ಬೆಂಗಳೂರು(ಆ.26):  ಇತ್ತೀಚೆಗೆ ನಡೆದಿದ್ದ ಪುಲಿಕೇಶಿ ನಗರದ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿ ನಗರ ಆಯುಕ್ತ ಕಮಲ್‌ ಪಂತ್‌ ಆದೇಶಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಬಗ್ಗೆ ಶಾಸಕರ ಸೋದರ ಸಂಬಂಧಿ ನವೀನ್‌ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ ವಿರೋಧಿಸಿ ಆ.11ರಂದು ಮಂಗಳವಾರ ರಾತ್ರಿ ನಡೆದ ಗಲಭೆ ವೇಳೆ ಅಂದು ಕಾವಲ್‌ ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸಮೂರ್ತಿ ಮನೆ ಹಾಗೂ ಕಚೇರಿಗಳಿಗೆ ಬೆಂಕಿ ಹಾಕಿ ದುಷ್ಕರ್ಮಿಗಳು ಸುಟ್ಟು ಹಾಕಿದ್ದರು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.

ತಮ್ಮ ಮನೆ ಮೇಲೆ ನಡೆದ ದಾಳಿಯಲ್ಲಿ ಸುಮಾರು 3 ಕೋಟಿ ನಷ್ಟವಾಗಿದೆ ಎಂದು ಪೊಲೀಸರಿಗೆ ಶಾಸಕರು ದೂರು ಕೊಟ್ಟಿದ್ದರು. ಅಲ್ಲದೆ, ದಾಳಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆಯುಕ್ತ ಕಮಲ್‌ ಪಂತ್‌ ಅವರನ್ನು ಭೇಟಿಯಾಗಿ ಶಾಸಕರು ಮನವಿ ಸಲ್ಲಿಸಿದ್ದರು.

ಬೆಂಗ್ಳೂರು ಗಲಭೆ: ಸಂಪತ್‌ ರಾಜ್, ಜಾಕೀರ್‌ಗೆ ಸಿಸಿಬಿ ಉರುಳು ಬಿಗಿ?

70 ಎಫ್‌ಐಆರ್‌ಗಳು:

ಇದುವರೆಗೆ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಸಂಬಂಧ 70 ಎಫ್‌ಐಆರ್‌ಗಳು ದಾಖಲಾಗಿವೆ. ಈ ಪೈಕಿ ಗುಂಡಿನ ದಾಳಿ ಹಾಗೂ ಶಾಸಕರ ಮನೆ ಮೇಲೆ ದಾಳಿ ಸಂಬಂಧ ಮೂರು ಎಫ್‌ಐಆರ್‌ಗಳನ್ನು ಸಿಸಿಬಿ ತನಿಖೆಗೆ ವರ್ಗಾವಣೆಯಾಗಿವೆ. ಇನ್ನುಳಿದ ಎಫ್‌ಐಆರ್‌ಗಳ ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಪೂರ್ವ) ಎಸ್‌.ಮುರುಗನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಗಲಾಟೆ ಬಗ್ಗೆ ಇನ್ನು ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಇನ್ನೊಂದೆಡೆ ಗಲಭೆಯಲ್ಲಿ ಉಂಟಾಗಿರುವ ನಷ್ಟದ ಕುರಿತು ಲೆಕ್ಕಪರಿಶೋಧಕರಿಂದ ಪರಿಶೀಲನೆ ಪ್ರಗತಿಯಲ್ಲಿದ್ದು, ಕೆಲವು ದಿನಗಳಲ್ಲಿ ಅಧಿಕೃತ ವರದಿ ಬರಲಿದೆ ಎಂದು ಹೆಚ್ಚುವರಿ ಆಯುಕ್ತರು ಹೇಳಿದ್ದಾರೆ.

150ಕ್ಕೂ ಹೆಚ್ಚು ಮೊಬೈಲ್‌ ಸ್ವಿಚ್‌ಆಫ್‌:

ಗಲಭೆ ನಂತರ ತಲೆಮರೆಸಿಕೊಂಡಿರುವ ದೊಂಬಿಕೋರರ ಪತ್ತೆಗೆ ಪೂರ್ವ ವಿಭಾಗ ಹಾಗೂ ಸಿಸಿಬಿ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕೆಲವರು ನಗರ ತೊರೆದು ಹೊರಗಡೆ ಆಶ್ರಯ ಪಡೆದಿದ್ದು, ಸುಮಾರು 150ಕ್ಕೂ ಮಂದಿ ಮೊಬೈಲ್‌ಗಳು ಸ್ವಿಚ್‌ಆಫ್‌ ಆಗಿವೆ ಎಂದು ಮೂಲಗಳು ಹೇಳಿವೆ.

ಸಂಪತ್‌ ಆಪ್ತ ಜೈಲಿಗೆ

ಗಲಾಭೆ ಪ್ರಕರಣದಲ್ಲಿ ಬಂಧಿತನಾಗಿದ್ದ ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಆಪ್ತ ಸಹಾಯಕ ಅರುಣ್‌ನನ್ನು ವಿಚಾರಣೆ ಮುಗಿಸಿದ ಸಿಸಿಬಿ, ಮಂಗಳವಾರ ಆತನನ್ನು ಪರಪ್ಪನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದೆ.
ಗಲಾಟೆ ಮುನ್ನ ಹಾಗೂ ನಂತರ ಎಸ್‌ಡಿಪಿಐ ಮುಖಂಡರ ಜತೆ ಆತ ನಿರಂತರ ಸಂಪರ್ಕದಲ್ಲಿದ್ದ ಸಂಗತಿ ತನಿಖೆಯಲ್ಲಿ ಬೆಳಕಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗಲಭೆಗೆ ಸಂಚು ರೂಪಿಸಿದ ಆರೋಪದಡಿ ಅರುಣ್‌ನನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ.19ರಂದು ಅರುಣ್‌ನನ್ನು ಬಂಧಿಸಿದ ಸಿಸಿಬಿ, ಆರು ದಿನಗಳಿಂದ ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿತ್ತು.