ದೇಶದಲ್ಲಿ ವಿಧ್ವ*ಸಕ ಕೃತ್ಯ ಎಸಗಲು ಹಾಗೂ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರ ಹ೧ತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉ ಗ್ರರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಬ್ಬೀರ್ ಮತ್ತು ಸಲಾಮಿನ್ ಎಂದು ಗುರುತಿಸಲಾಗಿದೆ. ಟೆಲಿಗ್ರಾಮ್ ಗ್ರೂಪ್ ನಲ್ಲಿ ಏನಿದೆ?

ಚಿಕ್ಕಬಳ್ಳಾಪುರ/ಹಾಸನ (ಸೆ.26): ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಭಾರೀ ಸಂಚು ರೂಪಿಸುತ್ತಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಶಾಸಕ ಬಸವರಾಜ ಪಾಟೀಲ್ ಯತ್ನಾಳ್‌, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹ೧ತ್ಯೆಗೆ ಯೋಜಿಸಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಟೆಲಿಗ್ರಾಮ್ ಗ್ರೂಪ್ ರಚಿಸಿ ಕೃತ್ಯಕ್ಕೆ ಪ್ಲಾನ್

ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಶಬ್ಬೀರ್‌ ಹಾಗೂ ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ರಸ್ತೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕ ಸಲಾಮಿನ್‌ ಬಂಧಿತರು. ಟೆಲಿಗ್ರಾಂ ಆ್ಯಪ್‌ನಲ್ಲಿ ಗ್ರೂಪ್‌ವೊಂದನ್ನು ರಚಿಸಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಕುರಿತು ಶಬ್ಬೀರ್‌ ಚರ್ಚೆ ನಡೆಸುತ್ತಿದ್ದ. ದೇಶದೊಳಗೆ ದಾಳಿ ನಡೆಸುವ ಹಾಗೂ ಅದಕ್ಕಾಗಿ ಹಣ ಸಂಗ್ರಹಿಸುವ ಕುರಿತಂತೆ ಗ್ರೂಪ್‌ನಲ್ಲಿ ಪ್ರತಿದಿನ ಚರ್ಚೆ ನಡೆಯುತ್ತಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶ್ರೀಮಂತರ ಅಪಹರಿಸಿ ಉಗ್ರವಾದಕ್ಕೆ ಹಣ ಹೊಂದಿಸಲು ಸ್ಕೆಚ್

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶ್ರೀಮಂತರನ್ನು ಅಪಹರಿಸಿ, ಹಣ ಸಂಗ್ರಹಿಸಿ, ಆ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ದೇಶದಲ್ಲಿ ಭಯೋತ್ಪಾದನೆ ಮೂಲಕ ಅರಾಜಕತೆ ಸೃಷ್ಟಿ ಮಾಡಬೇಕು ಎಂಬ ಬಗ್ಗೆ ಗ್ರೂಪ್‌ನಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಅಲ್ಲದೆ, ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಯತ್ನಾಳ್‌, ಸಿ.ಟಿ.ರವಿ, ಪ್ರತಾಪ್ ಸಿಂಹ ಮತ್ತಿತರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಟೆಲಿಗ್ರಾಂ ಗ್ರೂಪ್‌ನಲ್ಲಿ ಚರ್ಚೆ ನಡೆದಿತ್ತು. ದೇಶದ ವಿವಿಧ ಭಾಗಗಳಲ್ಲಿನ ಹಲವು ಮಂದಿ ಈ ಗ್ರೂಪ್‌ನ ಸದಸ್ಯರಾಗಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ಸಂಚಿನ ಮಾಸ್ಟರ್‌ ಮೈಂಡ್‌ ಶಬ್ಬೀರ್‌ ಸಿಕ್ಕಿ ಬಿದ್ದಿದ್ದು ಹೇಗೆ?:

