ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಜ.19]:  ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್‌ ಉಗ್ರ ಸಂಘಟನೆಗೆ ನೀರೆರೆದು ಪೋಷಿಸಲು ಯತ್ನಿಸಿದ್ದ ‘ಜಿಹಾದಿ ಗ್ಯಾಂಗ್‌’ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದು ತಮಿಳುನಾಡಿನ ಸೇಲಂನಲ್ಲಿ ನಕಲಿ ದಾಖಲೆ ನೀಡಿ ಖರೀದಿಸಿದ್ದ 10 ಸಿಮ್‌ಗಳಿಂದ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕಳೆದ 2019ರ ಏಪ್ರಿಲ್‌ನಲ್ಲಿ ಹಿಂದೂ ಮುಖಂಡ ಕೆ.ಪಿ.ಸುರೇಶ್‌ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಜಿಹಾದಿ ತಂಡದ ನಾಯಕ ಶಂಕಿತ ಉಗ್ರ ಖಾಜಾ ಮೊಯಿದ್ದೀನ್‌, ಕೆಲ ತಿಂಗಳು ಅಜ್ಞಾತವಾಗಿದ್ದ. ಹಳೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೆ ನಿಗೂಢವಾಗಿ ನಾಪತ್ತೆಯಾದ ಖಾಜಾ ಪತ್ತೆಗೆ ನ್ಯಾಯಾಲಯವು ಸೂಚಿಸಿತ್ತು. ಆಗ ಎಚ್ಚೆತ್ತ ತಮಿಳುನಾಡು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಖಾಜಾನ ಬೆನ್ನುಹತ್ತಿದಾಗ ಸೇಲಂನಲ್ಲಿ ಆತನ ಶಿಷ್ಯನೊಬ್ಬ ನಕಲಿ ದಾಖಲೆ ನೀಡಿ 10 ಸಿಮ್‌ ಖರೀದಿಸಿದ್ದು ಪತ್ತೆಯಾಗಿದೆ.

ಈ ಸಿಮ್‌ಗಳನ್ನು ಪರಿಶೀಲಿಸಿದಾಗ ಕೋಲಾರ, ಪಶ್ಚಿಮ ಬಂಗಾಳದ ಬದ್ರ್ವಾನ್‌ ಹಾಗೂ ಮುಂಬೈನಲ್ಲಿ ಅವು ಕಾರ್ಯನಿರ್ವಹಿಸಿದ್ದವು. ಇದರಿಂದ ಜಾಗ್ರತರಾದ ತಮಿಳುನಾಡು ಪೊಲೀಸರು, ಕೂಡಲೇ ಕರ್ನಾಟಕದ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಸಿಸಿಬಿಗೆ ಶಂಕಿತರ ಕುರಿತು ಮಾಹಿತಿ ನೀಡಿದ್ದರು. ಈ ಸುಳಿವು ಆಧರಿಸಿ ಐಎಸ್‌ಡಿ ಮತ್ತು ಸಿಸಿಬಿ ಕಾರ್ಯಾಚರಣೆಗಿಳಿದಾಗ ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ಮೆಹಬೂಬ್‌ ಪಾಷನ ಆಶ್ರಯದಲ್ಲಿದ್ದ ಶಂಕಿತರು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಏಪ್ರಿಲ್‌ನಿಂದಲೇ ಬೆಂಗಳೂರಿನಲ್ಲಿ ಚಟುವಟಿಕೆ:

