ಬೆಂಗಳೂರು [ಜ.18]: ರಾಜ್ಯದ ಐಸಿಸ್‌ ಸಂಘಟನೆಯ ಕಮಾಂಡರ್‌ ಮೆಹಬೂಬ್‌ ಪಾಷಾ ಸೆರೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಆತನ ಮತ್ತಿಬ್ಬರು ಸಹಚರರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ನಡೆಸಿದ ಜಂಟಿ ಕಾರ್ಯಾಚರಣೆಯ ಬಲೆಗೆ ಬಿದ್ದಿದ್ದಾರೆ.

ಗುರಪ್ಪನಪಾಳ್ಯದ ಜಬೀವುಲ್ಲಾ ಹಾಗೂ ಕೋಲಾರದ ಸಲೀಂ ಖಾನ್‌ ಬಂಧಿತರಾಗಿದ್ದು, ಮೆಹಬೂಬ್‌ ಪಾಷಾನ ಸೂಚನೆ ಮೇರೆಗೆ ಐಸಿಸ್‌ ಸಂಘಟನೆಯಲ್ಲಿ ಅವರು ತೊಡಗಿದ್ದರು. ಅಲ್ಲದೆ ಈ ಇಬ್ಬರು ಪಾಷಾನ ಸಂಬಂಧಿಕರು ಎನ್ನಲಾಗಿದೆ. ಇತ್ತೀಚೆಗೆ ಬಂಧನ ಭೀತಿಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಅವರನ್ನು ಖೆಡ್ಡಾಕ್ಕೆ ಕೆಡಹುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ.

ಶುಕ್ರವಾರ ಮೆಹಬೂಬ್‌ ಪಾಷಾ, ಮೊಹಮ್ಮದ್‌ ಮನ್ಸೂರ್‌, ಜಬೀವುಲ್ಲಾ ಹಾಗೂ ಸಲೀಂ ಖಾನ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು, ಹೆಚ್ಚಿನ ವಿಚಾರಣೆಗೆ ಸಲುವಾಗಿ 10 ದಿನಗಳ ವಶಕ್ಕೆ ಪಡೆದಿದ್ದಾರೆ.

ಖಾಜಾಗೆ ಪರಿಚಯಿಸಿದ್ದು ಸಲೀಂ:

ಮೆಹಬೂಬ್‌ ಪಾಷಾನನ್ನು ದಕ್ಷಿಣ ಭಾರತದಲ್ಲಿ ಐಸಿಸ್‌ ಸಂಘಟಿಸುತ್ತಿದ್ದ ಖಾಜಾ ಮೊಯಿದ್ದೀನ್‌ಗೆ ಪರಿಚಯಿಸಿದ್ದೇ ಸಲೀಂ ಖಾನ್‌ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಐಸಿಸ್‌ ಸಂಘಟನೆ ಬಲವರ್ಧನೆ ಸಲುವಾಗಿ ಸದ್ದುಗುಂಟೆಪಾಳ್ಯದಲ್ಲಿ ಮೆಹಬೂಬ್‌ ಪಾಷಾ ಸ್ಥಾಪಿಸಿದ್ದ ಟ್ರಸ್ಟ್‌ನಲ್ಲಿ ಜಬೀವುಲ್ಲಾ ಮತ್ತು ಸಲೀಂ ಖಾನ್‌ ಸಕ್ರಿಯವಾಗಿದ್ದರು. ಈ ಟ್ರಸ್ಟ್‌ನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಕರನ್ನು ಸೆಳೆಯಲು ಅವರು ಹೆಚ್ಚಿನ ಅಸಕ್ತಿ ವಹಿಸಿ ಕೆಲಸ ಮಾಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಪಾಷಾ ಮನೆಯಲ್ಲಿ ಖಾಜಾ ಮೊಯಿದ್ದೀನ್‌ ನಡೆಸಿದ್ದ ಸಭೆಗಳಲ್ಲಿ ಸಹ ಅವರು ಪಾಲ್ಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಸೂಲಿಬೆಲೆ-ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್: 'ಪೊಲೀಸ್ ಕಮಿಷನರ್ ಆರೋಪ ಸುಳ್ಳು'...

ತಮಿಳುನಾಡು, ದೆಹಲಿ, ಕರ್ನಾಟಕ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಸಹಕಾರದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯ ಮತ್ತು ದೇಶದ ಭದ್ರತೆ ವಿಚಾರವಾಗಿದ್ದು, ಇನ್ನೆರಡು ದಿನಗಳಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿ ನೀಡುತ್ತೇನೆ.

- ಭಾಸ್ಕರ್‌ ರಾವ್‌, ಬೆಂಗಳೂರು ಪೊಲೀಸ್‌ ಆಯುಕ್ತ