ಈ ಸಂಚಿನ ಮಾಸ್ಟರ್‌ ಮೈಂಡ್‌ ಶಬ್ಬೀರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಉಗ್ರರ ಪೋಸ್ಟ್‌ಗಳಿಗೆ ಲೈಕ್‌ ಮತ್ತು ಕಾಮೆಂಟ್‌ ಮಾಡಿ ಬೆಂಬಲಿಸುತ್ತಿದ್ದ. ಇದರಿಂದ ಅನುಮಾನಗೊಂಡಿದ್ದ ಗುಪ್ತಚರ ಇಲಾಖೆ, ಶಬ್ಬೀರ್‌ನ ಇನ್‌ಸ್ಟಾಗ್ರಾಮ್‌ ಐಡಿ ಫಾಲೋ ಮಾಡಿ, ಸದ್ದಿಲ್ಲದೆ ತನಿಖೆ ನಡೆಸಲು ಶುರು ಮಾಡಿತ್ತು. ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿಯನ್ನು ಕೂಡ ನೀಡಲಾಗಿತ್ತು. ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಶಬ್ಬೀರ್‌ ಬಂಧನಕ್ಕೆ ಪೊಲೀಸರು ಪ್ಲ್ಯಾನ್‌ ಮಾಡಿಕೊಂಡಿದ್ದರು. ಅದರಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಶಬ್ಬೀರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದರು. ಆತನ ಮೊಬೈಲ್‌ ಅನ್ನು ವಶಕ್ಕೆ ಪಡೆದು ಆತನ ಇನ್‌ಸ್ಟಾಗ್ರಾಮ್‌, ಟೆಲಿಗ್ರಾಂ ಆ್ಯಪ್‌ಗಳನ್ನು ಪರಿಶೀಲಿಸಿದಾಗ ಆತನ ಭಯೋತ್ಪಾದಕ ಸಂಚು ಬಹಿರಂಗಗೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 113 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಇನ್‌ಸ್ಟಾಗ್ರಾಮ್‌, ಟೆಲಿಗ್ರಾಂ ಗ್ರೂಪ್‌ನಲ್ಲಿನ ಚರ್ಚೆಗಳು, ಸದಸ್ಯರ ಸಂಪರ್ಕ ಹಾಗೂ ಸಂಚಿನ ಹಿಂದೆ ಇನ್ನೂ ಯಾರ್‍ಯಾರು ಇದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ಪೋಸ್ಟ್‌ ಶೇರ್‌ ಮಾಡುತ್ತಿದ್ದ ಸಲಾಮಿನ್‌:

ಶಬ್ಬೀರ್‌ನ ವಾಟ್ಸಾಪ್‌ ಗ್ರೂಪ್‌ನಲ್ಲಿ ಸಲಾಮಿನ್‌ ಹೆಸರು ಕೂಡ ಇತ್ತು. ಶಬ್ಬೀರ್‌ ಹಾಕುತ್ತಿದ್ದ ಪೋಸ್ಟ್‌ಗಳನ್ನು ಸಲಾಮಿನ್‌ ಇತರರಿಗೆ ಶೇರ್‌ ಮಾಡುತ್ತಿದ್ದ. ಹೀಗಾಗಿ, ಈತನ ಮೇಲೂ ಪೊಲೀಸರು ನಿಗಾ ಇಟ್ಟಿದ್ದರು.

ಬಿಹಾರ ಮೂಲದ ಸಲಾಮಿನ್‌ ಹಾಗೂ ಆತನ ಅಣ್ಣ, ರಸ್ತೆ ಕಾಮಗಾರಿಗಳಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಗುತ್ತಿಗೆದಾರರೊಬ್ಬರ ಬಳಿ ಹಾವೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲಸ ಮುಗಿದಿದ್ದು, ಅದೇ ಗುತ್ತಿಗೆದಾರರು ಅರಕಲಗೂಡಿನಲ್ಲಿ ರಸ್ತೆ ಕಾಮಗಾರಿಯ ಕಾಂಟ್ರಾಕ್ಟ್‌ ಹಿಡಿದಿದ್ದ ಕಾರಣ ಇಲ್ಲಿಗೆ ಕರೆ ತಂದಿದ್ದರು. ಸಲಾಮಿನ್‌ ಹಾಗೂ ಆತನ ಅಣ್ಣ ಎರಡು ದಿನಗಳ ಹಿಂದಷ್ಟೇ ಅರಕಲಗೂಡಿಗೆ ಬಂದಿದ್ದರು. ಶುಕ್ರವಾರ ಅರಕಲಗೂಡು ಪಟ್ಟಣದ ಸಂತೆಮರೂರು ವೃತ್ತದಲ್ಲಿ ಚಹ ಕುಡಿಯುತ್ತಿದ್ದಾಗ, ಚಿಕ್ಕಬಳ್ಳಾಪುರ ಪೊಲೀಸರು ಆತನನ್ನು ಬಂಧಿಸಿ, ಕರೆದೊಯ್ದಿದ್ದಾರೆ.

