ಭಕ್ತರ ಜಯಘೊಷದೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ಅಂಗವಾದ ಮಹಾರಥೋತ್ಸವದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಿದ್ದರು.

ಸುಬ್ರಹ್ಮಣ್ಯ (ನ.27): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ಅಂಗವಾದ ಮಹಾರಥೋತ್ಸವದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಿದ್ದರು. ದೇವರು ಬ್ರಹ್ಮರಥಾರೋಹಣರಾಗುವ ಕಾಲದಲ್ಲಿ ಉಪಸ್ಥಿತರಿದ್ದ ಸಚಿವರು ಭಕ್ತಿ ಭಾವದಿಂದ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿದರು. ಮಹಾರಥಕ್ಕೆ ತೆಂಗಿನ ಕಾಯಿ ಸಮರ್ಪಣೆ ಮಾಡಿ, ಮಂಗಳಾರತಿ ಸ್ವೀಕರಿಸಿದರು.

ಸಚಿವರ ಸರಳ ನಡೆ: ಬುಧವಾರ ಪ್ರಾತಃಕಾಲ ಆಗಮಿಸಿದ ಸಚಿವರು ದೇವರ ದರುಶನ ಪಡೆದರು.ಅವರಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಪ್ರಸಾದ ನೀಡಿದರು. ಬಳಿಕ ಶ್ರೀ ದೇವರು ಬ್ರಹ್ಮರಥೋತ್ಸವಕ್ಕೆ ತೆರಳುವ ಸಂದರ್ಭ ಉತ್ಸವದಲ್ಲಿ ಭಾಗಿಯಾದರು. ಸಹಸ್ರಾರು ಭಕ್ತರ ನಡುವೆ ತಾನೂ ಕೂಡಾ ಸಾಮಾನ್ಯ ಭಕ್ತನಂತೆ ಸರಳತೆಯಿಂದ ಶ್ರೀ ದೇವರ ಮಹಾರಥೋತ್ಸವವನ್ನು ಕಣ್ತುಂಬಿದರು. ಸಾಮಾನ್ಯರಂತೆ ಶ್ರೀ ದೇವಳದ ಜಗಲಿಯಲ್ಲಿ ಕುಳಿತು ದೇವರ ಪ್ರಾರ್ಥನೆ ಮಾಡಿದರು.

ಭಕ್ತರಿಗೆ ಬೇಕಾದ ಅನುಕೂಲತೆಗೆ ಸಿದ್ಧ: ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್ ಇಂಜಾಡಿ ಅವರಲ್ಲಿ ಮಾತನಾಡುತ್ತಾ, ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಬಂದು ದೇವರ ಆಶೀರ್ವಾದ ಪಡೆದು ಬದುಕಿನಲ್ಲಿ ಉನ್ನತಿಯನ್ನು ಸಾಧಿಸುತ್ತಿದ್ದಾರೆ.ಆದುದರಿಂದ ಭಕ್ತರಿಗೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ಮಾಡಲು ತಾನು ಸಿದ್ಧ ಎಂದರು.

ಬ್ರಹ್ಮರಥೋತ್ಸವ ಸಂಪನ್ನ

ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ಅಂಗವಾಗಿ ಬುಧವಾರ ಬ್ರಹ್ಮರಥೋತ್ಸವ ನೆರವೇರಿತು. ಭಕ್ತರ ಜಯಘೊಷದೊಂದಿಗೆ ಬುಧವಾರ ಬೆಳಗ್ಗೆ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೂಢರಾದರು. ಬಳಿಕ ಶ್ರೀ ದೇವರ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಸಹಸ್ರಾರು ಭಕ್ತರ ಜಯಘೋಷದ ಪರಾಕಿನ ನಡುವೆ ಶ್ರೀ ದೇವರ ಬ್ರಹ್ಮರಥೋತ್ಸವ ಸುಸಂಪನ್ನವಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉತ್ಸವದ ವೈದಿಕ ವಿದಿವಿಧಾನ ನೆರವೇರಿಸಿದರು.