ಹಿಂದೂ ಪರ ಸಂಘಟನೆ ನಾಯಕ ಸುರೇಶ್‌ ಕೊಲೆ ಪ್ರಕರಣದಲ್ಲಿ ಜಿಹಾದಿ ಗ್ಯಾಂಗ್‌ನ ಶಂಕಿತ ಉಗ್ರರಾದ ಖಾಜಾ ಮೊಯಿದ್ದೀನ್‌, ನವಾಜ್‌ ಅಲಿ ಹಾಗೂ ಸಮದ್‌ ಬಂಧಿತರಾಗಿದ್ದರು. 2019ರ ಏಪ್ರಿಲ್‌ನಲ್ಲಿ ಜಾಮೀನು ಪಡೆದು ಹೊರಬಂದ ಖಾಜಾ, ಕೆಲ ದಿನಗಳಲ್ಲೇ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಂಘಟನೆಯ ವಿದೇಶಿ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿದ್ದಾನೆ. ಇದೇ ವೇಳೆ 2014ರಲ್ಲಿ ತಮಿಳುನಾಡಿನ ಹಜಾ ಫಕ್ರುದ್ದೀನ್‌ ಎಂಬಾತನನ್ನು ಸಿರಿಯಾಗೆ ಕಳುಹಿಸಿದ ಆರೋಪದಲ್ಲಿ ಖಾಜಾ ವಿರುದ್ಧ ಎನ್‌ಐಎ ಆರೋಪ ಪಟ್ಟಿಸಲ್ಲಿಸಿತ್ತು. ಹೀಗಾಗಿ ಮೊದಲಿನಿಂದಲೂ ಐಸಿಸ್‌ ಜತೆ ನಂಟು ಹೊಂದಿದ್ದ ಖಾಜಾ, ಏಳೆಂಟು ತಿಂಗಳಿಂದ ಮಾತ್ರ ದಕ್ಷಿಣ ಭಾರತದಲ್ಲಿ ಸಂಘಟನೆ ಬಲಪಡಿಸಲು ವಿಶೇಷ ಆಸಕ್ತಿ ತೋರಿಸಿದ್ದ.

ಇದೇ ಉದ್ದೇಶದಿಂದ ಖಾಜಾ, ಕರ್ನಾಟಕದಲ್ಲೂ ಸಹ ತನ್ನ ತಂಡ ಕಟ್ಟಲು ಯತ್ನಿಸಿದ. ಆಗ ತನ್ನ ಹಳೆಯ ಗೆಳೆಯ ಬೆಂಗಳೂರಿನ ಗುರಪ್ಪನಪಾಳ್ಯದ ಸಿಮಿ ಸಂಘಟನೆಯ ಮಾಜಿ ಸದಸ್ಯನೊಬ್ಬನ ಮೂಲಕ ಕೋಲಾರದ ಸಲೀಂ ಖಾನ್‌ ಎಂಬುವನ ಪರಿಚಯ ಮಾಡಿಕೊಂಡಿದ್ದಾನೆ. ಅನಂತರ ಸಲೀಂ, ವಾರಿಗೆಯಲ್ಲಿ ತನ್ನ ಮಾವನಾದ ಸದ್ದುಗುಂಟೆಪಾಳ್ಯದ ಮೆಹಬೂಬ್‌ ಪಾಷಾನನ್ನು ಖಾಜಾನಿಗೆ ಪರಿಚಯಿಸಿದ್ದಾನೆ. ಖಾಜಾನ ಮೂಲಭೂತ ಮತ್ತು ಧಾರ್ಮಿಕ ವಿಚಾರಗಳಿಂದ ಪ್ರಭಾವಿತನಾದ ಪಾಷಾ, ಐಸಿಸ್‌ ಕಟ್ಟಲು ಶ್ರಮಿಸುವುದಾಗಿ ಹೇಳಿದ. ಆಗಲೇ ಸದ್ದುಗುಂಟೆಪಾಳ್ಯದಲ್ಲಿ ‘ಅಲ್‌ ಹಿಂದ್‌’ ಎಂಬ ಟ್ರಸ್ಟ್‌ ರಚನೆಯಾಗಿದೆ. ಇದರ ಮೂಲಕ ಐಸಿಸ್‌ಗೆ ಹೊಸ ಸದಸ್ಯರ ನೇಮಕಾತಿಗೆ ಚಾಲನೆ ಸಹ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ಅಣ್ಣನ ಮಕ್ಕಳಿಗೆ ಬೋಧನೆ ಮಾಡಿದ ಪಾಷಾ:

