ಜಿಲ್ಲೆಯ ಕಡೇಚೂರಿನಲ್ಲಿ ಇರುವ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಬಗ್ಗೆ ಸಮಗ್ರ ವರದಿ ಸಲ್ಲಿಸಲು ತಾಂತ್ರಿಕ ಸಮಿತಿಯನ್ನು 2024ರ ಡಿಸೆಂಬರ್‌ ನಲ್ಲಿ ರಚಿಸಲಾಗಿತ್ತು. 

ಆನಂದ್‌ ಎಂ. ಸೌದಿ

ಯಾದಗಿರಿ (ಏ.28): ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಲವು ಕಂಪನಿಗಳಿಂದ ಹೊರಸೂಸುತ್ತಿರುವ ಗಾಳಿ-ದುರ್ನಾತದಿಂದಾಗಿ ಅಲ್ಲಿನ ಪರಿಸರ- ಜೀವಸಂಕುಲದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿರುವ ಕುರಿತು ದೂರಿನ ಹಿನ್ನೆಲೆಯಲ್ಲಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ, ರಚಿತಗೊಂಡಿದ್ದ ತಾಂತ್ರಿಕ ಸಮಿತಿಯ ವರದಿಯಲ್ಲಿನ ಶಿಫಾರಸ್ಸುಗಳನ್ನೂ ಕಂಪನಿಗಳು ನಿರ್ಲಕ್ಷಿಸುತ್ತಿವೆಯೇ ? ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ ಇರುವ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಬಗ್ಗೆ ಸಮಗ್ರ ವರದಿ ಸಲ್ಲಿಸಲು ತಾಂತ್ರಿಕ ಸಮಿತಿಯನ್ನು 2024ರ ಡಿಸೆಂಬರ್‌ ನಲ್ಲಿ ರಚಿಸಲಾಗಿತ್ತು. 

ಈ ಕೈಗಾರಿಕಾ ಪ್ರದೇಶದಲ್ಲಿ ಔಷಧ ನಿರ್ಮಾಣ ಮತ್ತು ಇತರ ಕೈಗಾರಿಕೆಗಳಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಮತ್ತು ಗಾಳಿಗೆ ಮಾಲಿನ್ಯ ಉಂಟು ಮಾಡುತ್ತಿರುವುದಾಗಿ ಕೈಗಾರಿಕೆಗಳ ವಿರುದ್ಧ ದೂರುಗಳು ಬಂದಿದ್ದವು. ಈ ಮಾಲಿನ್ಯದ ಮೂಲಗಳನ್ನು ಹಾಗೂ ಮುಂದಿನ ದಿನಗಳಲ್ಲಿ ನೀರು ಮತ್ತು ಗಾಳಿ ಮಾಲಿನ್ಯವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ದಾವಣಗೆರೆ ಪ್ರಾದೇಶಿಕ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಮೇಶ ಡಿ. ನಾಯಕ್‌ ನೇತೃತ್ವದಲ್ಲಿ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್‌ ಹಾಗೂ ಚಿಕ್ಕೋಡಿ ವಿಭಾಗೀಯಕ ಕಚೇರಿಯ ಉಪ ಪರಿಸರ ಅಧಿಕಾರಿ ಹನುಮಂತಪ್ಪ ಅವರನ್ನೊಳಗೊಂಡ ತಂಡ ನಿಯೋಜಿತಗೊಂಡಿತ್ತು. 

ಇದನ್ನೂ ಓದಿ: Toxic Air: ರೈತರಿಗೆ ಸುಳ್ಳು ಹೇಳಿ ಭೂಮಿ ಪಡೆದ ಸರ್ಕಾರ: ವಿಳಂಬ ಏಕೆ?

ಈ ಸಮಿತಿಯು ಡಿಸೆಂಬರ್‌ 02, 2024 ರಿಂದ ಡಿಸೆಂಬರ್‌ 04, 2024ರವರೆಗೆ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ, ಕಂಡು ಬಂದ ನ್ಯೂನ್ಯತೆ ಹಾಗೂ ಶಿಫಾರಸ್ಸು ಒಳಗೊಂಡ 124 ಪುಟಗಳ ಮಹತ್ವದ ವರದಿ ಸಲ್ಲಿಸಿತ್ತು. ತಾಂತ್ರಿ ವರದಿಯಲ್ಲಿ ನಿಯಮಿತವಾಗಿ ಕೆಟ್ಟ ವಾಸನೆ ಕುರಿತು ಲಭಿಸುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತಿಳಿಸಲಾಗಿದೆ. ಕೈಗಾರಿಕಾ ಪ್ರದೇಶದ ಸಮೀಪದ ಗ್ರಾಮಸ್ಥರು ಮತ್ತು ಜಿಟಿಟಿಸಿಯಲ್ಲಿ (ತರಬೇತಿ ಕೇಂದ್ರ) ದ ವಿದ್ಯಾರ್ಥಿಗಳಿಂದಲೂ, ರಾಸಾಯನಿಕ ಘಟಕಗಳಿಂದ ಹೊರಸೂಸುವ ವಾಣಿಜ್ಯ ಅಳವಡಿಕೆಯಿಂದ ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ವಿಷಯಗಳ ಬಗ್ಗೆ ದೂರುಗಳ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ.

