Asianet Suvarna News Asianet Suvarna News

68 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ರಾಜ್ಯ ಸರ್ಕಾರ ಘೋಷಣೆ

ಚಂದ್ರಯಾನ-3ರ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋ ಸಂಸ್ಥೆಯ ಅಧ್ಯಕ್ಷ ಎಸ್‌. ಸೋಮನಾಥನ್, ಶತಾಯುಷಿಗಳಾದ ಹುಸೇನಾಬಿ ಬುಡೆನ್‌ಸಾಬ್‌ ಸಿದ್ದಿ, ಕೆ. ರೂಪ್ಲಾನಾಯಕ್‌, ಏಷ್ಯನ್‌ ಗೇಮ್ಸ್ ಪದಕ ವಿಜೇತೆ ಅದಿತಿ ಅಶೋಕ್‌, ಪತ್ರಿಕಾ ವಿತರಕ ಜವರಪ್ಪ ಸೇರಿದಂತೆ 19 ವಿಭಾಗಗಳಲ್ಲಿ 68 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. 

Kannada Rajyotsava Award for 68 achievers State Govt Announcement gvd
Author
First Published Nov 1, 2023, 7:03 AM IST

ಬೆಂಗಳೂರು (ನ.01): ಚಂದ್ರಯಾನ-3ರ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋ ಸಂಸ್ಥೆಯ ಅಧ್ಯಕ್ಷ ಎಸ್‌. ಸೋಮನಾಥನ್, ಶತಾಯುಷಿಗಳಾದ ಹುಸೇನಾಬಿ ಬುಡೆನ್‌ಸಾಬ್‌ ಸಿದ್ದಿ, ಕೆ. ರೂಪ್ಲಾನಾಯಕ್‌, ಏಷ್ಯನ್‌ ಗೇಮ್ಸ್ ಪದಕ ವಿಜೇತೆ ಅದಿತಿ ಅಶೋಕ್‌, ಪತ್ರಿಕಾ ವಿತರಕ ಜವರಪ್ಪ ಸೇರಿದಂತೆ 19 ವಿಭಾಗಗಳಲ್ಲಿ 68 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಅಲ್ಲದೆ, ಕರ್ನಾಟಕ ಸಂಭ್ರಮ-50ರ ಅಂಗವಾಗಿ ಈ ಬಾರಿ 10 ಸಂಘ-ಸಂಸ್ಥೆಗಳಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ವಿಕಾಸಸೌಧದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು.

1,357 ಭೌತಿಕ ಅರ್ಜಿ, 26555 ನಾಮನಿರ್ದೇಶನ: ಈ ಬಾರಿಯ ಪ್ರಶಸ್ತಿಗಾಗಿ ಭೌತಿಕವಾಗಿ 1,357 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರ ಜತೆಗೆ ಸೇವಾಸಿಂಧು ಪೋರ್ಟಲ್‌ ಮೂಲಕ 2,166 ಮಂದಿಗೆ ಪ್ರಶಸ್ತಿ ನೀಡುವಂತೆ 26,555 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಪ್ರಶಸ್ತಿ ಪುರಸ್ಕೃತ ಆಯ್ಕೆ ಸಮಿತಿ ಹಾಗೂ 5 ಉಪಸಮಿತಿಯು 178 ಮಂದಿ ಸಾಧಕರನ್ನು ಆಯ್ಕೆ ಮಾಡಿತ್ತು. ಅದಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಉನ್ನತಾಧಿಕಾರದ ಸಮಿತಿಯು ಅಂತಿಮವಾಗಿ 68 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದ ಎಂದು ಅವರು ತಿಳಿಸಿದರು.

ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯೋತ್ಸವಕ್ಕೆ ಒಪ್ಪಿಗೆ ನೀಡಿ: ಹೈಕೋರ್ಟ್‌

