ಜಿಐ ಟ್ಯಾಗ್ ಮಾನ್ಯತೆ ಪಡೆದಿರುವ ಕಲಬುರಗಿಯ ಪ್ರೀಮಿಯಂ ತೊಗರಿ ಬೇಳೆಯನ್ನು ಇದೇ ಮೊದಲ ಬಾರಿಗೆ ಮಾಲ್ಡೀವ್ಸ್‌ಗೆ ಯಶಸ್ವಿಯಾಗಿ ರಫ್ತು ಮಾಡಲಾಗಿದೆ. ಇದರಿಂದ ರೈತರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 30ರಷ್ಟು ಹೆಚ್ಚಿನ ಬೆಲೆ ಸಿಗುತ್ತಿದೆ. ವಿಶಿಷ್ಟ ರುಚಿ ಮತ್ತು ಪೌಷ್ಟಿಕಾಂಶ ಹೊಂದಿರುವ ಈ ತೊಗರಿಯು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ವರದಿ: ಶೇಷಮೂರ್ತಿ ಅವಧಾನಿ
ಕಲಬುರಗಿ: ತೊಗರಿ ಕಣಜ ಕಲಬುರಗಿಯ ಭೌಗೋಳಿಕ ಸೂಚಕ (ಜಿಯೋಗ್ರಾಫಿಕಲ್ ಇಂಡೆಕ್ಸ್- ಜಿಐ ) ಟ್ಯಾಗ್ ಹೊಂದಿರುವ 1 ಮೆಟ್ರಿಕ್ ಟನ್ ಪ್ರೀಮಿಯಂ ತೊಗರಿ ಬೇಳೆಯನ್ನು ಮಾಲ್ಡೀವ್ಸ್ ಗೆ ಯಶಸ್ವಿಯಾಗಿ ರಫ್ತು ಮಾಡಲಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಕಲಬುರಗಿಯ ತೊಗರಿ ಬೇಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಮಾರುಕಟ್ಟೆಯೊಂದರ ಅವಕಾಶ ತೆರೆದುಕೊಂಡಂತಾಗಿದೆ.
ಭಾರತೀಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಭೀಮಾ ಪಲ್ಸ್ ಬ್ರ್ಯಾಂಡ್ ಮೂಲಕ ಕಲಬುರಗಿ ತೊಗರಿ ಬೇಳೆಯ ಈ ಐತಿಹಾಸಿಕ ರಫ್ತು ಪ್ರಕ್ರಿಯೆ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ ದೇಶದ ಗಮನ ಸೆಳೆದಿದ್ದಾರೆ.
ಸಚಿವ ಗೋಯಲ್ ಅವರ ಸಾಮಾಜಿಕ ಜಾಲತಾಣದಲ್ಲಿನ ಈ ಸಂದೇಶ ತೊಗರಿ ಕಣಜ ಕಲಬುರಗಿಯಲ್ಲಿರುವ ತೊಗರಿ ರೈತ ಸಮೂಹದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ.
ಕಲಬುರಗಿಯ ಜಿ.ಐ. ಟ್ಯಾಗ್ ಮಾನ್ಯತೆ ಪಡೆದ ಪ್ರೀಮಿಯಂ ತೊಗರಿ ಬೇಳೆಯನ್ನು ಮಾಲ್ಡೀವ್ಸ್ ಗೆ ರಫ್ತು ಮಾಡುವ ಮೂಲಕ ಇದೇ ಮೊದಲ ಬಾರಿಗೆ ತಮ್ಮೂರಿನ ಬೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಚಯಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕ್ರಮವನ್ನು ರೈತರು ಸ್ವಾಗತಿಸಿದ್ದಾರೆ.
ಸಚಿವ ಪಿಯೂಷ್ ಗೋಯಲ್ ಟ್ವೀಟ್ ಸಂದೇಶ:
ಕಲಬುರಗಿಯ ಜಿ.ಐ. ಟ್ಯಾಗ್ ಹೊಂದಿರುವ 1 ಮೆಟ್ರಿಕ್ ಟನ್ ಪ್ರೀಮಿಯಂ ತೊಗರಿ ಬೇಳೆಯನ್ನು ಮಾಲ್ಡೀವ್ಸ್‌ಗೆ ಯಶಸ್ವಿಯಾಗಿ ರಫ್ತು ಮಾಡಲಾಗಿದೆ. ಪ್ರಾದೇಶಿಕ ಮತ್ತು ಜಿ.ಐ. ಟ್ಯಾಗ್ ಹೊಂದಿರುವ ಭಾರತೀಯ ಕೃಷಿ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಜೋಡಿಸುವಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ಸ್ಥಳೀಯ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ರೈತರು ತಮ್ಮ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇಕಡಾ 30ಕ್ಕಿಂತ ಹೆಚ್ಚಿನ ಬೆಲೆಯನ್ನು ಪಡೆಯುತ್ತಿದ್ದಾರೆ. ಭಾರತೀಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಈ ರಫ್ತು ಪ್ರಕ್ರಿಯೆಯನ್ನು ಸುಗಮಗೊಳಿಸಿದೆ.