ನಿರಂತರ ದೂರು ಗಮನದಲ್ಲಿಟ್ಟುಕೊಂಡ ತಾಂತ್ರಿಕ ತಂಡ ನೀರು ಮತ್ತು ಗಾಳಿ ಮಾಲಿನ್ಯದ ದೃಷ್ಟಿಕೋನ ಗಮನದಲ್ಲಿರಿಸಿಕೊಂಡು ಪ್ರಮುಖವಾದ 21 ಕೈಗಾರಿಕೆಗಳನ್ನು ಪರಿಶೀಲನೆ ನಡೆಸಿದ್ದಾರಲ್ಲದೆ, ದೂರುದಾರರ ಜೊತೆಗೆ ಸಂವಾದ ನಡೆಸಿದೆ. ಅಲ್ಲಿನ ಕಾರ್ಯಚಟುವಟಿಕೆ, ಸೌಲಭ್ಯ, ನ್ಯೂನ್ಯತೆಗಳ ಬಗ್ಗೆ ಪ್ರತಿ ಕೈಗಾರಿಕೆ ಕುರಿತು ಸಮಗ್ರವಾಗಿ ವರದಿಸಿ, ಮಾಲಿನ್ಯ- ಜನಜೀವನದ ಮೇಲೆ ಅಡ್ಡ ಪರಿಣಾಮ ಬೀರುವಂತಹ ಚಟಿವಟಿಕೆ ನಿಲ್ಲಿಸುವಂತೆ, ಇದಕ್ಕೆ ಕಾನೂನುರೀತ್ಯ ಉಪಕರಣಗಳ ಬಳಕೆಗೆ ಶಿಫಾರಸ್ಸು ಸಲ್ಲಿಸಿದ್ದಾರೆ. ಹತ್ತಿರದ ನಿವಾಸಿಗಳು, ಕೈಗಾರಿಕೆ ಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ “ವೀಕ್ಷಕ ಸಮಿತಿ” ರಚಿಸುವ ಬಗ್ಗೆ ಸಲಹೆ ನೀಡಲಾಗಿದೆ. ಭೂಗತ ನೀರಿನ ಅಧ್ಯಯನವನ್ನು NGRI (ನ್ಯಾಶನಲ್‌ ಜಿಯೋಫಿಜಿಕಲ್‌ ರೀಸರ್ಚ್‌ ಇನ್ಸಟಿಸಟ್ಯೂಟ್‌) ಮುಂತಾದ ಖ್ಯಾತ ಸಂಸ್ಥೆಗಳ ಮೂಲಕ ನಡೆಸಬೇಕು ಎಂದು ಶಿಫಾರಸ್ಸಿನಲ್ಲಿದೆ.

ಇದನ್ನೂ ಓದಿ:ವಿಷಕಾರಿ ತ್ಯಾಜ್ಯ ಹಳ್ಳಕ್ಕೆ, ಅಲ್ಲಿಂದ ಭೀಮೆಯೊಡಲಿಗೆ: ಜನ-ಜಲ-ಜೀವನದ ಮೇಲೆ ದುಷ್ಪರಿಣಾಮ

"ಆದರೆ, ಬಹುತೇಕ ಕಂಪನಿಗಳು ಇವುಗಳನ್ನು ಪಾಲಿಸುತ್ತಿಲ್ಲ, ಪ್ರಭಾವಿಗಳ ಮೂಲಕ ಎಲ್ಲದಕ್ಕೂ ಅಡಚಣೆ ತರುತ್ತಿದ್ದಾರೆ. ನಿಯಮಿತ ತಪಾಸಣೆಗೆ ತೆರಳುವ ಸರ್ಕಾರದ ಹಿರಿಯ ಅಧಿಕಾರಿಗಳನ್ನೇ ಒಳಬಿಡುವುದಿಲ್ಲ. ತಮ್ಮದೇ ಹಕ್ಕು ಎಂಬಂತೆ ವರ್ತಿಸುತ್ತಾರೆ, ಕಾನೂನುಬಾಹಿರ ಚಟುವಟಿಕೆಗಳು ಬೆಳಕಿಗೆ ಬಾರದಂತಿರಲಿ ಎಂಬ ಕಾರಣಕ್ಕೆ, ತಪಾಸಣೆಗೂ ಕೂಡ ಸಹಕರಿಸುವುದಿಲ್ಲ." ಎಂದು ಕನ್ನಡಪ್ರಭಕ್ಕೆ ತಿಳಿಸಿದ ಹೆಸರೇಳಲಿಚ್ಛಿದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಇದು ಹೀಗೆ ಮುಂದವರೆದರೆ ಆತಂಕ ತಪ್ಪಿದ್ದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.