13 ಮಹಿಳೆಯರು, ಶತಾಯುಷಿ, ಮಂಗಳಮುಖಿಗೆ ಗೌರವ: ಪ್ರಶಸ್ತಿ ಪುರಸ್ಕೃರಲ್ಲಿ 13 ಮಂದಿ ಮಹಿಳಾ ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ. ಅದರ ಜತೆಗೆ ಶತಾಯುಷಿಗಳಾದ ಹುಸೇನಾಬಿ ಬುಡೆನ್‌ಸಾಬ್‌ ಸಿದ್ದಿ (ಜಾನಪದ), ಕೆ. ರೂಪ್ಲಾನಾಯಕ್‌ (ಸಮಾಜಸೇವೆ), ಭೂತ್ಯೇರ ಕುಣಿತ ಕಲಾ ಪ್ರಕಾರದಲ್ಲಿ ಹೆಸರು ಮಾಡಿರುವ ಮಂಗಳಮುಖಿ ನರಸಪ್ಪ (ಜಾನಪದ) ಅವರನ್ನು ಗುರುತಿಸಲಾಗಿದೆ. ಅದರ ಜತೆಗೆ ಸರ್ಕಾರಿ ಶಾಲೆಗೆ 4-5 ಕೋಟಿ ರು. ಬೆಲೆಬಾಳುವ 2 ಎಕರೆ ಜಾಗವನ್ನು ದಾನವಾಗಿ ನೀಡಿದ ಹುಚ್ಚಮ್ಮ, ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿ ಗೌಡ, ಲೆಫ್ಟಿನೆಂಟ್‌ ಜನರಲ್‌ ಕೋದಂಡ ಪೂವಯ್ಯ ಕಾರ್ಯಪ್ಪ ಹಾಗೂ ಚಂದ್ರಯಾನ 3 ಮೂಲಕ ವಿಶ್ವದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಇಸ್ರೋ ಅಧ್ಯಕ್ಷ ಸೋಮನಾಥನ್‌ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ, ಪತ್ರಿಕಾ ವಿತರಕರಿಗೆ ಗೌರವ ನೀಡಲಾಗುತ್ತಿದ್ದು, ಮೈಸೂರಿನ ಪತ್ರಿಕಾ ವಿತರಕ ಜವರಪ್ಪ ಅವರನ್ನೂ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಅರ್ಜಿ ಹಾಕದವರಿಗೂ ಗೌರವ: ಅರ್ಜಿ, ಶಿಫಾರಸು ಇಲ್ಲದಿದ್ದರೂ ಸಾಧನೆಯನ್ನು ಗುರುತಿಸಿ 20ಕ್ಕೂ ಹೆಚ್ಚಿನ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಮುಖವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿಯು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಾದೇಶಿಕತೆ, ಬೆಂಗಳೂರು, ಮೈಸೂರಿಗೆ ಸಿಂಹಪಾಲು: ಪ್ರತಿ ಜಿಲ್ಲೆಯಿಂದಲೂ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಉದ್ದೇಶದಿಂದ ಎಲ್ಲ 31 ಜಿಲ್ಲೆಗಳಿಂದಲೂ ಕನಿಷ್ಠ ಒಬ್ಬರು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಆದರೆ, ಪ್ರಶಸ್ತಿ ಪುರಸ್ಕೃತರಲ್ಲಿ ಮೈಸೂರು ಜಿಲ್ಲೆಯವರಿಗೆ ಸಿಂಹಪಾಲು ದೊರೆತಿದೆ. 68 ಪುರಸ್ಕೃತರಲ್ಲಿ ಬೆಂಗಳೂರಿನ 8, ಮೈಸೂರು ಜಿಲ್ಲೆಯ 6 ಮಂದಿಯಿದ್ದಾರೆ. ಉಳಿದಂತೆ ಧಾರವಾಡ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳಿಂದ 2ರಿಂದ 4 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ವರ್ಷದ ಮಿತಿಯಲ್ಲಿ ಸಡಿಲಿಕೆ: ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ಪೂರೈಸಿದವರನ್ನು ಮಾತ್ರ ಪರಿಗಣಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಆದರೆ, ಕ್ರೀಡಾ ವಿಭಾಗ ಹಾಗೂ ವಿಜ್ಞಾನ/ತಂತ್ರಜ್ಞಾನ ವಿಭಾಗದಲ್ಲಿನ ಸಾಧಕರಿಗಾಗಿ ವಯೋಮಿತಿಯನ್ನು ಸಡಿಲಿಸಲಾಗಿದೆ.

5 ಲಕ್ಷ ನಗದು, 25 ಗ್ರಾಂ ಚಿನ್ನದ ಪದಕ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 5 ಲಕ್ಷ ರು. ನಗದು ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ.

10 ಸಂಘ-ಸಂಸ್ಥೆಗಳಿಗೂ ಪ್ರಶಸ್ತಿ: ಕರ್ನಾಟಕ ಸಂಭ್ರಮ-50ರ ಅಂಗವಾಗಿ ಈ ಬಾರಿ 10 ಸಂಘ-ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಸಲ್ಲಿಕೆಯಾದ ಅರ್ಜಿ ಹಾಗೂ ಸರ್ಕಾರದಿಂದಲೇ ಗುರುತಿಸಲ್ಪಟ್ಟ ಸಂಘ-ಸಂಸ್ಥೆಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಚಿರತೆ ಹಿಡಿಯಲು 70 ಅರಣ್ಯ ಸಿಬ್ಬಂದಿ, ಥರ್ಮಲ್‌ ಡ್ರೋನ್‌ ಕ್ಯಾಮೆರಾ ಬಳಕೆ

ಯಾವುದೇ ಒತ್ತಡಕ್ಕೆ ಮಣಿಯದೆ, ನೈಜ ಸಾಧಕರು ಹಾಗೂ ರಾಜ್ಯಕ್ಕೆ ಕೊಡುಗೆ ನೀಡಿದವರನ್ನಷ್ಟೇ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಾದೇಶಿಕ ಸಮಾನತೆ ನೀಡುವ ದೃಷ್ಟಿಯಿಂದ ಎಲ್ಲ 31 ಜಿಲ್ಲೆಗಳಿಂದಲೂ ಕನಿಷ್ಠ ಒಬ್ಬ ಸಾಧಕರನ್ನು ಆಯ್ಕೆ ಮಾಡಿ, ಪ್ರಶಸ್ತಿ ನೀಡಲಾಗುತ್ತಿದೆ.
-ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Follow Us:
Download App:
  • android
  • ios