ಟ್ರಸ್ಟ್‌ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಪಾಷಾ, ಮುಸ್ಲಿಂ ಸಮುದಾಯದ ಯುವಕರಿಗೆ ಮೂಲಭೂತವಾದದ ಬೋಧನೆ ಮಾಡುತ್ತಿದ್ದ. ಹೀಗೆ ಕೊನೆಗೆ ತನ್ನ ಅಣ್ಣನ ಮಕ್ಕಳಾದ ಕಾರು ಚಾಲಕ ಮೊಹಮ್ಮದ್‌ ಮನ್ಸೂರ್‌ ಹಾಗೂ ಏಜಾಜ್‌ ಪಾಷಾನಿಗೆ ಮೈಂಡ್‌ ವಾಶ್‌ ಮಾಡಿದ ಆತ, ಬಳಿಕ ಬೆಂಗಳೂರಿನ ನಾಯಂಡಹಳ್ಳಿಯ ಇಮ್ರಾನ್‌ ಖಾನ್‌, ಗುರಪ್ಪನಪಾಳ್ಯದ ಮೊಹಮ್ಮದ್‌ ಹನೀಫ್‌, ಸಾಫ್ಟ್‌ವೇರ್‌ ಉದ್ಯೋಗಿ ಮೊಹಮ್ಮದ್‌ ಜಹೀದ್‌, ಹುಸೇನ್‌, ಚನ್ನಪಟ್ಟಣದ ಅನೀಸ್‌, ರಾಮನಗರದ ಅಜರ್‌ ಪಾಷಾ, ಜಬೀವುಲ್ಲಾ ಹಾಗೂ ಮುಸಾವೀರ್‌ ಹುಸೈನ್‌ನನ್ನು ಸಂಘಟನೆಗೆ ನೇಮಿಸಿಕೊಂಡಿದ್ದ. ಗುಂಡ್ಲುಪೇಟೆ ತಾಲೂಕಿನಲ್ಲಿ ತಂಡದ ಹೊಸ ಸದಸ್ಯರಿಗೆ ತರಬೇತಿ ಸಲುವಾಗಿ ಟ್ರೇನಿಂಗ್‌ ಕ್ಯಾಂಪ್‌ ಸ್ಥಾಪನೆಗೆ ಸುಮಾರು 10ರಿಂದ 30 ಎಕರೆ ಜಮೀನು ಖರೀದಿಗೆ ಮನ್ಸೂರ್‌ನನ್ನು ನಿಯೋಜಿಸಿದ್ದ. ಇತ್ತ ನಿರಂತರವಾಗಿ ಖಾಜಾ ಜೊತೆ ಪಾಷಾಗೆ ಸಂಪರ್ಕವಿತ್ತು ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯ ಐಸಿಸ್‌ ಬಾಸ್‌ನ ಇಬ್ಬರು ಸಹಚರರು ಅರೆಸ್ಟ್...

ನಂತರ ಖಾಜಾ ಸೂಚನೆ ಮೇರೆಗೆ ಪಾಷಾ, ತಮಿಳುನಾಡಿನ ಅಬ್ದುಲ್‌ ಸಮದ್‌, ತೌಸೀಫ್‌, ಸೈಯದ್‌ ಅಲಿ ನವಾಜ್‌, ಜಾಫರ್‌ ಅಲಿ, ಅಬ್ದುಲ್‌ ಶಮೀಮ್‌ ಜತೆ ಸಂಪರ್ಕ ಬೆಳೆಸಿದ್ದ. ಬಂಧನ ಭೀತಿಗೊಳಗಾಗಿದ್ದ ಖಾಜಾನ ಸಹಚರರಿಗೆ ಬೆಂಗಳೂರಿನಲ್ಲಿ ಪಾಷಾ ಆಶ್ರಯ ಕಲ್ಪಿಸಿದ್ದ.

ಕೋರ್ಟ್‌ಗೆ ಗೈರು, 10 ಸಿಮ್‌ಗಳು:

