Asianet Suvarna News Asianet Suvarna News

ಬೆಂಗಳೂರಿನಲ್ಲಿ ಚಿರತೆ ಹಿಡಿಯಲು 70 ಅರಣ್ಯ ಸಿಬ್ಬಂದಿ, ಥರ್ಮಲ್‌ ಡ್ರೋನ್‌ ಕ್ಯಾಮೆರಾ ಬಳಕೆ

ಬೊಮ್ಮನಹಳ್ಳಿ ಸಮೀಪದ ಕೂಡ್ಲುಗೇಟ್‌ನಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಅರಣ್ಯ ಇಲಾಖೆ ಮಂಗಳವಾರವೂ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಸುಳಿವು ದೊರೆತಿಲ್ಲ.

70 Forest Guards use of thermal drone camera to catch leopard gvd
Author
First Published Nov 1, 2023, 5:23 AM IST

ಬೆಂಗಳೂರು (ನ.01): ಬೊಮ್ಮನಹಳ್ಳಿ ಸಮೀಪದ ಕೂಡ್ಲುಗೇಟ್‌ನಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಅರಣ್ಯ ಇಲಾಖೆ ಮಂಗಳವಾರವೂ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಸುಳಿವು ದೊರೆತಿಲ್ಲ. ಲೆಪರ್ಡ್ಸ್ ಟಾಸ್ಕ್ ಫೋರ್ಸ್ ತಂಡ ಮತ್ತು ಥರ್ಮಲ್ ಡ್ರೋನ್ ಟೀಂ ಚಿರತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಆದರೆ ಎರಡು ದಿನವಾದರೂ ಚಿರತೆ ಪತ್ತೆಯಾಗದೆ ಇರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.

ಬೊಮ್ಮನಹಳ್ಳಿ ಸಮೀಪದ ಕೂಡ್ಲು ಹೊಸಪಾಳ್ಯ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಓಡಾಟ ನಡೆಸಿದ್ದು, ಸೋಮವಾರದಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಎಲ್ಲೂ ಚಿರತೆ ಕಂಡುಬಂದಿಲ್ಲ. ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಲೇಔಟ್‌ನ ಪಾಳು ಬಿದ್ದ ಬೃಹತ್ ಕಟ್ಟಡವೊಂದರಲ್ಲಿ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿದರು. ಆದರೆ ಚಿರತೆ ಈ ಕಟ್ಟಡದಲ್ಲಿ ಇಲ್ಲ ಎಂದು ಖಚಿತವಾದ ನಂತರ, ಅಲ್ಲಿ ಬೋನ್‌ ಅಳವಡಿಸಿ ಬೇರೆಡೆ ಕಾರ್ಯಾಚರಣೆ ವರ್ಗಾಯಿಸಿದರು. ಮಂಗಳವಾರವೂ ಕಾರ್ಯಾಚರಣೆ ವಿಫಲವಾದ ಕಾರಣ, ಅರಣ್ಯ ಇಲಾಖೆಯಿಂದ ಬುಧವಾರ ಕಾರ್ಯಾಚರಣೆ ಮುಂದುವರಿಸುವ ಸಾಧ್ಯತೆಯಿದೆ.

ದೊಣ್ಣೆ ಹಿಡಿದು ಓಡಾಟ: ಚಿರತೆ ಸೆರೆ ಸಿಗದ ಹಿನ್ನೆಲೆಯಲ್ಲಿ ಜನರಲ್ಲಿ ಭಯ ಮನೆಮಾಡಿದ್ದು, ಅದಕ್ಕಾಗಿ ಜನರು ಬಡಿಗೆ ಹಿಡಿದುಕೊಂಡು ಓಡಾಡುವಂತಾಗಿದೆ. ಶಾಲೆ-ಕಾಲೇಜು ವಿದ್ಯಾರ್ಥಿಗಳು, ರಾತ್ರಿ ಪಾಳಿ ಕೆಲಸ ಮಾಡುವವರಲ್ಲಿ ಭಯ ಹೆಚ್ಚುವಂತಾಗಿದೆ. ಅರಣ್ಯ ಇಲಾಖೆಯಿಂದ ಐದಕ್ಕೂ ಹೆಚ್ಚಿನ ಕಡೆ ಬೋನುಗಳನ್ನು ಇಡಲಾಗಿದ್ದರೂ, ಚಿರತೆ ಸೆರೆ ಸಿಕ್ಕಿಲ್ಲ. ಇದು ಜನರಲ್ಲಿನ ಆತಂಕ ಹೆಚ್ಚಿಸುವಂತಾಗಿದೆ.

ರಾಮನಗರ ಜಿಲ್ಲೆ ಮರುನಾಮಕರಣ ನನಗೆ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ

ಅತ್ಯಾಧುನಿಕ ತಂತ್ರಜ್ಞಾನ ಬಳಕೆ: ಕೂಡ್ಲುಗೇಟ್‌ ಬಳಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಥರ್ಮಲ್‌ ಇಮೇಜ್‌ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಈಶ್ವರ್‌ ಖಂಡ್ರೆ ತಿಳಿಸಿದರು. ಚಿರತೆ ಸೆರೆ ಹಿಡಿಯಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಚಿರತೆ ಓಡಾಡಿರುವ ಕಡೆಗಳಲ್ಲಿ ಬೋನುಗಳನ್ನು ಇಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಚಿರತೆ ಹಿಡಿಯಲು ಮೈಸೂರಿನಿಂದ ತಂಡವನ್ನು ಕರೆಸಲಾಗಿದೆ. ಸಿಸಿಎಫ್, ಡಿಸಿಎಫ್ ನೇತೃತ್ವದ 70 ಜನರ ತಂಡ ಚಿರತೆ ಸೆರೆಗೆ ಪ್ರಯತ್ನಿಸುತ್ತಿದೆ. ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿದು ಕಾಡಿಗೆ ಮರಳಿಸಲಾಗುವುದು ಎಂದರು.

Follow Us:
Download App:
  • android
  • ios