ಕಲಬುರಗಿ ತೂರ್‌ದಾಲ್ ಗುಣವಿಶೇಷಗಳು:
ಕಲಬುರಗಿ ತೊಗರಿ ಬೇಳೆಯು ತನ್ನ ವಿಶಿಷ್ಟ ಗುಣಗಳು, ಪೌಷ್ಟಿಕಾಂಶ ಮತ್ತು ಐತಿಹಾಸಿಕ ಹಿನ್ನೆಲೆಯಿಂದಾಗಿ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಉತ್ತರ ಕರ್ನಾಟಕದ "ಚಿನ್ನ" ಎಂದೇ ಕರೆಯಲಾಗುತ್ತದೆ.
ಭೌಗೋಳಿಕ ಸೂಚಕ ಮಾನ್ಯತೆ:
ಕಲಬುರಗಿ ತೊಗರಿ ಬೇಳೆಯ ವಿಶಿಷ್ಟ ಗುಣಮಟ್ಟ ಮತ್ತು ರುಚಿಯನ್ನು ಗುರುತಿಸಿ ಭಾರತ ಸರ್ಕಾರವು 2019ರಲ್ಲಿ ಇದಕ್ಕೆ ಭೌಗೋಳಿಕ ಸೂಚಕ ಟ್ಯಾಗ್ ನೀಡಿದೆ. ಇದು ಈ ಪ್ರಾದೇಶಿಕ ಬೆಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನು ರಕ್ಷಣೆ ಮತ್ತು ಮಾರುಕಟ್ಟೆ ಮೌಲ್ಯವನ್ನು ಒದಗಿಸುತ್ತದೆ. ಭೀಮಾ, ಅಮರ್ಜಾ, ಬೆಣ್ಣೆತೊರೆ, ಕಾಗಿಣಾ, ಕಮಲಾವತಿ, ಗಂಡೋರಿ, ಮುಲ್ಲಾಮಾರಿಯ ನದಿ ಪಾತ್ರದ ಕಪ್ಪು, ಕೆಂಪು ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅಂಶಗಳು ಹೇರಳ. ಇಲ್ಲಿನ ಬಿಸಿ ಹಾಗೂ ಒಣ ಹವಾಮಾನವು ಈ ಬೇಳೆಗೆ ಬೇರೆಲ್ಲೂ ಸಿಗದ ಅದ್ಭುತ ರುಚಿ ಮತ್ತು ವಿಶಿಷ್ಟ ಪರಿಮಳ ನೀಡುತ್ತದೆ. ಅಡುಗೆ ಮಾಡುವಾಗ ಅತ್ಯಂತ ಬೇಗನೆ ಬೇಯುತ್ತದೆ. ದೀರ್ಘಕಾಲದವರೆಗೆ ಕೆಡದಂತೆ ತನ್ನ ನೈಸರ್ಗಿಕ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ.
ಪೌಷ್ಟಿಕಾಂಶದ ಗಣಿ:
ಇದು ಸಸ್ಯಾಹಾರಿಗಳಿಗೆ ಅತ್ಯುತ್ತಮವಾದ ಪ್ರೋಟೀನ್ ಮೂಲ. ಇದರೊಂದಿಗೆ ಕಾರ್ಬೋಹೈಡ್ರೇಟ್‌ಗಳು, ನಾರು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೆಗ್ನೀಸಿಯಮ್ ಅಂಶಗಳು ಇದರಲ್ಲಿ ಅಧಿಕವಾಗಿವೆ. ಕಲಬುರಗಿ ತೊಗರಿಗೆ ಜಿ.ಐ.ಟ್ಯಾಗ್ ಸಿಕ್ಕಿರುವುದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಳೀಯ ಮಾರುಕಟ್ಟೆಗಿಂತ ಶೇಕಡಾ 30ಕ್ಕೂ ಹೆಚ್ಚಿನ ಬೆಲೆ ರೈತರಿಗೆ ದೊರೆಯುತ್ತದೆ.
ರಾಜ್ಯದಲ್ಲಿ ಹೆಚ್ಚು ತೊಗರಿಬೆಳೆಯುವ ಜಿಲ್ಲೆ ಕಲಬುರಗಿಕರ್ನಾಟಕದಲ್ಲಿ ಪ್ರತಿ ವರ್ಷ ಒಟ್ಟು ಸುಮಾರು 12 ರಿಂದ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತದೆ. ರಾಜ್ಯದ ತೊಗರಿ ಬೇಸಾಯದ ಒಟ್ಟು ಪ್ರದೇಶದಲ್ಲಿ ಕಲಬುರಗಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 4.50 ಲಕ್ಷ ಹೆಕ್ಟರ್‌ನಿಂದ 5. 55 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗುತ್ತದೆ. ಇದು ಇಡೀ ಕರ್ನಾಟಕದ ಒಟ್ಟು ತೊಗರಿ ಕೃಷಿ ಪ್ರದೇಶದ ಶೇಕಡಾ 45ಕ್ಕೂ ಹೆಚ್ಚು ಭಾಗವಾಗಿದೆ. ಹೀಗಾಗಿ ಕರ್ನಾಟಕದ ಒಟ್ಟು ತೊಗರಿ ಉತ್ಪಾದನೆಯ ಶೇಕಡಾ 60ರಷ್ಟು ಭಾಗ ಕೇವಲ ಕಲಬುರಗಿ ಜಿಲ್ಲೆಯಿಂದಲೇ ಪೂರೈಕೆಯಾಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಸರಾಸರಿ ವರ್ಷಕ್ಕೆ 4 ರಿಂದ 5 ಲಕ್ಷ ಮೆಟ್ರಿಕ್ ಟನ್ ತೊಗರಿ ಉತ್ಪಾದನೆಯಾಗುತ್ತದೆ.


