿ ಆಯುಕ್ತರಿಗೆ ಕನ್ನಡ ಸಾಹಿತ್ಯ ಪರಿಷತ್ತು ದೂರು ನೀಡಿದ್ದು, ತಕ್ಷಣ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರ ಹಾಗೂ ಪರಿಷತ್ತಿನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಬಲ್ಲವರನ್ನೆಲ್ಲ ಕನ್ನಡಿಗ ಅಂತ ಪರಿಗಣಿಸಿ: ಕಸಾಪ
‘ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರು ಅಥವಾ ಮಾತೆ ಭುವನೇಶ್ವರಿಯನ್ನು ಅವಮಾನ ಮಾಡುವದನ್ನು ಯಾರೂ ಸಹಿಸುವುದಿಲ್ಲ. ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತು ಇಂಥ ಅಸಂಬದ್ಧ ವ್ಯಕ್ತಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ನಡೆಯಲೇಬೇಕು’ ಎಂದು ಜೋಶಿ ಒತ್ತಾಯಿಸಿದ್ದಾರೆ.