ಸುರೇಶ್‌ ಕೊಲೆ ಪ್ರಕರಣದ ವಿಚಾರಣೆಗೆ ಖಾಜಾ ಹಾಗೂ ಆತನ ಸಹಚರರು ಗೈರಾಗಿದ್ದರು. ಆಗ ನ್ಯಾಯಾಲಯವು ಆರೋಪಿಗಳನ್ನು ಪತ್ತೆಹಚ್ಚುವಂತೆ ಜಾಮೀನುರಹಿತ ವಾರಂಟ್‌ ಜಾರಿಗೊಳಿಸಿತು. ಅಷ್ಟರಲ್ಲಿ ಖಾಜಾ ಮೇಲೆ ಶಂಕೆಗೊಂಡಿದ್ದ ತನಿಖಾ ಸಂಸ್ಥೆಗಳಿಗೆ ಆತನ ನಿಗೂಢ ಓಡಾಟ ಮತ್ತಷ್ಟುಯೋಚಿಸುವಂತೆ ಮಾಡಿತು. ಆಗಲೇ ಖಾಜಾ ಏನೋ ಸಂಚು ಮಾಡಿದ್ದಾನೆ ಎಂಬ ಬಲವಾದ ಶಂಕೆ ಮೂಡಿದೆ.

ಕೂಡಲೇ ಆತನ ಬೆನ್ನುಹತ್ತಿದಾಗ ಸೇಲಂ ನಗರದಲ್ಲಿ ನಕಲಿ ದಾಖಲೆ ಸಲ್ಲಿಸಿ ಪಡೆದ 10 ಸಿಮ್‌ಗಳು ಆ್ಯಕ್ಟಿವ್‌ ಆಗಿರುವುದು ಗೊತ್ತಾಗಿದೆ. ಅವುಗಳಲ್ಲಿ ಕೆಲವು ಡಿ.15ರಿಂದ 22 ವರೆಗೆ ಪಶ್ಚಿಮ ಬಂಗಾಳ, ಕೋಲಾರ ಹಾಗೂ ಮುಂಬೈನಲ್ಲಿ ಆಕ್ಟಿವ್‌ ಆಗಿ ಬಳಿಕ ಸ್ಥಗಿತವಾಗಿದ್ದವು. ಈ ಸುಳಿವು ಬೆನ್ನುಹತ್ತಿದ ತಮಿಳುನಾಡು ಪೊಲೀಸರು, ಸಿಸಿಬಿ ನೆರವಿನಲ್ಲಿ ಜ.8ರಂದು ಇಮ್ರಾನ್‌ ಖಾನ್‌, ಏಜಾಜ್‌ ಪಾಷಾ ಹಾಗೂ ಹನೀಫ್‌ನನ್ನು ಬೆಂಗಳೂರಿನ ಗುರುಪ್ಪನಪಾಳ್ಯದಲ್ಲಿ ಬಂಧಿಸಿದ್ದರು. ಇದಕ್ಕೂ ಮುನ್ನ ಖಾಜಾ, ನವಾಜ್‌ ಅಲಿ ಹಾಗೂ ಸಮದ್‌ ಅವರನ್ನು ಹನೀಫ್‌ ಹಾಗೂ ಇಮ್ರಾನ್‌ ಇನ್ನೋವಾದಲ್ಲಿ ಕರೆದುಕೊಂಡು ಹೋಗಿ ಪಶ್ಚಿಮ ಬಂಗಾಳದ ಬದ್ರ್ವಾನ್‌ ತಲುಪಿಸಿದ್ದರು. ಅಲ್ಲೇ ಒಂದು ಸಿಮ್‌ ಸ್ತಬ್ಧವಾಗಿದೆ. ಕೊನೆಗೆ ದೆಹಲಿ ಪೊಲೀಸರು ಖಾಜಾ ಹಾಗೂ ಆತನ ಮೂವರು ಸಹಚರರನ್ನು ಸೆರೆ ಹಿಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಪಿಸ್ತೂಲ್‌ ತಂದು ಮಾಮುಗೆ ಕೊಟ್ಟೆ’

