Karnataka CM power sharing dispute: ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿವಾದದಲ್ಲಿ ಡಿಕೆ ಶಿವಕುಮಾರ್ ಪರ ಆದಿಚುಂಚನಗಿರಿ ಶ್ರೀಗಳು ಬ್ಯಾಟಿಂಗ್ ಮಾಡಿದ್ದಕ್ಕೆ ಕಾಗಿನೆಲೆ ಶಾಖಾ ಮಠದ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಹಾವೇರಿ (ನ.26): ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ವಿವಾದದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಹಾವೇರಿ ಜಿಲ್ಲೆಯ ಕಾಗಿನೆಲೆ ಶಾಖಾ ಮಠದ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶಿಸಿ ಗೊಂದಲ ಸೃಷ್ಟಿಸುವುದು ಯಾವುದೇ ಮಠಾಧೀಶರಿಗೂ ಸೂಕ್ತವಲ್ಲ ಎಂದಿದ್ದಾರೆ.

ಪಕ್ಷದ ವಿಚಾರದಲ್ಲಿ ಮಠಾಧೀಶರ ಮಧ್ಯಪ್ರವೇಶ ಸೂಕ್ತ ಅಲ್ಲ:

ಕಾಂಗ್ರೆಸ್ ಪಕ್ಷದ ನಾಯಕರು ಆಂತರಿಕವಾಗಿ ಚರ್ಚೆ ಮಾಡುತ್ತಿದ್ದಾರೆ. ಸೂಕ್ತ ಅಭಿಪ್ರಾಯ ತೆಗೆದುಕೊಂಡು ನಿರ್ಣಯ ಮಾಡುತ್ತಾರೆ. ಪಕ್ಷದ ವಿಚಾರಗಳಲ್ಲಿ ಮಧ್ಯಪ್ರವೇಶಿಸಿ ಗೊಂದಲ ಮಾಡೋದು ಯಾವ ಮಠಾಧೀಶರಿಗೂ ಸೂಕ್ತವಲ್ಲ ಎಂದು ಸಿದ್ದರಾಮನಂದ ಶ್ರೀಗಳು ಖಂಡಿಸಿದರು.

ಸಿದ್ದರಾಮಯ್ಯರ ಬಗ್ಗೆ ಕಾಗಿನೆಲೆ ಶ್ರೀಗಳು ಹೇಳಿದ್ದೇನು?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಕುರಿತು ಮಾತನಾಡಿದ ಶ್ರೀಗಳು, ನಾವು ಅವರನ್ನು ಕುರುಬ ಸಮುದಾಯದ ವ್ಯಕ್ತಿಯಾಗಿ ನೋಡುತ್ತಿಲ್ಲ, ಬದಲಿಗೆ ಅವರು ರಾಜ್ಯದ ಪ್ರತಿನಿಧಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ. ಅಲ್ಲದೆ, ಅವರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ ಎಂದರು.

ಮಠಾಧೀಶರು ಧಾರ್ಮಿಕ ಪ್ರತಿನಿಧಿಗಳಾಗಿರಬೇಕು:

ಮಠಾಧೀಶರು ಮೂಲತಃ ಧಾರ್ಮಿಕ ಪ್ರತಿನಿಧಿಗಳಾಗಿರಬೇಕು. ಆದರೆ, ಕೆಲವು ಮಠಾಧೀಶರು ತಮ್ಮ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳ ಜೊತೆಗೆ ಸ್ವಾರ್ಥ ಭಾವನೆ ಹೊಂದಿರುವ ಉದಾಹರಣೆಗಳನ್ನೂ ನಾವು ನೋಡಿದ್ದೇವೆ. ರಾಜ್ಯದಲ್ಲಿ ಹಲವಾರು ಸಮುದಾಯಗಳಿಗೆ ಇನ್ನೂ ಸೂಕ್ತ ನ್ಯಾಯ ಸಿಕ್ಕಿಲ್ಲ ಮತ್ತು ಹಲವು ಸಮುದಾಯಗಳು ಉನ್ನತ ಹುದ್ದೆಗಳ ಹಪಾಹಪಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಾವು ಅವಕಾಶ ಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಾವು ಸಿದ್ದರಾಮಯ್ಯ ಪರವಾಗಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸದಾ ಇರುತ್ತೇವೆ. ಸಾಮಾಜಿಕ ನ್ಯಾಯ ಕಾಪಾಡುವ ರಾಜಕಾರಣಿ ಬಂದರೆ ಅವರ ಜೊತೆಗೆ ನಮ್ಮ ಬೆಂಬಲವಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಕೊನೆಯದಾಗಿ, ನಿರ್ಮಲಾನಂದ ಶ್ರೀಗಳ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಸಿದ್ದರಾಮನಂದ ಶ್ರೀಗಳು, ಸ್ವಾಮೀಜಿಗಳು ಜಾತಿ ಹಿನ್ನೆಲೆಯಲ್ಲಿ ಮಾತನಾಡಬಾರದಿತ್ತು. ಅದು ಅವರ ಸ್ಥಾನಕ್ಕೆ ಒಳ್ಳೆಯದಲ್ಲ ಮತ್ತು ಇತರೆ ಸಮುದಾಯಗಳನ್ನು ಅವಮಾನಿಸಿದಂತೆ ಆಗುತ್ತದೆ ಎಂದು ಹೇಳಿ ತಮ್ಮ ಬೇಸರ ವ್ಯಕ್ತಪಡಿಸಿದರು.