ಬಂಧಿತ ಉಗ್ರರು

1. ಶಬ್ಬೀರ್‌

ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ. ಟೆಲಿಗ್ರಾಂ ಆ್ಯಪ್‌ನಲ್ಲಿ ಗ್ರೂಪ್‌ ರಚಿಸಿ ವಿಧ್ವಂಸಕ ಕೃತ್ಯದ ಬಗ್ಗೆ ಚರ್ಚಿಸುತ್ತಿದ್ದ. ದೇಶದಲ್ಲಿ ದಾಳಿ ನಡೆಸಲು, ಹಣ ಸಂಗ್ರಹಿಸುವ ಕುರಿತು ಸಂವಾದ ನಡೆಸುತ್ತಿದ್ದ. ದೇಶ, ರಾಜ್ಯದ ರಾಜಕಾರಣಿಗಳ ಹತ್ಯೆಗೂ ಚರ್ಚೆ. ಹಲವು ಮಂದಿ ಈತನ ಗ್ರೂಪ್‌ಗೆ ಸದಸ್ಯರು

2. ಸಲಾಮಿನ್‌

ಬಿಹಾರ ಮೂಲದವನು. ಹಾವೇರಿಯಲ್ಲಿ ರಸ್ತೆಗೆ ಟಾರ್‌ ಹಾಕುವ ಕೆಲಸ ಮಾಡುತ್ತಿದ್ದ. ಅಲ್ಲಿ ಕೆಲಸ ಮುಗಿದ ಕಾರಣ ಹಾಸನ ಜಿಲ್ಲೆಯ ಅರಕಲಗೂಡಿಗೆ 2 ದಿನಗಳ ಹಿಂದಷ್ಟೇ ಬಂದಿದ್ದ. ಶಬ್ಬೀರ್‌ ಹಾಕುತ್ತಿದ್ದ ಪೋಸ್ಟ್‌ಗಳನ್ನು ಇತರರಿಗೆ ಶೇರ್‌ ಮಾಡುತ್ತಿದ್ದ

ಸಿಕ್ಕಿಬಿದ್ದಿದ್ದು ಹೇಗೆ?

ಉಗ್ರರ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಗೆ ಶಬ್ಬೀರ್‌ ಲೈಕ್, ಕಾಮೆಂಟ್‌ ಮಾಡುತ್ತಿದ್ದ. ಇದು ಗುಪ್ತಚರ ಇಲಾಖೆ ಗಮನಕ್ಕೆ ಬಂದಿತ್ತು. ಈ ವಿಷಯವನ್ನು ಚಿಕ್ಕಬಳ್ಳಾಪುರ ಪೊಲೀಸರಿಗೆ ಇಲಾಖೆ ಕೊಟ್ಟಿತ್ತು. ಆ ಮಾಹಿತಿ ಮೇರೆಗೆ ಶಬ್ಬೀರ್‌ನನ್ನು ವಿಚಾರಣೆ ನಡೆಸಿದಾಗ ಸ್ಫೋಟಕ ಸಂಗತಿ ಪತ್ತೆ

ಲವ್‌ ಜಿಹಾದ್‌ ಬಗ್ಗೆ ಮಾತಾಡಿದ್ದಕ್ಕೆ ಗುರಿ

ಭಯೋತ್ಪಾದನೆ, ಭಯೋತ್ಪಾದಕರು ಮತ್ತು ಲವ್ ಜಿಹಾದ್ ವಿರುದ್ಧ ನಾನು ಮಾತನಾಡುತ್ತೇನೆ. ಅದಕ್ಕಾಗಿಯೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಾವು ಬರುತ್ತದೆ ಎಂದು ಹೆದರಿ ಓಡಿ ಹೋಗುವ ಹೇಡಿ ನಾನಲ್ಲ.

- ಸಿ.ಟಿ. ರವಿ, ಮೇಲ್ಮನೆ ಸದಸ್ಯ

ಯತ್ನಾಳ್‌, ರವಿ, ಪ್ರತಾಪ್‌ ಸಿಂಹಗೆ ಭದ್ರತೆ ಕೊಡಿ

ಚಿಕ್ಕಬಳ್ಳಾಪುರದಲ್ಲಿ ಭಯೋತ್ಪಾದಕರ ತಂಡ ಬಸನಗೌಡ ಪಾಟೀಲ್‌ ಯತ್ನಾಳ್‌, ಪ್ರತಾಪ್‌ ಸಿಂಹ ಹಾಗೂ ಸಿ.ಟಿ.ರವಿ ಅವರನ್ನು ಕೊಲೆ ಮಾಡಲು ಸ್ಕೆಚ್‌ ಹಾಕಿದ್ದರು. ಅದರಲ್ಲಿ ಒಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಇಂತಹವರ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ಈ ನಾಯಕರಿಗೆ ಸರ್ಕಾರದಿಂದ ಭದ್ರತೆ ನೀಡಬೇಕು.

- ಆರ್‌. ಅಶೋಕ್‌, ಪ್ರತಿಪಕ್ಷ ನಾಯಕ

--