ಮುಂಬೈ ನಗರದಲ್ಲಿ ಕಾರ್ಯಸ್ಥಗಿತವಾಗಿದ್ದ ಸಿಮ್‌ ಶೋಧಿಸಿದಾಗ ಬಸ್‌ ಚಾಲಕ ಏಜಾಜ್‌ ಪಾಷಾ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಬೆಂಗಳೂರಿಗೆ ಪಿಸ್ತೂಲ್‌ ಹಾಗೂ 24 ಜೀವಂತ ಗುಂಡುಗಳನ್ನು ತಂದಿದ್ದಾಗಿ ಒಪ್ಪಿದ್ದಾನೆ. ಮುಂಬೈನಿಂದ ತಂದ ಪಿಸ್ತೂಲ್‌ ಹಾಗೂ ಗುಂಡುಗಳನ್ನು ಕೆ.ಆರ್‌.ಮಾರ್ಕೆಟ್‌ ಸಮೀಪ ಮಾಮುಗೆ ತಲುಪಿಸಿದೆ. ನನಗೆ ವಹಿಸಿದ್ದ ಕೆಲಸ ಇಷ್ಟೇ. ಇದಕ್ಕಿಂತ ಬೇರೆ ಸಂಗತಿಗಳು ಗೊತ್ತಿಲ್ಲ ಎಂದಿದ್ದಾನೆ. ಮಾಮು ಅಂತ ಕರೆಯಬೇಕಾದರೆ ಆ ವ್ಯಕ್ತಿ ಏಜಾಜ್‌ಗೆ ಆತ್ಮೀಯ ಒಡನಾಟದಲ್ಲಿರಬೇಕು ಎಂದು ಅಂದಾಜಿಸಿದ ಪೊಲೀಸರು, ಆ ವ್ಯಕ್ತಿಯ ಮೂಲ ಕೆದಕಿದಾಗ ಆತ ಮೆಹಬೂಬ್‌ ಪಾಷಾ ಎಂಬುದು ಬಯಲಾಗಿದೆ ಎಂದು ಮೂಲಗಳು ಹೇಳಿವೆ.

ಟೆಕ್ಕಿ ಲ್ಯಾಪ್‌ಟಾಪ್‌ನಲ್ಲಿ ರಹಸ್ಯ

ಈಗ ಸಿಕ್ಕಿಬಿದ್ದಿರುವ ಜಿಹಾದ್‌ ಗ್ಯಾಂಗ್‌ನಲ್ಲಿ ಕೋಲಾರದ ಜಹೀದ್‌ ಸಾಫ್ಟ್‌ವೇರ್‌ ಉದ್ಯೋಗಿ. ಆತನ ಲ್ಯಾಪ್‌ಟಾಪ್‌ನಲ್ಲೇ ಪಾಷಾ ತಂಡವು ಐಸಿಸ್‌ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಕುರಿತು ಸಂವಹನ ನಡೆಸಿದೆ. ಇದರಲ್ಲೇ ಸಂಘಟನೆಗೆ ಸಂಬಂಧಿಸಿದ ಮಹತ್ವದ ರಹಸ್ಯ ಮಾಹಿತಿಗಳು ಲಭಿಸಿವೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?

ದಕ್ಷಿಣ ಭಾರತದಲ್ಲಿ ಐಸಿಸ್‌ ಉಗ್ರ ಸಂಘಟನೆ ಬೆಳೆಸಲು ಹೊರಟ ತಮಿಳುನಾಡಿನ ಖಾಜಾ ಮೊಯಿದ್ದೀನ್‌ ಎಂಬಾತನ ಪ್ರಕರಣವಿದು. ಉಗ್ರ ಸಂಘಟನೆ ಬಲಗೊಳಿಸುವುದಷ್ಟೇ ಅಲ್ಲದೆ, ದೇಶಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ಹೂಡಿದ ಶಂಕೆಯ ಮೇರೆಗೆ ಕಳೆದ 10-12 ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ 18 ಶಂಕಿತ ಉಗ್ರರ ಬಂಧನವಾಗಿದೆ. ‘ಜಿಹಾದಿ ಗ್ಯಾಂಗ್‌’ ಎಂದೇ ಬಣ್ಣಿಸಲಾಗಿರುವ ಈ ತಂಡಕ್ಕೆ ಮೊಯಿದ್ದೀನ್‌ ನೇತೃತ್ವವಿದ್ದರೆ, ಬೆಂಗಳೂರಿನ ಮೆಹಬೂಬ್‌ ಪಾಷಾ ಎಂಬಾತ ಕರ್ನಾಟಕದಲ್ಲಿ ಈ ತಂಡದ ನೇತೃತ್ವ ವಹಿಸಿದ್ದ. ಇದೀಗ ಇವರೆಲ್ಲ ತನಿಖಾ ಸಂಸ್ಥೆಗಳ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.